ಜಿಲ್ಲೆ

ತಿಂಗಳಿಗೊಮ್ಮೆ ರಸ್ತೆ ಸುರಕ್ಷಾ ಸಮಿತಿ ಸಭೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಸೂಚನೆ

reportermng

ಮಂಗಳೂರು: ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿಸಭೆ ಪ್ರತಿ ತಿಂಗಳು ನಡೆಸಿ, ಕೈಗೊಂಡ ನಿರ್ಣಯಗಳ ಬಗ್ಗೆ ಕೇಂದ್ರ ಸರ್ಕಾರದ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ವೆಬ್ಸೈಟ್ನಲ್ಲಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ .ಕೆ.ವಿ. ಸೂಚಿಸಿದರು.


ಸರ್ಕೀಟ್‌ಹೌಸ್‌ನಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಒಬ್ಬರು ನೋಡೆಲ್ ಅಧಿಕಾರಿಯನ್ನು ನಿಯೋಜಿಸಿ, ಸಭೆಯಲ್ಲಿ ಚರ್ಚೆಯಾದ ಹಾಗೂ ಕೈಗೊಂಡ ನಿರ್ಣಯಗಳ ಬಗ್ಗೆ 48 ತಾಸಿನೊಳಗೆ ವೆಬ್ಸೈಟ್‌ನಲ್ಲಿ ದಾಖಲಿಸಬೇಕು ಎಂದರು.


ಬ್ಲಾಕ್ ಸ್ಪಾಟ್(ಕಪ್ಪು ಚುಕ್ಕೆ ಪ್ರದೇಶ)ಗಳಲ್ಲಿ ರಸ್ತೆ ದುರಸ್ತಿ ಇರುವ ಬಗ್ಗೆ ವಾಹನ ಸವಾರರು ನಿಧಾನವಾಗಿ ಚಲಿಸುವಂತೆ ಸೂಚಿಸುವ ನಾಮಫಲಕ ಅಳವಡಿಸಬೇಕು. ಗಂಭೀರ ಸ್ವರೂಪದ ಅಪಘಾತವಾಗಿ ಸಾವು ಸಂಭವಿಸಿದ ಸಂದರ್ಭಗಳಲ್ಲಿ ಆಡಿಟ್ ವರದಿ ನೀಡುವಂತೆಯೂ ಕ್ರಮ ವಹಿಸುವ ಬಗ್ಗೆ ಅವರು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.


ದ್ವಿಚಕ್ರ ವಾಹನ ಸವಾರರು ತಮ್ಮ ಜೀವದ ಸುರಕ್ಷತಾ ದೃಷ್ಟಿಯಿಂದ ಐಎಸ್‌ಐ ಮಾರ್ಕ್ ಹೊಂದಿರುವ ಹೆಲ್ಮೆಟ್ ಧರಿಸಬೇಕು. ಈ ಬಗ್ಗೆ ಅಗತ್ಯ ಜಾಗೃತಿ ಮೂಡಿಸುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಾರಿಗೆ ಉಪ ಆಯುಕ್ತ ರವಿಶಂಕರ್ ಅವರಿಗೆ ತಿಳಿಸಿದರು. ನಿರ್ಮಾಣ ಕಾಮಗಾರಿ ನಿರ್ವಹಿಸುವ ಇಲಾಖೆಗಳ ಕಾರ್ಯನಿರ್ವಾಹಕ ಅಭಿಯಂತರರು ಇನ್ನು ಮುಂದೆ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಗೆ ಹಾಜರಾಗುವಂತೆ ಸೂಚಿಸಿದರು.


ಶಾಲಾ ಬಸ್‌ಗಳ ತಪಾಸಣೆ
ಶಾಲೆ ಹಾಗೂ ಕಾಲೇಜುಗಳ ಬಸ್‌ಗಳ ಪರ್ಮಿಟ್, ಆ ವಾಹನಗಳ ಸ್ಥಿತಿಗತಿಗಳ ಬಗ್ಗೆ ತಪಾಸಣೆ ನಡೆಸಬೇಕು. ಆಯಾ ಬಸ್‌ಗಳಲ್ಲಿ ಸಂಬಂಧಿಸಿದ ಶಾಲೆಗಳ ಹೆಸರು, ಅಪಾಯಕಾರಿ ಚಾಲನೆ ಕಂಡು ಬಂದರೆ ಸಂಪರ್ಕಿಸಬೇಕಾದವರ ದೂರವಾಣಿ ಸಂಖ್ಯೆಯನ್ನು ಕಾಣುವಂತೆ ನಮೂದಿಸಬೇಕು. ಈ ಕುರಿತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಾರಿಗೆ ಉಪ ಆಯುಕ್ತರೇ ಖುದ್ದಾಗಿ ಶಾಲೆ-ಕಾಲೇಜುಗಳ ಬಸ್ಸುಗಳನ್ನು ಪರಿಶೀಲಿಸಬೇಕು. ಅವಘಡಗಳು ಸಂಭವಿಸುವುದಕ್ಕಿಂತ ಮುಂಚೆ ಎಚ್ಚೆತ್ತುಕೊಳ್ಳಬೇಕು. ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುವ ಆಟೋಗಳಲ್ಲಿ ಕಡ್ಡಾಯವಾಗಿ ಐದು ಮಕ್ಕಳ ಪ್ರಯಾಣಕ್ಕೆ ಮಾತ್ರ ಅವಕಾಶವಿದೆ. ಈ ಮಿತಿಯನ್ನು ಮೀರಿ ಹೆಚ್ಚು ಮಕ್ಕಳೊಂದಿಗೆ ಪ್ರಯಾಣಿಸಿದಲ್ಲಿ ಸಂಬಂಧಿಸಿದ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದರು.