ಜಿಲ್ಲೆ

ಉಡುಪಿ ನಗರದಲ್ಲಿ ಸುಗಮ ಸಂಚಾರಕ್ಕೆ ಕ್ರಮ ವಹಿಸಿ...

ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಸೂಚನೆ

ಅಧಿಕಾರಿಗಳೊಂದಿಗೆ ರಸ್ತೆ ಸುರಕ್ಷತಾ ಸಮಿತಿ ಸಭೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಉಡುಪಿ ನಗರಸಭಾ ವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿ ವಾಹನ ದಟ್ಟಣೆ ಪ್ರತಿದಿನವೂ ಉಂಟಾಗುತ್ತಿದ್ದು, ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸಂಚಾರ ಸಿಕ್ಕುನಿಂದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಅಗತ್ಯವಿರುವ ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಸೂಚಿಸಿದರು.

ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿ, ಉಡುಪಿ ನಗರದಲ್ಲಿ ವಾಣಿಜ್ಯ ಕಟ್ಟಡಗಳಲ್ಲಿ ಪಾರ್ಕಿಂಗ್​ ವ್ಯವಸ್ಥೆ ಇಲ್ಲದಿರುವುದು, ಅನಧಿಕೃತವಾಗಿ ಗೂಡಂಗಡಿ ಆರಂಭಿಸಿರುವುದು ಹಾಗೂ ತಳ್ಳುವ ಗಾಡಿಯವರು ರಸ್ತೆಯಲ್ಲಿಯೇ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಸಂಚಾರಕ್ಕೆ ಅಡಚಣೆ ಆಗುತ್ತಿದ್ದು, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ನಗರದ ರಸ್ತೆಯಲ್ಲೇ ಪಾರ್ಕಿಂಗ್​

ಉಡುಪಿ ನಗರ ವ್ಯಾಪ್ತಿಯಲ್ಲಿ 58ಕ್ಕೂ ಹೆಚ್ಚು ವಾಣಿಜ್ಯ ಕಟ್ಟಡಗಳ ಮುಂಭಾಗದ ರಸ್ತೆಯ ಪಕ್ಕದಲ್ಲಿಯೇ ಅಂಗಡಿ ಮಾಲೀಕರು ಹಾಗೂ ಗ್ರಾಹಕರು ತಮ್ಮ ವಾಹನ ನಿಲ್ಲಿಸುತ್ತಾರೆ. ಇದು ವಾಹನ ದಟ್ಟಣೆಗೆ ಕಾರಣವಾಗುತ್ತಿದೆ. ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಆಗುತ್ತಿದೆ ಎಂದರು.

ಮಾಲೀಕರಿಗೆ ನೋಟಿಸ್​ ನೀಡಿ

ಕಟ್ಟಡಗಳ ನಿರ್ಮಾಣಕ್ಕೆ ನಗರಸಭೆ ವತಿಯಿಂದ ಅನುಮತಿ ಪಡೆಯುವ ಸಂದರ್ಭದಲ್ಲಿ ವಾಹನ ಪಾರ್ಕಿಂಗ್​ಗೆ ಸೂಕ್ತ ವ್ಯವಸ್ಥೆ ಮಾಡಬೇಕೆಂಬ ನಿಯಮ ಪಾಲನೆ ಆಗದಿರುವುದು ಕಂಡು ಬಂದಿದೆ. ಅಂತಹ ಕಟ್ಟಡದ ಮಾಲೀಕರಿಗೆ ನೋಟಿಸ್​ ನೀಡಿ. ಕೂಡಲೇ ಅವರ ಕಟ್ಟಡದ ಜಾಗದಲ್ಲಿ ಪಾರ್ಕಿಂಗ್​ ವ್ಯವಸ್ಥೆಗೆ ಅನುವು ಮಾಡಿಕೊಡುವಂತೆ ಅವರಿಗೆ ಸೂಚಿಸಿ. ರಸ್ತೆಯ ಸಮೀಪವಿರುವ ಶಾಲೆಗಳ ಮುಂಭಾಗ ಸೂಚನಾ ಫಲಕ ಹಾಗೂ ಝೀಬ್ರಾ ಪಟ್ಟಿ ಸಮೇತ ವೈಜ್ಞಾನಿಕ ರೀತಿಯಲ್ಲಿ ಹಂಪ್ಸ್​ ಅಳವಡಿಸಿ ಎಂದು ಡಿಸಿ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್​ ವರಿಷ್ಠ ಡಾ. ಅರುಣಕುಮಾರ್​ ಕೆ., ಕಾರ್ಯಪಾಲಕ ಇಂಜಿನಿಯರ್​ ಕಿರಣ್​ ಎಸ್​., ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್​ ಅಜ್ಮಿ, ರಾ.ಹೆ.ಯ ಎ.ಐ. ಅನಿರುದ್ಧ ಕಾಮತ್​, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್​ ಬಿ., ಗುತ್ತಿಗೆದಾರರು ಉಪಸ್ಥಿತರಿದ್ದರು.

