ಜಿಲ್ಲೆ

ಕಾಟಾಚಾರಕ್ಕೆ ಕುಶಾಲನಗರ ಕೂಡಿಗೆ ರಸ್ತೆ

Kodagu

ಕುಶಾಲನಗರ: ಕಾಟಾಚಾರದ ತೇಪೆ ಕಾರ್ಯ.. ಕಿತ್ತುಬರುತ್ತಿರುವ ರಸ್ತೆ ವಿಭಜಕ.. ನಿರ್ಮಾಣವಾಗದ ಚರಂಡಿ.. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಕುಶಾಲನಗರ ಕೂಡಿಗೆ ರಸ್ತೆಯ ಗೋಳೂ ಕೇಳುವವರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಕುಶಾಲನಗರ ಕೂಡಿಗೆ ರಸ್ತೆಯಲ್ಲಿ ಹಲವು ಅಪಘಾತಗಳು ಸಂಭವಿಸಿ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಸಾವನ್ನಪ್ಪಿದ್ದರೆ ಹಲವರು ಗಾಯಗೊಂಡಿದ್ದಾರೆ. ಇದನ್ನೆಲ್ಲ ಮನಗಂಡ ಲೋಕೋಪಯೋಗಿ ಇಲಾಖೆ 4.50 ಕೋಟಿ ರೂ. ವೆಚ್ಚದಲ್ಲಿ ಅಂದಾಜು 1.3 ಕಿ.ಮೀ ಉದ್ದದ ರಸ್ತೆಗೆ ವಿಭಜಕ ಹಾಕಿ ರಸ್ತೆ ವಿಸ್ತರಣೆ ಮಾಡಿದ್ದರು. ಆದರೆ, ಹಾಸನದ ಗುತ್ತಿಗೆದಾರರೊಬ್ಬರು ಮಾಡಿರುವ ಕಾಮಗಾರಿ ಮಾತ್ರ ದೇವರಿಗೆ ಪ್ರೀತಿ ಎಂಬಂತಾಗಿದ್ದು, ಅತ್ಯಂತ ಕಳಪೆ ಕಾಮಗಾರಿ ಎನ್ನಲು ಸಾಕಷ್ಟು ಉದಾಹರಣೆಗಳು ಕಂಡುಬರುತ್ತಿದೆ.

ಪುಡಿಯಾಗುತ್ತಿದೆ ವಿಭಜಕ: ಸೋಮೇಶ್ವರ ದೇವಸ್ಥಾನದ ಸಮೀಪದಲ್ಲಿ ನಿರ್ಮಿಸಿರುವ ರಸ್ತೆ ವಿಭಜಕ್ಕೆ ಯಾರಾದರೂ ಜೋರಾಗಿ ಒದ್ದರೂ ಮುರಿದು ಬೀಳುವ ಸ್ಥಿತಿಯಲ್ಲಿ ಇದೆ. ಇಷ್ಟು ಕೆಟ್ಟದಾಗಿ ನಿರ್ಮಾಣ ಮಾಡಲಾದ ಕಾಮಗಾರಿಗೆ ಹೊಡೆದಿರುವ ಬಣ್ಣವೇ ಇದಕ್ಕೆ ಶ್ರೀರಕ್ಷೆ ಎನ್ನಬಹುದು. ಇಷ್ಟು ಕಳಪೆಯಾಗಿದ್ದರೂ ಯಾವ ಅಧಿಕಾರಿಯು ಪರಿಶೀಲಿಸಿದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ.

ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಿರುವ ಬಗ್ಗೆ ಜನರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಜತೆಗೆ ರಸ್ತೆಗೆ ಹಾಕಿರುವ ಡಾಂಬರು ರಸ್ತೆಗೆ ಬಣ್ಣ ಬಳಿದಂತೆ ಕಾಣುತ್ತಿದೆ. ಎಲ್ಲಿಯೂ ಗುಣಮಟ್ಟದ ಕೆಲಸವಾಗಿಲ್ಲ. ಶಾಸಕರಿಗೆ ಈ ಕಾಮಗಾರಿ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.

ಚರಂಡಿ ನಿರ್ಮಾಣ ಇಲ್ಲ: ಹೇಗೋ ನೂತನ ರಸ್ತೆ ಆಯ್ತು. ಆದರೆ, ರಸ್ತೆಯ ಇಕ್ಕೆಲಗಳಲ್ಲಿ ಆಗಬೇಕಾದ ಚರಂಡಿ ಇನ್ನು ನಿರ್ಮಾಣವಾಗಿಲ್ಲ. ಮಳೆ ಬಂದರೆ ಸಾಯಿ ಬಡಾವಣೆ ಮುಂಭಾಗದ ರಸ್ತೆಯಲ್ಲೇ ನೀರು ಹರಿಯುತ್ತಿತ್ತು. ಈಗ ರಸ್ತೆಗೆ ವಿಭಜಕ ನಿರ್ಮಿಸಿರುವ ಕಾರಣ ರಸ್ತೆಯ ಒಂದು ಬದಿಯಲ್ಲಿ ನೀರು ಶೇಖರಣೆಯಾಗಿ ವಾಹನ ಸವಾರರಿಗೆ ತೊಂದರೆಯಾಗಲಿದೆ. ಸರಾಗವಾಗಿ ನೀರು ಹರಿಯಲು ದೊಡ್ಡ ಪೈಪುಗಳನ್ನು ಅಳವಡಿಸಬೇಕಿತ್ತು. ಆದರೆ ಅದನ್ನು ಮಾಡಿಲ್ಲ. ಇಲ್ಲಿ ಸಂಪೂರ್ಣ ಅವೈಜ್ಞಾನಿಕ ಕಾಮಗಾರಿ ತೋರುತ್ತಿದೆ ಎಂದು ಸಾರ್ವಜರ್ನಿಕರು ದೂರಿದ್ದಾರೆ.

