ಸ್ವಾತಿ ಬಾಳ್ತಿಲ್ಲಾಯ ಕೊಕ್ಕಡ
ಕಡಬ ತಾಲೂಕಿನ ನೆಲ್ಯಾಡಿ ಗ್ರಾಮ ಪಂಚಾಯಿತಿಗೆ ಒಳಪಟ್ಟಿರುವ ರಾಮನಗರ-ಬೊಣ್ಯಸಾಗು-ಮಾದೇರಿ ಸಂಪರ್ಕ ರಸ್ತೆಯ ಮಧ್ಯದಲ್ಲಿರುವ ಗಾಣಂತಿಯಿಂದ ಅತ್ರಿಜಾಲುವರೆಗೆ ಸುಮಾರು 1 ಕಿಮಿ ರಸ್ತೆ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ. ಸುಮಾರು 4 ಕಿ.ಮೀ ವ್ಯಾಪ್ತಿಯ ಜಿಲ್ಲಾ ಪಂಚಾಯಿತಿ ರಸ್ತೆ ಇದಾಗಿದ್ದು, ಕೆಸರಿನಲ್ಲಿಯೇ ಸಾರ್ವಜನಿಕರು ಪ್ರಯಾಣಿಸುವ ದುಸ್ಥಿತಿ ಎದುರಾಗಿದೆ.
ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ನಿರ್ಮಾಣಗೊಳ್ಳದೆ ಮಳೆನೀರು ರಸ್ತೆಯಲ್ಲೇ ನಿಂತು ಗದ್ದೆಯಂತೆ ಕಾಣುತ್ತಿದೆ. ಆಗಿನ ಶಾಸಕ ಅಂಗಾರ ಅವರ ಅನುದಾನದಿಂದ ನೆಲ್ಯಾಡಿಯಿಂದ ಗಾಣಂತಿವರೆಗಿನ ರಸ್ತೆಯು ಡಾಂಬರೀಕರಣ ಮತ್ತು ಅತ್ರಿಜಾಲಿನಿಂದ ಮಾದೆರಿವರೆಗಿನ ರಸ್ತೆ ಕಾಂಕ್ರೀಟಿಕರಣಗೊಂಡಿದೆ. ಆದರೆ ಮಧ್ಯದ ಗಾಣತಿಯಿಂದ ಅತ್ರಿಜಾಲುವರೆಗಿನ ರಸ್ತೆ ಹದಗೆಟ್ಟಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ರಸ್ತೆ ಸರ್ಕಾರಕ್ಕೆ ಸೇರಿದ್ದು, ಖಾಸಗಿ ವ್ಯಕ್ತಿಗಳದ್ದಲ್ಲ ಎಂದು ಸ್ಥಳೀಯರು ವಾದಿಸಿದ್ದಾರೆ. ಫೆಬ್ರವರಿಯಲ್ಲಿ ನೆಲ್ಯಾಡಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ರಸ್ತೆ ಸಮಸ್ಯೆ ಇತ್ಯರ್ಥಪಡಿಸುವಂತೆ ತಹಸೀಲ್ದಾರ್‌ಗೂ ಪತ್ರ ಬರೆಯಲಾಗಿತ್ತು. ಆದರೆ ತಹಸೀಲ್ದಾರ್ ಕಚೇರಿಯಿಂದ ಪ್ರತಿಕ್ರಿಯೆ ಇದುವರೆಗೆ ಬಂದಿಲ್ಲ. ಇನ್ನು ಹೋರಾಟದ ದಾರಿ ಮಾತ್ರ ಬಾಕಿಯಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಮಾದೆರಿ, ಪುಚ್ಚೇರಿ, ಬೊಣ್ಯಸಾಗು, ಗಾಣಂತಿ, ಅತ್ರಿಜಾಲು ಪ್ರದೇಶದವರಿಗೆ ತಾಲೂಕು ಕೇಂದ್ರವಾದ ಕಡಬವನ್ನು ಸಂಪರ್ಕಿಸಲು ಇದು ಹತ್ತಿರದ ರಸ್ತೆಯಾಗಿದೆ. ಪ್ರತಿ ದಿನ ಇದೇ ರಸ್ತೆಯಲ್ಲಿ ವಿದ್ಯಾರ್ಥಿಗಳು ಪುಚ್ಚೇರಿ ಶಾಲೆಗೆ ಹೋಗುತ್ತಿದ್ದಾರೆ. ಕೆಸರುಗದ್ದೆಯಂತಾದ ಈ ರಸ್ತೆಯಲ್ಲಿ ಸಂಚಾರವೇ ದುಸ್ತರವಾಗಿದ್ದು, ಅನಾರೋಗ್ಯದಂತಹ ತುರ್ತು ಸ್ಥಿತಿ ಎದುರಾದಾಗ ಜೀಪು ಹಾಗೂ ರಿಕ್ಷಾ ಚಾಲಕರು ಬರಲು ಹಿಂದೇಟು ಹಾಕುತ್ತಿದ್ದಾರೆ ಎಂಬುದು ಗ್ರಾಮಸ್ಥರ ಅಳಲಾಗಿದೆ.
