ಕಡೂರು: ಪಟ್ಟಣದ ಮುಖ್ಯ ರಸ್ತೆಯಲ್ಲಿ ವಾಹನಗಳ ಸಂಚಾರ ದಟ್ಟಣೆ ನಿಯಂತ್ರಿಸಲು ಪುರಸಭೆಯಿಂದ 19.50 ಲಕ್ಷ ವೆಚ್ಚದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.
ಪುರಸಭೆ ಅಧಿಕಾರಿಗಳೊಂದಿಗೆ ಪಟ್ಟಣದ ಗಣಪತಿ-ಆಂಜನೇಯ ಸ್ವಾಮಿ ದೇವಸ್ಥಾನದಿಂದ ಜೀವನ್ ಆಸ್ಪತ್ರೆವರೆಗಿನ ರಸ್ತೆ ಅಗಲೀಕರಣಕ್ಕಾಗಿ ಸ್ಥಳ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಪುರಸಭೆಯಿಂದ ಕೆಎಲ್‌ವಿ ವೃತ್ತದ ಸಮೀಪ ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಮುಂದುವರಿದ ಭಾಗವಾಗಿ ಮಳೆ ನೀರು ಮತ್ತು ಚರಂಡಿ ನೀರು ರಸ್ತೆಯಲ್ಲಿ ಸಂಗ್ರಹಗೊಂಡ ಪಾದಚಾರಿಗಳಿಗೆ ಸಮಸ್ಯೆಯಾಗುತ್ತಿರುವ ಹಿನ್ನಲೆಯಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಇದರಿಂದ ವಾಹನದಟ್ಟಣೆ ಜತೆಗೆ ಪಾದಾಚಾರಿಗಳಿಗೂ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಂತಾಗಲಿದೆ ಎಂದರು.
ಪುರಸಭೆ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರ ನಿರ್ಣಯದೊಂದಿಗೆ ಪುರಸಭೆ ನಿಧಿಯ ಅನುದಾನಡಿ ಚರಂಡಿ ಹಾಗೂ ರಸ್ತೆ ಅಗಲೀಕರಣ ಕಾಮಗಾರಿ ನಡೆಸಲಾಗುತ್ತಿದೆ. ಇದಕ್ಕೆ ಈ ಭಾಗದ ಅಂಗಡಿ ಮಾಲೀಕರು ಮತ್ತು ವರ್ತಕರು ಕೈಜೋಡಿಸುತ್ತಿರುವುದು ಶ್ಲಾಘನೀಯ. ರಸ್ತೆ ಅಗಲೀಕರಣದ ಜತೆಗೆ ವಿದ್ಯುತ್ ಕಂಬಗಳ ಸ್ಥಳಾಂತರಿಸುವ ಪ್ರಕ್ರಿಯೆಯೂ ನಡೆಯಲಿದೆ.ಗುಣಮಟ್ಟದ ಚರಂಡಿ ನಿರ್ಮಾಣಕ್ಕೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.
ಈಗಾಗಲೇ ನಿರೀಕ್ಷೆಗೂ ಮೀರಿ ಪಟ್ಟಣದ ಜನತೆ ಕಂದಾಯ ಪಾವತಿ ಮಾಡುತ್ತಿದ್ದಾರೆ. ಸರ್ಕಾರದ ನಿಗದಿತ ಅವಧಿಯಲ್ಲಿ ಕಂದಾಯ ಪಾವತಿಸಿದರೆ ಶೇ.5ರಷ್ಟು ರಿಯಾಯಿತಿ ಅವಧಿಯನ್ನು ಜೂ.30ರ ವರೆಗೂ ವಿಸ್ತರಿಸಲಾಗಿದೆ. ಕಂದಾಯ ಪಾವತಿಸದ ವಾಣಿಜ್ಯ ಮಳಿಗೆಗಳು ಮತ್ತು ನಿವೇಶನದ ಪಾವತಿದಾರರು ಸಕಾಲದಲ್ಲಿ ಕಂದಾಯ ಪಾವತಿಸಿ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.