ದೇವನಹಳ್ಳಿ : ಸ್ಮಶಾನ ರಸ್ತೆಗಾಗಿ ಆಗ್ರಹಿಸಿ ಅಂಬೇಡ್ಕರ್ ಸೇನೆ ಅಧ್ಯಕ್ಷ ರಾಯಸಂದ್ರ ಸೋಮು ನೇತೃತ್ವದಲ್ಲಿ ಬುಧವಾರ ಬೈಚಾಪುರ ಗ್ರಾಮಸ್ಥರು ದೇವನಹಳ್ಳಿ ತಾಲೂಕು ಕಚೇರಿ ಮುಂದೆ ಪ್ರತಿಭಟಿಸಿದರು.
ಅಣ್ಣೇಶ್ವರ ಗ್ರಾಪಂ ಮಾಜಿ ಅಧ್ಯಕ್ಷ ವೇಣುಗೋಪಾಲ್ ಮಾತನಾಡಿ. ಬೈಚಾಪುರದ ಸ್ಮಶಾನಕ್ಕೆ ಹೋಗುತ್ತಿದ್ದ ರಸ್ತೆ ಜಾಗ ಖಾಸಗಿಯವರಿಗೆ ಸೇರಿದ್ದು, ಐದಾರು ವರ್ಷಗಳ ಹಿಂದೆ ಅದನ್ನು ಬಂದೋಬಸ್ತು ಮಾಡಿಕೊಂಡಿದ್ದಾರೆ. ಇದರಿಂದ ಸ್ಮಶಾನಕ್ಕೆ ಹೋಗಲು ದಾರಿಯೇ
ಇಲ್ಲದಂತಾಗಿದೆ ಎಂದು ತಿಳಿಸಿದರು. ನಾವು ಖಾಸಗಿಯವರಿಗೆ ರಸ್ತೆ ಬಿಡಿ ಎಂದು ಒತ್ತಾಯ ಮಾಡುತ್ತಿಲ್ಲ. ಬದಲಿಗೆ ಸರ್ಕಾರವೇ ಖಾಸಗಿ ಹಿಡುವಳಿದಾರರಿಂದ ರಸ್ತೆಗೆ ಬೇಕಾಗುವಷ್ಟು ಭೂಮಿ ಖರೀದಿಸಿ ಸ್ಮಶಾನ ರಸ್ತೆ ಮಾಡಿಕೊಡಬೇಕು. ಈ ಬಗ್ಗೆ ನಾವು ಐದಾರು ವರ್ಷಗಳಿಂದ ಸರ್ಕಾರಕ್ಕೆ ಸಂಬಂಧಪಟ್ಟ ಇಲಾಖೆಗೆ ಮನವಿ ನೀಡಿ ಒತ್ತಾಯಿಸುತ್ತಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದರು.
ಗ್ರಾಮದಲ್ಲಿ ವೃದ್ಧರೊಬ್ಬರು ನಿಧನರಾಗಿದ್ದು, ಸ್ಮಶಾನಕ್ಕೆ ಹೊಂದಿಕೊಂಡ ಖಾಸಗಿ ವ್ಯಕ್ತಿಯ ಜಮೀನಿನಲ್ಲಿ ಬೆಳೆ ಇಟ್ಟಿರುವುದರಿಂದ ಶವ ತೆಗೆದುಕೊಂಡು ಹೋಗಲಾಗದೆ ಇಲ್ಲಿಗೆ ಶವ ತಂದು ಪ್ರತಿಭಟಿಸಲು ಸಜ್ಜಾದ್ದೆವು. ಆಗ ಜಮೀನಿನ ಮಾಲಿಕರೇ ಶವ ತೆಗೆದುಕೊಂಡು ಹೋಗಲು ಅವಕಾಶ ನೀಡಿದರು. ಆದರೆ ಯಾರೇ ಸತ್ತರೂ ಈ ಸಮಸ್ಯೆ ಎದುರಾಗುತ್ತಿದೆ ಎಂದು ತಿಳಿಸಿದರು. ಅಂಬೇಡ್ಕರ್ ಸೇನೆಯ ಅಧ್ಯಕ್ಷ ರಾಯಸಂದ್ರ ಸೋಮು ಮಾತನಾಡಿ, ಖಾಸಗಿ ಅವರಿಂದ ಜಮೀನು ಬೆಲೆ ನಿಗದಿ ಮಾಡಿ ರಸ್ತೆ ಬಿಡಿಸಿಕೊಡಬೇಕಾದರೇ ಸರ್ಕಾರದ ಮಟ್ಟದಲ್ಲಿ ಆಗಬೇಕು. ಹಾಗಾಗಿ ನಮ್ಮ ಸಚಿವ ಮುನಿಯಪ್ಪ ಅವರು ಕೂಡಲೇ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಸ್ಮಶಾನ ರಸ್ತೆ ಸಮಸ್ಯೆ ಬಗೆಹರಿಸಿಕೊಡಬೇಕು ಎಂದರು.