ಕಾರವಾರ: ರಸ್ತೆ ಮಾಡಿಕೊಡುವಂತೆ ಆಗ್ರಹಿಸಿ ಶಿರಸಿ ದೇವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತಿಘಟ್ಟ ಕೆಳಗಿನಕೇರಿ ಸಮೀಪದ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿಯ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ, ಬಿಜೆಪಿ ಶಿರಸಿ ನಗರ ಅಧ್ಯಕ್ಷೆ ಉಷಾ ಹೆಗಡೆ ನೇತೃತ್ವದಲ್ಲಿ ಪ್ರತಿಭಟನೆ ಕೈಗೊಂಡ ಗ್ರಾಮಸ್ಥರು, ಸರ್ಕಾರಕ್ಕೆ, ಹಾಗೂ ಶಾಸಕರಿಗೆ ಧಿಕ್ಕಾರ ಕೂಗಿದರು. ನಂತರ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿ, ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುವಂತೆ ಆಗ್ರಹಿಸಿದರು.
ಶಿರಸಿ-ಅಂಕೋಲಾ ತಾಲೂಕಿನ ಗಡಿಯಲ್ಲಿ ಮಾಡನಮನೆ, ಉಂಬಳಕೇರಿ, ಗುಂಡಪ್ಪೆ, ನರಸೆಬೈಲ್ ಸೇರಿ 6 ಕ್ಕೂ ಅಧಿಕ ಹಳ್ಳಿಗಳಿವೆ. ಅಂಕೋಲಾ ತಾಲೂಕಿನ ಕಮ್ಮಾಣಿ ಮೂಲಕ ಈ ಗ್ರಾಮಗಳಿಗೆ ಸಂಪರ್ಕ ಇದೆಯಾದರೂ ಹಲವು ಹಳ್ಳಗಳು ಇರುವುದರಿಂದ ಮಳೆಗಾಲದಲ್ಲಿ ಓಡಾಟ ಸಾಧ್ಯವಿಲ್ಲ. ಶಿರಸಿ-ಮತ್ತಿಘಟ್ಟ-ಭಾಗದಿಂದ ಗ್ರಾಮಗಳನ್ನು ಸಂಪರ್ಕಿಸಬೇಕು. ಒಟ್ಟು 38 ಮನೆಗಳಿವೆ. 2023 ರಲ್ಲಿ ಈ ಗ್ರಾಮಕ್ಕೆ ಮತ್ತಿಘಟ್ಟದಿಂದ ಸಂಪರ್ಕಿಸುವ 5 ಕಿಮೀ ರಸ್ತೆಯ ನಡುವೆ ಒಂದು ಕಡೆ ಕುಸಿತವಾಗಿತ್ತು. 2024 ರಲ್ಲಿ ಮತ್ತೆ ತೀವ್ರ ಕುಸಿತ ಉಂಟಾಗಿ ಮಳೆಗಾಲದಲ್ಲಿ ಗ್ರಾಮವು ಸುಮಾರು 15 ದಿನಗಳಿಂದ ಮುಖ್ಯವಾಹಿನಿಯ ಜತೆ ಸಂಪರ್ಕ ಕಳೆದುಕೊಂಡಿತ್ತು.
ಆದರೆ, ಗ್ರಾಮಕ್ಕೆ ಯಾರೂ ಭೇಟಿ ನೀಡಿಲ್ಲ. ನಂತರ ಗ್ರಾಮಸ್ಥರೇ ಶ್ರಮ ವಹಿಸಿ ಜೀಪ್ ಓಡಾಡಬಹುದಾದ ರಸ್ತೆಯನ್ನು ಮಾಡಿಕೊಂಡಿದ್ದಾರೆ. ಆದರೆ, ಇದುವರೆಗೂ ಗ್ರಾಮಕ್ಕೆ ಯಾವುದೇ ಅಽಕಾರಿ ಭೇಟಿ ಕೊಟ್ಟಿಲ್ಲ. ಶಾಸಕ ಭೀಮಣ್ಣ ನಾಯ್ಕ ಅವರು ಮತ್ತಿಘಟ್ಟಕ್ಕೆ ಆಗಮಿಸಿದರೂ ಸ್ಥಳಕ್ಕೆ ಬಂದು ನೋಡಿಲ್ಲ.
