ಜಿಲ್ಲೆ

ರಸ್ತೆ ಅಧ್ವಾನ ಪ್ರಯಾಣ ಹೈರಾಣ

ಕೋಲಾರ ಡೆಸ್ಕ್

ಅನಂತ್​ ಕದರೀಪುರ: ಕೋಲಾರ ತಾಲೂಕು ಮದ್ದೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿ ಗ್ರಾಮಗಳಾದ ಕದರೀಪುರ, ದೇವರಹಳ್ಳಿ, ಇರಗಸಂದ್ರ, ಸೀತಪನಹಳ್ಳಿ, ಪಚ್ಚಾರ್ಲಹಳ್ಳಿ, ಪಿಂಡಿಪಾಪನಹಳ್ಳಿ, ಬೆದ್ಲಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಾಲು ಸಾಲು ಗುಂಡಿಗಳು ಬಿದ್ದು, ಸಂಚಾರಕ್ಕೆ ಪರದಾಡುವಂತಾಗಿದೆ.

3 ದಶಕಗಳ ಹಿಂದೆ ಮಾಜಿ ಸಚಿವ ದಿ.ಸಿ.ಬೈರೇಗೌಡ ಮತ್ತು ಮದ್ದೇರಿ ಎಸ್​.ರಾಮೇಗೌಡ, ಇರಗಸಂದ್ರ ಮತ್ತು ಮದ್ದೇರಿ ರೈತರಿಗೆ ತೊಂದರೆಯಾಗದಿರಲಿ ಎಂದು ಜಮೀನುಗಳ ಸಂಪರ್ಕಕ್ಕಾಗಿ ಜಲ್ಲಿಕಲ್ಲು ಮತ್ತು ಮಣ್ಣು ಹಾಕಿ ರಸ್ತೆ ನಿರ್ಮಿಸಿದ್ದು ಬಿಟ್ಟರೆ, ಇಲ್ಲಿಯವರೆಗೆ ಯಾವುದೇ ಪ್ರಗತಿ ಕಂಡಿಲ್ಲ. ಆದ್ದರಿಂದ ಅಧ್ವಾನಗೊಂಡ ರಸ್ತೆಯಲ್ಲಿ ಗುಂಡಿ ಬಿದ್ದಿದ್ದು, ಮಳೆ ಬಂದಾಗ ಗುಂಡಿ ಯಾವುದು ರಸ್ತೆ ಯಾವುದು ಎಂದು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ.

ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಮಾರ್ಗವು ಸಂಪೂರ್ಣ ಕೆಸರು ಗದ್ದೆಯಂತಾಗಿದೆ. ಬಿಸಿಲು ಬಿದ್ದರೆ ಕೆಸರು ಒಣಗಿ ರಸ್ತೆ ಪೂರ್ತಿ ಧೂಳು ಎದ್ದು ಬೈಕ್​ ಸವಾರರಿಗೆ ಮತ್ತು ಸುತ್ತಮುತ್ತಲಿನ ರೈತರ ಬೆಳೆಗಳಿಗೆ ತೊಂದರೆಯನ್ನುಂಟು ಮಾಡುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಏಳೆಂಟು ಗ್ರಾಮಸ್ಥರು ಇದೇ ರಸ್ತೆಯನ್ನು ಬಳಸುವ ಅನಿವಾರ್ಯತೆ ಇದೆ. ಶಾಲೆ-ಕಾಲೇಜು, ಕಚೇರಿ ಕೆಲಸ ಹಾಗೂ ವ್ಯಾಪಾರ-ವಹಿವಾಟುಗಳಿಗೆ ಬರುವ ರೈತರು, ವಿದ್ಯಾರ್ಥಿಗಳಿಗೆ ಸಾರಿಗೆ ಸಂಪರ್ಕವಿಲ್ಲದೆ, ಕಾಲ್ನಡಿಗೆಯಲ್ಲೆ ಓಡಾಡುವ ದುಸ್ಥಿತಿ ಎದುರಾಗಿದೆ.

ಈ ಬಗ್ಗೆ ಸಂಬಂಧಿಸಿದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾರೊಬ್ಬರೂ ಗಮನಹರಿಸುತ್ತಿಲ್ಲ. ಇನ್ನಾದರೂ ಆದಷ್ಟು ಬೇಗ ಡಾಂಬರ್​ ರಸ್ತೆ ನಿರ್ಮಿಸಿ ಗಡಿ ಭಾಗದ ಸಾರ್ವಜನಿಕರಿಗೆ ಸುಗಮ ಸಂಚಾರ ಮತ್ತು ಸಾರಿಗೆ ಬಸ್​ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ರೈತರು ಮತ್ತು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕದರೀಪುರ ಸುತ್ತಮುತ್ತಲಿನ ಜನರು ಕೋಲಾರ-ಚಿಕ್ಕಬಳ್ಳಾಪುರ ಗಡಿ ಭಾಗದಲ್ಲಿದ್ದು, ಅನರಸ್ಥರು, ಕಡುಬಡವರು ಮತ್ತು ದಿನಗೂಲಿ ಮಾಡಿ ಜೀವನ ಸಾಗಿಸುವರೇ ಹೆಚ್ಚಾಗಿದ್ದಾರೆ. ಮದ್ದೇರಿ ಮತ್ತು ವೇಮಗಲ್​ಗೆ ಯಾವುದೇ ರೀತಿಯ ಸಾರಿಗೆ ಸಂಪರ್ಕವಿಲ್ಲ ಮತ್ತು ಇರಗಸಂದ್ರ ಗ್ರಾಮದಿಂದ ಮದ್ದೇರಿಗೆ 2.5 ಕಿಮೀ ಇದ್ದು, ಜಲ್ಲಿ ಕಲ್ಲು ಮತ್ತು ಮಣ್ಣಿನ ರಸ್ತೆಯಿಂದ ಮುಕ್ತಿಗೊಳಿಸಿ, ಡಾಂಬರೀಕರಣ ಮಾಡಬೇಕಿದೆ. > ವಿ.ಮಂಜುನಾಥ್​ ಕದರೀಪುರ ಗ್ರಾಮಸ್ಥ ಮದ್ದೇರಿ ರೈತರು ಹೊರವಲಯದ ಇರಗಸಂದ್ರ ಮಾರ್ಗದಲ್ಲಿ ಜಮೀನು ಹೊಂದಿದ್ದು, 3 ದಶಕಗಳಿಂದ ಜಲ್ಲಿ ಕಲ್ಲು ಮತ್ತು ಮಣ್ಣ್ಣಿನಿಂದ ನಿರ್ಮಿತವಾಗಿರುವ ರಸ್ತೆ ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗಿ, ಬೇಸಿಗೆಯಲ್ಲಿ ಧೂಳಿನ ಮಜ್ಜನದಲ್ಲಿದ್ದು, ಓಡಾಡುವ ಜನರಿಗೆ ದುಸ್ಥಿತಿ ಎದುರಾಗಿದೆ. ಆದಷ್ಟು ಬೇಗ ಡಾಂಬರೀಕರಣ ನಿರ್ಮಾಣವಾದರೆ ರೈತರು ಸುಗಮವಾಗಿ ತಮ್ಮ ಜಮೀನುಗಳಲ್ಲಿ ವ್ಯವಸಾಯ ಓಡಾಟಕ್ಕೆ ಅನುಕೂಲವಾಗುತ್ತದೆ. > ಎಂ.ರಮೇಶ್​ ಮದ್ದೇರಿ ರೈತ