ಚನ್ನಗಿರಿ: ದೇವರು ನೀಡಿರುವುದು ಒಂದೇ ಜೀವನ. ಒತ್ತಡ ಮರೆತು ವಾಹನ ಚಲಾಯಿಸಬೇಕು ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ. ಶ್ರೀ ಗುರುಬಸವ ಸ್ವಾಮೀಜಿ ತಿಳಿಸಿದರು.
ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸೋಮವಾರ ಕೆ.ಜೆ.ಹೊಂಡೈ ಶೋರೂಂ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮದರ್ಜೆ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಪ್ತಾಹ ಜಾಗೃತಿ ಅಭಿಯಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಯುವಕ ಯುವತಿಯರು ಪಾಲಕರನ್ನು ಒತ್ತಾಯ ಮಾಡಿ ದ್ವಿಚಕ್ರ ವಾಹನ ಪಡೆದು ಶಾಲಾ- ಕಾಲೇಜುಗಳಿಗೆ ಹೋಗುವಾಗ ಅಪಘಾತ ಸಂಭವಿಸಿ ಚಿಕ್ಕ ವಯಸ್ಸಿನಲ್ಲೇ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು.
ಜೀವಕ್ಕೆ ಬಹಳ ಮೌಲ್ಯವಿದೆ. ದೇವರು ಕೊಟ್ಟ ಜೀವವನ್ನು ವಿನಾಕಾರಣ ಕಳೆದುಕೊಳ್ಳಬಾರದು. ನಿಮ್ಮನ್ನು ನಂಬಿಕೊಂಡ ಜೀವಗಳು ಮನೆಯಲ್ಲಿ ಕಾಯುತ್ತಿರುತ್ತವೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ಶಾಸಕ ಶಿವಗಂಗಾ ಬಸವರಾಜ್ ಮಾತನಾಡಿ, ವಾಹನ ಚಾಲಕರು ಮತ್ತು ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಮತ್ತು ಸೀಟ್‌ಬೆಲ್ಟ್ ಧರಿಸಿದರೆ ಜೀವ ರಕ್ಷಣೆ ಮಾಡಿಕೊಳ್ಳಬಹುದು. ನಿರ್ಲಕ್ಷೃ ಮಾಡುವುದು ಸರಿಯಲ್ಲ ಎಂದರು.
ಇತ್ತೀಚಿನ ದಿನದಲ್ಲಿ ವಾಹನಗಳ ಸಂಖ್ಯೆ ಅಧಿಕವಾಗಿದ್ದು, ಪೊಲೀಸರು ದಂಡ ಹಾಕುತ್ತಾರೆ ಎಂಬ ಭಯದಲ್ಲಿ ತಪ್ಪಿಸಿಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡವರು ಇದ್ದಾರೆ. ಸಂಚಾರ ನಿಯಮ ಪಾಲನೆ ಮಾಡಿದರೆ ಸುರಕ್ಷಿತ ಚಾಲನೆ ಮಾಡಬಹುದು ಎಂದರು.
ಹಾಲಸ್ವಾಮಿ ಮಠದ ಶ್ರೀ ಡಾ.ಬಸವ ಜಯಚಂದ್ರ ಸ್ವಾಮೀಜಿ, ಕಾಂಗ್ರೆಸ್ ಮುಖಂಡ ಹೊದಿಗೆರೆ ರಮೇಶ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವೀರೇಶ್ ಪ್ರಸಾದ್, ಕೆ.ಜೆ.ಹುಂಡೈ ಮಾಲೀಕ ಕೆ.ಜಾವೀದ್ ಸಾಬ್, ವ್ಯವಸ್ಥಾಪಕ ಅಫಕ್ ರಜ್ವಿ, ತಹಸೀಲ್ದಾರ್ ಪಿ.ಎಸ್.ಎರ‌್ರಿಸ್ವಾಮಿ, ಕಾಲೇಜಿನ ಪ್ರಾಂಶುಪಾಲ ಹಾಲಸಿದ್ದಪ್ಪ ಇತರರಿದ್ದರು.