ಮಕ್ಕಳು ಪ್ರತಿದಿನ ಶಾಲೆಗೆ ಹೋಗುವಾಗ ನರಕಯಾತನೆ ಅನುಭವಿಸುತ್ತಿದ್ದಾರೆ. ರಸ್ತೆ ದುರಸ್ತಿಯ ಬಗ್ಗೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೂ, ಜನಪ್ರತಿನಿಧಿಗಳಿಗೂ ಮನವಿ ನೀಡಿಯಾಗಿದೆ. ಫಲಿತಾಂಶ ಮಾತ್ರ ಶೂನ್ಯ. - ಕೃಷ್ಣಪ್ಪ ಗಾಣಂತಿ, ಸ್ಥಳೀಯರು ರಸ್ತೆ ದುರಸ್ತಿ ಹಾಗು ಚರಂಡಿಗೆ ಕ್ರೀಯಾಯೋಜನೆಯಲ್ಲಿ ಅನುದಾನ ಇಟ್ಟು ಕಾಮಗಾರಿ ಮಾಡಲಾಗಿತ್ತು. ಸ್ಥಳೀಯರ ಜಾಗದ ತಕರಾರು ಎದುರಾದ ಕಾರಣ ಚರಂಡಿ ಪೂರ್ತಿ ಆಗಿಲ್ಲ. ಪಿಡಿಒ ಹಾಗೂ ಅಧ್ಯಕ್ಷರು ಸ್ಥಳ ಪರಿಶೀಲಿಸಿದ್ದಾರೆ. ಸ್ಥಳದಲ್ಲೇ ಬಗೆಹರಿಯಾದ ಕಾರಣ ಜಾಗದ ಬಗ್ಗೆ ಮಾಹಿತಿಗಾಗಿ ಕಂದಾಯ ಇಲಾಖೆಗೆ ಮನವಿ ಮಾಡಿದ್ದೇವೆ. - ರವಿಪ್ರಸಾದ್ ಶೆಟ್ಟಿ ಮತ್ತು ಪ್ರಕಾಶ್ ಕೆ., ವಾರ್ಡ್ ಸದಸ್ಯರು, ನೆಲ್ಯಾಡಿ ಗ್ರಾಪಂ ನೆಲ್ಯಾಡಿ ಪಂಚಾಯಿತಿಯಲ್ಲಿ ಫೆ.20ರಂದು ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿದಂತೆ ಪ್ರಸ್ತುತ ರಸ್ತೆಯ ಮಾಹಿತಿಗೆ ಪತ್ರ ವ್ಯವಹಾರ ನಡೆಸಿದ ಬಗ್ಗೆ ವಿಜಯವಾಣಿಯಿಂದ ತಿಳಿಯಿತು. ತಕ್ಷಣವೇ ಈ ವಿಚಾರದ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ. ಪ್ರಭಾಕರ ಖಜೂರೆ, ತಹಸೀಲ್ದಾರ ಕಡಬ ತಾಲೂಕು.