ಮಳೆಗಾಲಕ್ಕೆ ಇನ್ನು ಮೂರು ತಿಂಗಳು ಇದ್ದು, ಅಲ್ಲಿನ ಭೌಗೋಳಿಕ ಪರಿಸ್ಥಿತಿಯಲ್ಲಿ ಮತ್ತೆ ಗುಡ್ಡ ಕುಸಿತ ಉಂಟಾಗಿ ಮುಖ್ಯ ರಸ್ತೆಯೊಂದಿಗೆ ಸಂಪರ್ಕ ಕಳೆದುಕೊಳ್ಳುವ ಸಾಧ್ಯತೆ ಇದೆ. ಇದರಿಂದ ಗ್ರಾಮಕ್ಕೆ ಜಿಲ್ಲಾಽಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.
ಅನಂತಮೂರ್ತಿ ಹೆಗಡೆ ಮಾತನಾಡಿ, ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮಳೆಗಾಲದಲ್ಲಿ ಅನಾರೋಗ್ಯಕ್ಕೆ ಒಳಗಾದರು, ಅವರನ್ನು ಜೋಲಿಯ ಮೇಲೆ ಹೊತ್ತೊಯ್ದು ಚಿಕಿತ್ಸೆ ಕೊಡಿಸುವ ಪರಿಸ್ಥಿತಿ ನಿರ್ಮಾಣವಾಯಿತು. ಈ ಮಳೆಗಾಲದಲ್ಲೂ ಗ್ರಾಮದಲ್ಲಿ ಮತ್ತೆ ಅಂಥದ್ದೇ ದುಸ್ಥಿತಿ ಉಂಟಾಗುವ ಲಕ್ಷಣ ಅಲ್ಲಿನ ಭೌಗೋಳಿಕ ಪರಿಸ್ಥಿತಿ ನೋಡಿದರೆ ಇದೆ. ದೊಡ್ಡ ರಸ್ತೆ ಮಾಡಲು ಅರಣ್ಯ ಇಲಾಖೆ ಆಕ್ಷೇಪವಿದೆ. ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ ಶೀಘ್ರದಲ್ಲಿ ರಸ್ತೆ ನಿರ್ಮಾಣ ಮಾಡಕೊಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಶಿರಸಿ ನಗರ ಅಧ್ಯಕ್ಷೆ ಉಷಾ ಹೆಗಡೆ ಮಾತನಾಡಿ, ಗ್ರಾಮಗಳಲ್ಲಿ ಸಿದ್ದಿ ಬುಡಕಟ್ಟು ಜನರು ದೊಡ್ಡ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಬುಡಕಟ್ಟು ನಿಧಿಯಲ್ಲಿ ಆ ಗ್ರಾಮಕ್ಕೆ ರಸ್ತೆ ನಿರ್ಮಾಣ ಮಾಡಿಕೊಡಲು ಅವಕಾಶವಿದೆ. ಆದರೆ, ಸರ್ಕಾರ ಎಸ್‌ಟಿ ನಿಽಯನ್ನು ಅನ್ಯ ಉದ್ದೇಶಕ್ಕೆ ಬಳಸಿ ನಿಜವಾದ ಬುಡಕಟ್ಟು ಜನರಿಗೆ ಸೌಲಭ್ಯ ಸಿಗದಂತೆ ಮಾಡಿದೆ ಎಂದು ದೂರಿದರು.
ಗ್ರಾಪಂ ಸದಸ್ಯ ನಾರಾಯಣ ರಾಮಚಂದ್ರ ಹೆಗಡೆ, ಸ್ಥಳೀಯರಾದ ವಿನಯ ಶಾಂತಾರಾಮ ಹೆಗಡೆ, ದಾಮೋದರ ವೆಂಕಟ ಸಿದ್ದಿ, ಗಣಪತಿ ವೆಂಕಟ ಸಿದ್ದಿ, ರೇಣುಕಾ ಗೋಪಾಲ ಸಿದ್ದಿ, ಲತಾ ಶಂಕರ ಸಿದ್ದಿ, ಶಂಕರ ವೆಂಕಟ ಸಿದ್ದಿ ಹಾಗೂ ಇತರರು ಇದ್ದರು.