ಜಿಲ್ಲೆ

ರಸ್ತೆ ಬದಿ ವ್ಯಾಪಾರಿಗಳ ಅಂಗಡಿ ತೆರವಿಗೆ ಹರಿಹರದಲ್ಲಿ ವಿರೋಧ

ಹರ್ಷ ನ.ಪುರೋಹಿತ

ಹರಿಹರ: ನಗರದ ರಸ್ತೆ ಬದಿ ವ್ಯಾಪಾರಿಗಳ ಅಂಗಡಿಗಳನ್ನು ತೆರವುಗೊಳಿಸಲು ಪೊಲೀಸರು ನೋಟಿಸ್ ನೀಡಿರುವುದನ್ನು ಖಂಡಿಸಿ, ದಾವಣಗೆರೆ ಜಿಲ್ಲಾ ಬೀದಿಬದಿ ಸ್ಥಿರ ಮತ್ತು ಸಂಚಾರಿ ಚಿಲ್ಲರೆ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

ನಗರದ ಗಾಂಧಿ ವೃತ್ತದಿಂದ ಮೆರವಣಿಗೆ ಮೂಲಕ ನಗರಸಭೆಗೆ ಆಗಮಿಸಿ ಬೀದಿಬದಿ ವ್ಯಾಪಾರಿಗಳು ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಠಿ ಅವರಿಗೆ ಮನವಿ ನೀಡಿದರು.

ನಂತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಭಾರತಿ ಮಾತನಾಡಿ, 2014 ರ ಬೀದಿಬದಿ ವ್ಯಾಪಾರಸ್ಥರ ಸಂರಕ್ಷಣಾ ಹಾಗೂ ನಿಯಂತ್ರಣ ಅಧಿನಿಯಮದನ್ವಯ ಇಂತಹ ವಿಷಯಗಳಲ್ಲಿ ಪೊಲೀಸರು ಹಸ್ತಕ್ಷೇಪ ಮಾಡುವಂತಿಲ್ಲ. ಆದರೆ, ಪೊಲೀಸರು ನಗರಸಭೆಗೆ ಈ ಕುರಿತು ಅಹವಾಲು ಸಲ್ಲಿಸಬಹುದು ಎಂದರು.

ನಗರಸಭೆಯಲ್ಲಿ ಪೌರಾಯುಕ್ತರ ಅಧ್ಯಕ್ಷತೆಯಲ್ಲಿರುವ ಟೌನ್ ವೆಂಡಿಂಗ್ ಸಮಿತಿಯಲ್ಲಿ ಬೀದಿಬದಿ ವ್ಯಾಪಾರದ ಸ್ಥಳಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬಹುದಾಗಿದೆ. ಪೊಲೀಸರು ನೋಟಿಸ್ ನೀಡಿ ವ್ಯಾಪಾರಿಗಳಿಗೆ ಕಿರಿಕಿರಿ ಮಾಡಬಾರದೆಂದು ಹೇಳಿದರು.

ಮನವಿ ಸ್ವೀಕರಿಸಿದ ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಠಿ ಮಾತನಾಡಿ, ಜನ, ವಾಹನ ಸಂಚಾರಕ್ಕೆ, ಹಿಂಬದಿ ಇರುವ ಅಂಗಡಿಯವರಿಗೆ ತೊಂದರೆಯಾಗದಂತೆ ವ್ಯಾಪಾರ ಮಾಡಿಕೊಳ್ಳಬೇಕು. ಬೀದಿಬದಿ ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ರಸ್ತೆಯಲ್ಲೇ ನಡೆಸಿದರೆ ಅಪಘಾತಗಳು ನಡೆದು ಜೀವಹಾನಿಯಾದರೆ ಅಮಾಯಕರಿಗೆ ತೊಂದರೆಯಾಗುತ್ತದೆ ಎಂದು ಹೇಳಿದರು.

ಹಳೇ ಕೋರ್ಟ್ ಪಕ್ಕದಲ್ಲಿ 32 ಸಣ್ಣ ಮಳಿಗೆ ನಿರ್ಮಿಸಲಾಗಿದ್ದು, ಅದರ ಕಾಮಗಾರಿ ಪೂರ್ಣಗೊಳಿಸಿ ಬೀದಿಬದಿ ವ್ಯಾಪಾರಿಗಳಿಗೆ ವಿತರಿಸಲಾಗುವುದು. ನಗರದಲ್ಲಿ ಲಭ್ಯ ಇರುವ ಜಾಗಗಳಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಸ್ಥಳಾವಕಾಶ ಮಾಡಿಕೊಡುವ ಕುರಿತು ಪರಿಶೀಲಿಸುತ್ತೇವೆ ಎಂದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಎಸ್. ಇಸ್ಮಾಯಿಲ್, ಹರಿಹರ ತಾಲೂಕು ಸಂಚಾಲಕಿ ಡಿ. ಮಂಜಮ್ಮ , ಜಿಲ್ಲಾ ಸಮಿತಿ ಸದಸ್ಯ ಅಲ್ತಾಫ್, ಪುಟ್ಟಿ ಮಾರಾಟ ಸಮಿತಿ ಸದಸ್ಯರಾದ ಅಕ್ಕಮ್ಮ, ಶೀಲಾ, ವೆಂಕಟೇಶ್ ನಾಯ್ಕ, ಕೃಷ್ಣಮೂರ್ತಿ, ಚಂದ್ರಕಾಂತ, ತಾಲೂಕು ಸಮಿತಿ ಸದಸ್ಯರಾದ ಜಯಮ್ಮ, ಟಿ. ರಾಧಾ, ಮಹದೇವಮ್ಮ, ಲೋಕೇಶ್, ಕುಬೇರಪ್ಪ, ಇಖ್ಬಾಲ್, ಸಿದ್ದಮ್ಮ, ರಂಗಪ್ಪ, ಜಯಣ್ಣ, ಅಬ್ದುಲ್, ಲತಾ, ಬಸವರಾಜ್, ದೇವರಾಜ್ ಇದ್ದರು.