ಜಿಲ್ಲೆ

ರಸ್ತೆ ಕಾಮಗಾರಿ ಮಾಡಿಸುವಲ್ಲಿ ಶಾಸಕ ಯಶಸ್ವಿ: ವಿರೋಧಕ್ಕೆ ತಲೆಕೆಡಿಸಿಕೊಳ್ಳದ ರವಿಕುಮಾರ್ ಗಣಿಗ

ಕೆ.ಎನ್.ರಾಘವೇಂದ್ರ

ಮಂಡ್ಯ: ಎಂಟು ವರ್ಷದಿಂದ ನನೆಗುದಿಗೆ ಬಿದ್ದಿದ್ದ ಮಂಡ್ಯ-ಕೌಡ್ಲೆ ಹೆದ್ದಾರಿ ಕಾಮಗಾರಿಗೆ ನಗರದ ಕಾರೇಮನೆ ಗೇಟ್‌ನಲ್ಲಿ ಮತ್ತೆ ಅಡ್ಡಿಯುಂಟಾದರೂ ಪಟ್ಟು ಬಿಡದ ಶಾಸಕ ರವಿಕುಮಾರ್ ಗಣಿಗ, ಜನರಿಗೆ ಸಮಸ್ಯೆಯಾಗಿದ್ದ ಗುಂಡಿಯನ್ನು ಮುಚ್ಚಿಸಿ ರಸ್ತೆ ಮಾಡುವಲ್ಲಿ ಯಶಸ್ವಿಯಾದರು.

2015ರಲ್ಲಿ ಪ್ರಾರಂಭವಾಗಿದ್ದ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ಕೆಲವರು ಹೆಚ್ಚಿನ ಪರಿಹಾರಕ್ಕಾಗಿ ಪಟ್ಟುಹಿಡಿದಿದ್ದರು. ಇದರಿಂದಾಗಿ ಹಲವೆಡೆ ಕಾಮಗಾರಿ ಅಪೂರ್ಣಗೊಂಡಿದೆ. ಇದರಲ್ಲಿ ಕಾರೇಮನೆ ಗೇಟ್ ಕೂಡ ಒಂದು. ಎಂಟು ವರ್ಷದಿಂದ ವಾಹನಗಳ ಸಂಚಾರದಿಂದ ಗುಂಡಿಗಳ ಆಗರವಾಗಿತ್ತು.ಹಾಳಾದ ರಸ್ತೆಯಿಂದ ಸಮಸ್ಯೆಯಾಗುವುದರ ಜತೆಗೆ ಹಲವು ಬಾರಿ ಜನರು ಬಿದ್ದು ಗಾಯಗೊಂಡಿರುವ ಉದಾಹರಣೆಗಳಿದ್ದವು. ಈ ಹಿನ್ನೆಲೆಯಲ್ಲಿ ಜನರು ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿ 11 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಮಾಡಲು ಕಳೆದ ವಾರ ಸಚಿವ ಚಲುವರಾಯಸ್ವಾಮಿ ಹಾಗೂ ಶಾಸಕ ರವಿಕುಮಾರ್ ಗಣಿಗ ಚಾಲನೆ ನೀಡಿದ್ದರು.

ಕಾರೇಮನೆ ಗೇಟ್ ಬಳಿ ಕಾಮಗಾರಿ ಪ್ರಾರಂಭವಾಗುತ್ತಿದ್ದಂತೆ ಕೆಲವರು ವಿರೋಧ ವ್ಯಕ್ತಪಡಿಸಿದರು. ಆದರೆ ಇದಕ್ಕೆ ಶಾಸಕರು ಆಕ್ಷೇಪಿಸಿದರು. ಈಗಾಗಲೇ ಪರಿಹಾರ ಪಡೆದು ಮತ್ತೆ ಅಡ್ಡಿಪಡಿಸುವಂತಿಲ್ಲ ಎಂದು ಎಚ್ಚರಿಕೆ ನೀಡಿದರು. ಈ ಬಗ್ಗೆ ಸುಮಾರು ಹೊತ್ತು ವಾಗ್ವಾದ ನಡೆಯಿತು. ಅಂತಿಮವಾಗಿ ಶಾಸಕರ ಸಮ್ಮುಖದಲ್ಲಿ ರಸ್ತೆ ಕೆಲಸವನ್ನು ಪ್ರಾರಂಭಿಸಲಾಯಿತು. ಗುಂಡಿಗೆ ಮಣ್ಣು ಮುಚ್ಚಿಸಲಾಯಿತು. ಮತ್ತೆ ಸಮಸ್ಯೆಯಾಗಬಾರದೆಂದು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಯಿತು. ಇದರೊಂದಿಗೆ ರಸ್ತೆಯಲ್ಲಿ ಹರಸಾಹಸ ಪಡುತ್ತಿದ್ದ ಜನರು ನಿಟ್ಟುಸಿರು ಬಿಡುವಂತಾಗಿದೆ.