ಫಾಸ್ಟ್ ಫುಡ್ ವಾಹನ ತೆರವುಗೊಳಿಸಿ

ಉಡುಪಿಯ ಸರ್ವಿಸ್​ ಬಸ್​ ನಿಲ್ದಾಣದ ಸುತ್ತಮುತ್ತ, ಬೋರ್ಡ್​ ಹೈಸ್ಕೂಲ್​ ಮುಂಭಾಗದಲ್ಲಿ ಗೂಡಂಗಡಿ ನಿರ್ಮಾಣ ಹಾಗೂ ತಳ್ಳುವ ಗಾಡಿಗಳಲ್ಲಿ ಹಣ್ಣು-ಹಂಪಲು ಮಾರಾಟ ಮಾಡಲಾಗುತ್ತಿದೆ. ಅಲ್ಲದೆ, ಫಾಸ್ಟ್​ ಫುಡ್​ ವಾಹನಗಳಿಂದಲೂ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಅವೆಲ್ಲವನ್ನೂ ನಗರಸಭೆಯವರು ತೆರವುಗೊಳಿಸಬೇಕು. ವಿವಿಧ ರಸ್ತೆ ಅಪಘಾತಗಳಲ್ಲಿ ಮಾರಣಾಂತಿಕ ಟನೆಗೆ ಕಾರಣರಾದ 82 ಜನರ ಡ್ರೈವಿಂಗ್​ ಲೈಸನ್ಸ್​ ಅಮಾನತಿಗೆ ಶಿಫಾರಸು ಮಾಡಲಾಗಿದೆ. ಈಗಾಗಲೇ 59 ಜನರ ಪರವಾನಗಿ ರದ್ದಾಗಿದ್ದು, ಉಳಿದ 23 ಜನರ ಚಾಲನಾ ಪರವಾನಗಿಯನ್ನು ವಾರದೊಳಗೆ ರದ್ದು ಪಡಿಸಲು ಕ್ರಮ ವಹಿಸಿ ಎಂದು ಪೊಲೀಸ್​ ಇಲಾಖೆಗೆ ಡಿಸಿ ಸೂಚಿಸಿದರು.
ಹಿಟ್​ ಆ್ಯಂಡ್​ ರನ್​ ಪ್ರಕರಣಕ್ಕೆ ಸಂಬಂಧಿಸಿ 2023-24ನೇ ಸಾಲಿನಲ್ಲಿ ಅಂತಿಮ ವರದಿ ಸಲ್ಲಿಸಿದ್ದ 20 ಪ್ರಕರಣಗಳಲ್ಲಿ ಗಾಯಗೊಂಡವರಿಗೆ ಹಾಗೂ ಮೃತಪಟ್ಟ ಕುಟುಂಬಗಳ ಅವಲಂಬಿತ ಸದಸ್ಯರಿಗೆ ಪರಿಹಾರ ನೀಡಲು ಜನರಲ್​ ಇನ್ಶೂರೆನ್ಸ್​ ಕಂಪನಿಗೆ ಸೂಚಿಸಲಾಗಿತ್ತು. ಇನ್ನೂ ಬಾಕಿ 13 ಪ್ರಕರಣಗಳ ಪರಿಹಾರ ನೀಡಿಲ್ಲ. ನಿಯಮಾನುಸಾರ ಕೂಡಲೇ ಮಂಜೂರು ಮಾಡಬೇಕು. | ಡಾ. ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