ಮುಂದಾಲೋಚನೆ ಇಲ್ಲದ ಕಾಮಗಾರಿ: ಕೂಡಿಗೆ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಎರಡು ಬದಿಯಲ್ಲೂ ಬಡಾವಣೆಗಳು ಇವೆ. ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಿಭಜಕಗಳನ್ನು ಹಾಕಿ, ವಾಹನ ಸವಾರರ ಕಾನೂನು ಉಲ್ಲಂಘನೆಗೆ ಕಾರಣವಾಗುತ್ತಿದೆ. ಹಲವು ದ್ವಿಚಕ್ರ ಸವಾರರು ಸಂಚಾರ ನಿಯಮ ಉಲ್ಲಂಘಿಸಿ ತಮ್ಮ ವಾಹನ ಚಾಲನೆ ಮಾಡುತ್ತಿರುವುದು ಸಾಮಾನ್ಯವಾಗಿದೆ. ಇದು ಕೂಡ ಮುಂದಾಲೋಚನೆ ಇಲ್ಲದೆ ಕಾಮಗಾರಿ ನಡೆಸಿರುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.

ರಸ್ತೆ ವಿಭಜಕ ಮತ್ತು ವಿಸ್ತರಣೆ ಮಾಡುವಂತೆ ಯಾರು ಮನವಿ ಕೊಟ್ಟಿಲ್ಲ. ಕಾಮಗಾರಿಯಲ್ಲಿ ಗುಣಮಟ್ಟವಿಲ್ಲ. ಒಂದು ದಿನವೂ ನೀರು ಹಾಕಿ ಕ್ಯೂರಿಂಗ್ ಮಾಡಿಲ್ಲ. ಅಗತ್ಯ ಪ್ರಮಾಣದ ಸಿಮೆಂಟ್ ಹಾಕಿಲ್ಲ. ಯಾವ ರೀತಿಯಲ್ಲೂ ಈ ರಸ್ತೆ ವಿಸ್ತರಣೆ ಅವಶ್ಯಕತೆ ಸಾರ್ವಜನಿಕರಿಗೆ ಇರಲಿಲ್ಲ. ಈ ರಸ್ತೆ ವಿಸ್ತರಣೆಯಿಂದ ಪಾರ್ಕಿಂಗ್ ಸಮಸ್ಯೆ ಉಂಟಾಗಿದೆ.
ಬಿ.ವಿ.ಅರುಣ್ ಕುಮಾರ್ ವ್ಯಾಪಾರಿ, ಕೂಡಿಗೆ

ಲೋಕೋಪಯೋಗಿ ಇಲಾಖೆಯ ಅಂಗ ಸಂಸ್ಥೆ ಪಾರ್ಮಸಿ ಎನ್ನುವ ಸಂಸ್ಥೆ ಸರ್ವೇ ನಡೆಸಿ ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸಿ ಜೀವ ಹಾನಿಯಾಗಿದೆ ಎಂದು ವರದಿ ನೀಡಿದ್ದರಿಂದ, ಇದನ್ನು ಅಪಘಾತ ವಲಯವೆಂದು ಘೋಷಣೆ ಮಾಡಿದರು. ಹಾಗಾಗಿ ರಸ್ತೆ ವಿಸ್ತರಣೆ ಮಾಡಿ ವಿಭಜಕ ಅಳವಡಿಸಲಾಗಿದೆ. ಪಾರ್ಕಿಂಗ್ ಸಮಸ್ಯೆಗೆ ಮಳಿಗೆಗಳ ಮುಂದೆ ಅವರೇ ಸ್ಥಳಾವಕಾಶ ಮಾಡಿಕೊಳ್ಳಬೇಕು. ಇನ್ನು ರಿಪ್ಲೆಕ್ಟರ್, ರಸ್ತೆ ಬಿಳಿ, ಹಳದಿ ಬಣ್ಣದ ಪೈಂಟ್ ಹಾಕುವುದು ಬಾಕಿ ಇದೆ. ಇಲಾಖೆ ಉದ್ದೇಶ ವಾಹನಗಳ ಮುಖಾಮುಖಿ ಅಪಘಾತ ತಪ್ಪಿಸುವುದು. ಅದು ಈಡೇರಿದೆ.

ಕಳಪೆ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾಗುತ್ತಿರುವುದು ಸುಳ್ಳು, ಗುಣಮಟ್ಟಕ್ಕೆ ಪ್ರಾಶಸ್ತಯ ನೀಡಲಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಚರಂಡಿ ನಿರ್ಮಾಣ ಮಾಡುವುದು ಬಾಕಿ ಇದೆ, ಅದನ್ನು ಮುಂದಿನ ಒಂದು ವಾರದಲ್ಲಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ.
ಸೈಜನ್ ಪೀಟರ್ ಇಂಜಿನಿಯರ್, ಲೋಕೋಪಯೋಗಿ ಇಲಾಖೆ