ಮೂಲ್ಕಿ: ಸಸಿಹಿತ್ಲು ಕದಿಕೆ ಸೇತುವೆಯಿಂದ ಹೊಗೆಗುಡ್ಡೆ ದೇವಸ್ಥಾನ ರಸ್ತೆಯ ತಡೆಗೋಡೆ ಕುಸಿದು ವಾಲುತ್ತಿರುವ ಪರಿಣಾಮ ನೆಲ ಬಿರುಕು ಬಿಟ್ಟಿದ್ದು, ತಡೆಗೋಡೆ ನದಿಗೆ ಕುಸಿದಲ್ಲಿ ಸಂಪೂರ್ಣ ರಸ್ತೆ ನಾಶವಾಗುವ ಭೀತಿ ಎದುರಾಗಿದೆ.
ಈ ಪ್ರದೇಶದಲ್ಲಿ ಭೂಮಾಫಿಯಾ ಹೆಚ್ಚುತ್ತಿರುವ ಕಾರಣ ಹೆಚ್ಚಿನ ಕೃಷಿ ಗದ್ದೆಗಳನ್ನು ಮಣ್ಣು ತುಂಬಿಸಿ ಸೈಟ್ ಆಗಿ ಪರಿವರ್ತಿಸುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಬೃಹತ್ ಲಾರಿಗಳು ಮಣ್ಣು ಹೊತ್ತು ತರುವ ಕಾರಣ ರಸ್ತೆ ನಾಶವಾಗಿ ಹೊಂಡ ಗುಂಡಿ ಹೆಚ್ಚಿದೆ.
ಅಭಯಚಂದ್ರ ಜೈನ್ ಬಂದರು ಮತ್ತು ಮೀನುಗಾರಿಕಾ ಸಚಿವರಾಗಿದ್ದ ಸಮಯ ಮೀನುಗಾರಿಕಾ ಇಲಾಖೆ ಕಿಂಡಿ ರಸ್ತೆಗಳ ಅಭಿವೃದ್ಧಿಯಡಿ ರಸ್ತೆ ನಿರ್ಮಿಸಲಾಗಿತ್ತು. ಈ ರಸ್ತೆಯಿಂದಾಗಿ ಮೂಲ್ಕಿಯ ಚಿತ್ರಾಪು ಸಹಿತ ಬಹಳಷ್ಟು ಪ್ರದೇಶಗಳ ನಾಗರಿಕರಿಗೆ ಸಹಕಾರಿಯಾಗಿತ್ತು. ನಿರ್ಮಾಣ ಸಮಯದಲ್ಲಿ ನದಿಬದಿಗೆ ಶೇಡಿ ಮಣ್ಣು ತುಂಬಿಸಿ ರಸ್ತೆ ಮಾಡಿರುವ ಕಾರಣ ಮೇಲಿನ ಒತ್ತಡಕ್ಕೆ ಮಣ್ಣು ಜಾರಿ ತಡೆಗೋಡೆಗೆ ಒತ್ತಡ ನೀಡುತ್ತಿದ್ದು, ಗೋಡೆ ಕುಸಿಯಲು ಕಾರಣವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಹಿಂದೊಮ್ಮೆ ದುರಸ್ತಿಯಾಗಿತ್ತು: ಈ ಪ್ರದೇಶದಲ್ಲಿ ಹಿಂದೆಯೂ ಕುಸಿತವಾಗಿದ್ದು, ಅದನ್ನು ದುರಸ್ತಿ ಮಾಡಲಾಗಿದೆ. ಆದರೂ ಇದೀಗ ತಡೆಗೋಡೆ ಸಂಪೂರ್ಣ ವಾಲಿದ್ದು ಸಾಯಂಕಾಲ ವಿಹಾರಕ್ಕಾಗಿ ಬಂದು ಕುಳಿತಿರುವ ಸಮಯ ಗೋಡೆ ಕುಸಿದರೆ ರಸ್ತೆಯೊಂದಿಗೆ ಜೀವಹಾನಿಯೂ ಅಗಬಹುದು. ಜನಪ್ರತಿನಿಧಿಗಳು ಈ ಬಗ್ಗೆ ತಕ್ಷಣ ಗಮನ ಹರಿಸಿ ಮಳೆಗಾಲದ ಒಳಗೆ ಸಂಪೂರ್ಣ ದುರಸ್ತಿ ಮಾಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಹಿಂದೆ ಒಂದು ಕಡೆಯಲ್ಲಿ ರಿಪೇರಿ ನಡೆಸಿ ಕಾಂಕ್ರಿಟ್ ಮೋರಿ ಹಾಕಲಾಗಿತ್ತು. ಇದೀಗ ಇನ್ನೊಂದೆಡೆ ಸಮಸ್ಯೆ ಪ್ರಾರಂಭವಾಗಿದ್ದು ತಕ್ಷಣ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
ವಿನೋದ್ ಬೊಳ್ಳೂರು, ಜಿಪಂ ಸದಸ್ಯ