ಜಿಲ್ಲೆ

ಅಧಿಕಾರಿಗಳ ಕಿರುಕುಳದ ವಿರುದ್ಧ ಹೋರಾಟ: ಲಾರಿ ಓನರ್ಸ್‌ ಅಸೋಸಿಯೇಷನ್ ಗೌರವಾಧ್ಯಕ್ಷ ಚೆನ್ನಾರೆಡ್ಡಿ ಹೇಳಿಕೆ

reportermys

ಮಂಡ್ಯ: ಅಧಿಕಾರಿಗಳ ಕಿರುಕುಳದ ವಿರುದ್ಧ ಹಾಗೂ ನಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯಂತ ಲಾರಿ ಮಾಲೀಕರು ಪ್ರತಿಭಟನೆ ನಡೆಸಬೇಕಿದೆ. ಈ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಫೆಡರೇಷನ್ ಆ್ ಕರ್ನಾಟಕ ಲಾರಿ ಓನರ್ಸ್‌ ಅಸೋಸಿಯೇಷನ್ ಗೌರವಾಧ್ಯಕ್ಷ ಚೆನ್ನಾರೆಡ್ಡಿ ತಿಳಿಸಿದರು.

ನಗರದ ಎಸ್.ಬಿ ಸಮುದಾಯ ಭವನದಲ್ಲಿ ಫೆಡರೇಷನ್ ಆಫ ಕರ್ನಾಟಕ ಲಾರಿ ಓನರ್ಸ್‌ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ರಸ್ತೆ ಸುರಕ್ಷತಾ ಸಪ್ತಾಹ ಮತ್ತು ರಾಜ್ಯ ಕಾರ್ಯಕಾರಿ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿದರು. ಸಾಲ ಮಾಡಿ ಲಾರಿಯನ್ನು ಖರೀದಿಸುತ್ತೇವೆ. ಒಂದು ಕಡೆ ಸಾಲಕ್ಕೆ ಕಂತು ಹಾಗೂ ಬಡ್ಡಿಯನ್ನು ಪಾವತಿಸಬೇಕಿರುತ್ತದೆ. ಇದರ ನಡುವೆ ಅಧಿಕಾರಿಗಳ ಕಿರುಕುಳವೂ ಹೆಚ್ಚಿರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ ಚಾಲನೆ ಮಾಡುವುದು, ಅಪಘಾತ ಸೇರಿದಂತೆ ಇತರೆ ಪ್ರಕರಣಗಳಲ್ಲಿ ಚಾಲಕನ ಮೇಲೆ ಪ್ರಕರಣ ದಾಖಲಿಸುತ್ತಾರೆ. ಜತೆಗೆ ವಾರಗಳ ಕಾಲ ಲಾರಿಗಳನ್ನು ಠಾಣೆ ಬಳಿ ನಿಲ್ಲಿಸಿರುತ್ತಾರೆ. ಚಾಲಕ ತಪ್ಪು ಮಾಡಿರುತ್ತಾನೆ. ಆದರೆ ಲಾರಿ ಮಾಲೀಕರು ಸಹ ತೊಂದರೆ ಅನುಭವಿಸಬೇಕಾಗಿದೆ. ಕಾನೂನಿನಲ್ಲಿ ಇಂತಹುದ್ದು ಇಲ್ಲದಿದ್ದರೂ, ಅಧಿಕಾರಿಗಳು ಕಿರುಕುಳ ನೀಡುವುದಕ್ಕೆ ಲಂಚವನ್ನು ಪಡೆಯುವುದಕ್ಕೆ ಇಂತಹ ಧೋರಣೆಯನ್ನು ಅನುಸರಿಸುತ್ತಾರೆ. ಈ ಬಗ್ಗೆ ನಾವು ಒಟ್ಟಾಗಿ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದರು.

ಈ ಬಗ್ಗೆ ಸಭೆ ಸೇರಿ ಜಿಲ್ಲಾ ಕೇಂದ್ರಗಳಲ್ಲಿ ಒಂದು ದಿನ ಎಲ್ಲರೂ ಒಗ್ಗೂಡಿ ಪ್ರತಿಭಟನೆ ನಡೆಸಿ ಸಂಬಂಧಿಸಿದವರಿಗೆ ಮನವಿ ಸಲ್ಲಿಸುವುದು. ಬೆಂಗಳೂರಿನಲ್ಲೂ ಸಹ ಒಂದು ದಿನ ರಾಜ್ಯಾದ್ಯಂತ ಎಲ್ಲ ಲಾರಿ ಮಾಲೀಕರೂ ಒಟ್ಟಾಗಿ ಪ್ರತಿಭಟಿಸಿ ಮನವಿ ಸಲ್ಲಿಸಬೇಕು. ಈ ಬಗ್ಗೆ ನಿರ್ಣಯ ಕೈಗೊಂಡು ತಿಳಿಸಲಾಗುವುದು. ಸಮಸ್ಯೆಗಳು ಮತ್ತು ಬೇಡಿಕೆಗಳ ಕುರಿತಂತೆ ಸರ್ಕಾರದ ಗಮನಕ್ಕೆ ತರಲು ಸಂಬಂಧಿಸಿದ ಸಾರಿಗೆ ಸಚಿವರು, ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಅವರು ಇನ್ನೂ ನಮಗೆ ಸಮಯ ನೀಡಿಲ್ಲ. ನಾವು ಅವರೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲೂ ಕಾರ್ಯೋನ್ಮುಖರಾಗಿದ್ದೇವೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಡೀಸೆಲ್‌ಗಿಂತಲೂ ಟೋಲ್ ಬೆಲೆಯೇ ದುಬಾರಿಯಾಗಿದೆ. ಟೋಲ್ ಸಂಗ್ರಹದಲ್ಲಿ ನಮ್ಮ ಆಕ್ಷೇಪವಿಲ್ಲ. ಆದರೆ ಕೆಲವು ನಿಯಮಗಳನ್ನು ಸಡಿಲಗೊಳಿಸುವ ಮೂಲಕ ನಮಗೂ ಅನುಕೂಲ ಕಲ್ಪಿಸಬೇಕು. ನಾವೂ ಸಹ ಅಗತ್ಯ ವಸ್ತುಗಳ ಕಾಯ್ದೆ ಒಳಪಡುತ್ತೇವೆ. ಸಾರ್ವಜನಿಕವಾಗಿ ನಮಗೂ ಜವಾಬ್ದಾರಿ ಇರುತ್ತದೆ. ಇದನ್ನು ಮನಗಂಡು ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಫೆಡರೇಷನ್ ಅಧ್ಯಕ್ಷ ಸಿ.ನವೀನ್‌ರೆಡ್ಡಿ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಎಂ.ಎಸ್. ಸತ್ಯಾನಂದ, ಉಪಾಧ್ಯಕ್ಷ ಎಚ್.ಎಸ್.ಸಂಜಯ್‌ಕುಮಾರ್, ಎಸ್.ಯೋಗೇಶ್, ಎಂ.ಎಸ್.ವೆಂಕಟೇಶ್‌ಬಾಬು, ಶ್ರೀನಿವಾಸ್, ಸುರೇಶ, ಮನ್ಸೂರ್ ಅಹಮದ್, ಓಂ ಪ್ರಕಾಶ್, ಚಂದ್ರ, ಕೃಷ್ಣಮೂರ್ತಿ, ಮಂಚೇಗೌಡ ಇತರರಿದ್ದರು. ಇದೇ ವೇಳೆ ಹಿರಿಯ ಲಾರಿ ಮಾಲೀಕರನ್ನು ಅಭಿನಂದಿಸಲಾಯಿತು.