ಜಿಲ್ಲೆ

ಜಿಟಿಜಿಟಿ ಮಳೆಯಲ್ಲಿ ವಿದ್ಯಾರ್ಥಿಗಳ ಹೋರಾಟ

Davangere - Desk - Ganesh M K

ನ್ಯಾಮತಿ: ರಸ್ತೆ ದುರಸ್ತಿಗೆ ಆಗ್ರಹಿಸಿ ವಿದ್ಯಾರ್ಥಿಗಳು ಜಿಟಿಜಿಟಿ ಮಳೆಯಲ್ಲಿ ಕೆಸರಿನ ರಸ್ತೆಯಲ್ಲಿಯೇ ನಿಂತು ಪ್ರತಿಭಟಿಸಿದ ಘಟನೆ ತಾಲೂಕಿನ ಬೆಳಗುತ್ತಿ ಗ್ರಾಮದ ಹೊಲವಲಯದಲ್ಲಿ ನಡೆಯಿತು.
ತಾಲೂಕಿನ ಬೆಳಗುತ್ತಿ ಗ್ರಾಮದ ಹೊರವಲಯದ ಖಾಸಗಿ ಶಾಲೆಯಲ್ಲಿ ಸುತ್ತಲಿನ ಗ್ರಾಮಗಳ 180ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ, ಶಾಲೆಗೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯೋ..ಕೆಸರು ಗದ್ದೆಯೋ ಎಂಬಂತಾಗಿದೆ.
ಕಳೆದ ಕೆಲ ದಿನಗಳ ಹಿಂದೆ ರಸ್ತೆ ಬದಿಯಲ್ಲಿ ಪೈಪ್‌ಲೈನ್‌ಗಾಗಿ ತೆಗೆದ ಕಾಲುವೆಯಿಂದಾಗಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಕಾಲುವೆ ತೆಗೆದು ಸರಿಯಾಗಿ ಮುಚ್ಚದ ಹಿನ್ನೆಲೆಯಲ್ಲಿ ಮಣ್ಣು ರಸ್ತೆ ತುಂಬ ಪಸರಿಸಿ, ದ್ವಿಚಕ್ರ ವಾಹನಗಳು ಸೇರಿದಂತೆ ಪಾದಚಾರಿಗಳು ಓಡಾಡದ ಸ್ಥಿತಿ ಏರ್ಪಟ್ಟಿದೆ.
ಕೂಡಲೇ ಸಂಬಂಧಿತ ಇಲಾಖೆಯವರು ಇತ್ತ ಗಮನ ಹರಿಸಿ ರಸ್ತೆ ಸರಿಪಡಿಸುವ ಮೂಲಕ ಸಮಸ್ಯೆ ಸರಿ ಪಡಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಸಂದೀಪ್ ಮಾತನಾಡಿ, ಮಳೆ ಬಂದರೆ ರಸ್ತೆ ಸಂಪೂರ್ಣ ನೀರಿನಿಂದ ಮುಳುಗಿ ಮಕ್ಕಳು ಶಾಲೆಗೆ ಬರಲು ತೀವ್ರ ತೊಂದರೆ ಆಗುತ್ತಿದೆ. ಗ್ರಾಮಾಡಳಿತ ಈ ಕೂಡಲೇ ರಸ್ತೆ ದುರಸ್ತಿ ಮಾಡಿ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಗ್ರಾಪಂ ಪಿಡಿಒ ಪ್ರದೀಪ್ ಎ.ಕೆ. ಪ್ರತಿಕ್ರಿಯಿಸಿ, ಈ ಕುರಿತು ಗ್ರಾಮಾಡಳಿತ ಅಧ್ಯಕ್ಷರ ಗಮನಕ್ಕೆ ತಂದು ಶಾಶ್ವತ ಪರಿಹಾರ ಕಲ್ಪಿಸುವಂತೆ ಶಾಸಕರಿಗೆ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪೋಷಕರು, ಶಿಕ್ಷಕರು, ರೈತ ಸಂಘದವರು ಇದ್ದರು.
ಪ್ರತಿಭಟನೆಗೆ ರೈತ ಸಂಘ ಬೆಂಬಲ: ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಸಹ ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಗ್ರಾಮಾಡಳಿತ ಈ ಕೂಡಲೇ ರಸ್ತೆ ದುರಸ್ತಿ ಮಾಡಿಸದಿದ್ದಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ಪ್ರತಿಭಟಿಸುವುದಾಗಿ ಅಖಂಡ ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ ಬೆಳಗುತ್ತಿಯ ಬಿ.ಎಚ್. ಉಮೇಶ್ ಎಚ್ಚರಿಸಿದರು.