ಮಂಡ್ಯ: ರಸ್ತೆಯಲ್ಲಿ ಸಂಚರಿಸುವ ಪ್ರತಿಯೊಬ್ಬ ವ್ಯಕ್ತಿಯು ಸಂಚಾರದ ನಿಯಮ ತಿಳಿದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ ಜಿಲ್ಲಾಡಳಿತ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ, ಕೆಎಸ್‌ಆರ್‌ಟಿಸಿ ವಿಭಾಗ, ಪೀಪಲ್ಸ್ ಎಜುಕೇಷನ್ ಟ್ರಸ್ಟ್, ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದೊಂದಿಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಜಾಗೃತಿ ಮಾಸಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಾಕಥಾನ್‌ಗೆ ಚಾಲನೆ ನೀಡಿ ಮಾತನಾಡಿದರು.
ಜೀವ ಎನ್ನುವುದು ಬಹಳ ಅಮೂಲ್ಯವಾದಂತದ್ದು. ನಮ್ಮ ಹಾಗೂ ಎದುರು ಸಂಚರಿಸುವವರ ಜೀವವನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿರುತ್ತದೆ. ರಸ್ತೆಯಲ್ಲಿ ಸಂಚರಿಸುವ ಪ್ರತಿ ವ್ಯಕ್ತಿಯು ಸಂಚಾರದ ನಿಯಮವನ್ನು ತಿಳಿದುಕೊಂಡು ಸುರಕ್ಷಿತವಾಗಿರಬೇಕು ಎನ್ನುವುದು ಈ ಕಾಲ್ನಡಿಗೆ ಪ್ರಮುಖ ಉದ್ದೇಶವಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಚಾಲಕರು ರಸ್ತೆಯಲ್ಲಿ ಸಂಚರಿಸುವಾಗ ನಿಯಮ ಉಲ್ಲಂಘನೆ ಮಾಡುತ್ತಿರುವುದು ಕಂಡುಬಂದಿದೆ. ಅಡ್ಡಾದಿಡ್ಡಿಯಾಗಿ ನಿರ್ಲಕ್ಷ್ಯತನದಿಂದ ವಾಹನ ಚಲಿಸುವುದರಿಂದ ನಿಮ್ಮ ಪ್ರಾಣದ ಜತೆಗೆ ಮತ್ತೊಬ್ಬರ ಪ್ರಾಣಕ್ಕೂ ಹಾನಿಯುಂಟಾಗುತ್ತದೆ. ಸಂಚಾರದ ನಿಯಮದ ಬಗ್ಗೆ ಅರಿವು ಮೂಡಿಸಿಕೊಳ್ಳಿ ಎಂದು ಚಾಲಕರಿಗೆ ಕಿವಿಮಾತು ಹೇಳಿದರು.
ಮೈಸೂರು ವಿಭಾಗದ ಜಂಟಿ ಸಾರಿಗೆ ಆಯುಕ್ತ ಶ್ರೀಧರ್ ಕೆ.ಮಲ್ಲಾಡ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಟಿ.ಜಿ.ಹೇಮಾವತಿ, ನಿವೃತ್ತ ಅಧೀಕ್ಷಕ ಪ್ರಸಾದ್, ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಕಾರ್ಯದರ್ಶಿ ಎಚ್.ಆರ್.ಹರ್ಷ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಪಿ.ನಾಗರಾಜು ಇತರರಿದ್ದರು.
ಕಾಲ್ನಡಿಗೆ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಿಂದ ಪ್ರಾರಂಭವಾಗಿ ಡಿಸಿ ಕಚೇರಿ, ಎಸ್ಪಿ ಕಚೇರಿ, ಎಂ.ಸಿ ರಸ್ತೆ ಮೂಲಕ ಸಾಗಿ ನಗರದ ಜೆ.ಸಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ನಂತರ ಆರ್.ಪಿ ರಸ್ತೆ, ನೂರಡಿ ರಸ್ತೆ ಮೂಲಕ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ ಎದುರು ಅಂತ್ಯವಾಯಿತು. 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಸ್ತೆ ಸುರಕ್ಷತೆಯ ಮಾಹಿತಿ ಫಲಕ ಹಿಡಿದು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.