ಜಿಲ್ಲೆ

ಹದಗೆಟ್ಟ ರಸ್ತೆ, ಸಂಚಾರ ದುಸ್ತರ

Dakshina Kannada

ಮೂಲ್ಕಿ: ಮೂಲ್ಕಿ ಕೆರೆಕಾಡಿನ ಮುಖ್ಯರಸ್ತೆಯ ಕಾಂಕ್ರೀಟ್ ಕಾಮಗಾರಿ ಏಕಾಏಕಿ ಸ್ಥಗಿತಗೊಂಡಿರುವ ಕಾರಣ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗುತ್ತಿದೆ.

ರಾಜ್ಯಸಭಾ ಸದಸ್ಯರ ಮೂಲಕ ಸರ್ಕಾರದಿಂದ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಉದ್ದೇಶಿಸಲಾಗಿದೆ. ಈ ಹಿಂದೆ ಹಾಕಲಾಗಿದ್ದ ಡಾಂಬರು ತೆಗೆದು ಕಾಂಕ್ರೀಟ್ ಕಾಮಗಾರಿ ನಡೆಸಲಾಗುತ್ತಿತ್ತು. 15 ದಿನಗಳಿಂದ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿದೆ.

ಅಪಾಯಕಾರಿ ತಿರುವಿನಲ್ಲಿ ರಸ್ತೆ ವಿಸ್ತರಿಸಿ ತಗ್ಗು ಪ್ರದೇಶಕ್ಕೆ ಮಣ್ಣು ತುಂಬಿಸಿ, ಎತ್ತರ ಪ್ರದೇಶದ ಮಣ್ಣು ತೆಗೆದು ಸಮತಟ್ಟುಗೊಳಿಸಿ ರಸ್ತೆ ನಿರ್ಮಿಸುತ್ತಿದ್ದು, ಡಾಂಬರು ರಸ್ತೆ ಸಂಪೂರ್ಣವಾಗಿ ಅಗೆದು ಜಲ್ಲಿಕಲ್ಲು ಹಾಕಲಾಗಿದೆ. ಒಂದು ವಾರ ಮಳೆ ಸುರಿದ ಕಾರಣ ರಸ್ತೆ ಸಂಪೂರ್ಣ ಕೆಸರುಮಯವಾಗಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ. ಮೂಲ್ಕಿ ಪ್ರದೇಶಕ್ಕೆ ಹೋಗಲು ಕೆರೆಕಾಡಿನ ಜನರು ಎರಡು ಕಿಲೋಮೀಟರ್ ಸುತ್ತಿ ಬಳಸಿ ಸಂಚರಿಸುತ್ತಿದ್ದಾರೆ. ಮಳೆ ಕಾರಣ ನೀಡಿ ಕಾಮಗಾರಿ ನಿಲ್ಲಿಸಿರುವುದರಿಂದ ತೀವ್ರ ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಗ್ರಾಮೀಣ ಪ್ರದೇಶ ಹಾಗೂ ಕೊರಗರ ಕಾಲನಿ ಸಂಪರ್ಕಿಸುವ ರಸ್ತೆಯಾದ ಕಾರಣ ಶಾಸಕರು ಮುತುವರ್ಜಿಯಿಂದ ಅನುದಾನ ಪಡೆಯಲು ಶ್ರಮಿಸಿದ್ದಾರೆ. ಕಾಂಕ್ರೀಟ್ ಕಾಮಗಾರಿ ಆರಂಭಿಸುವ ವೇಳೆ ಮಳೆ ಬಂದ ಕಾರಣ ಕಾಮಗಾರಿ ಮೊಟಕುಗೊಳಿಸಲಾಗಿದೆ. ಸದ್ಯ ಬಿಸಿಲಿನ ಲಕ್ಷಣ ತೋರಿದ ಕಾರಣ ಮುಂದಿನ ವಾರ ಕಾಮಗಾರಿ ಪ್ರಾರಂಭಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ವಿನೋದ್ ಕುಮಾರ್ ಜಿಲ್ಲಾ ಪಂಚಾಯಿತಿ ಸದಸ್ಯ, ಬೊಳ್ಳೂರು