ಜಿಲ್ಲೆ

ಸರ್ವೀಸ್ ರಸ್ತೆ ಸುಧಾರಿಸದ ವ್ಯವಸ್ಥೆ

Dakshina Kannada

ಮಂಗಳೂರು: ಯಾವಾಗಲೂ ಮಳೆಗಾಲ ಆರಂಭವಾಗಿ ಪ್ರಬಲವಾಗಿ ಒಂದೆರಡು ಮಳೆ ಸುರಿದ ಬಳಿಕ ಹೊಂಡ ಗುಂಡಿಗಳಿಂದ ತುಂಬುವ ಮಂಗಳೂರಿನ ಪ್ರಮುಖ ಸರ್ವೀಸ್ ರಸ್ತೆಗಳು ಈ ಬಾರಿ ಮಳೆಗಾಲ ಆರಂಭಕ್ಕೆ ಮುನ್ನವೇ ಹದಗೆಟ್ಟಿದೆ. ಕೂಳೂರು -ಕುಂಟಿಕಾನ್ ಫ್ಲೈ ಓವರ್‌ನ ಸರ್ವೀಸ್ ರಸ್ತೆಗಳಲ್ಲಿ ಸಂಚರಿಸುವುದೇ ಕಷ್ಟವಾಗುತ್ತಿದೆ.

ಪ್ರತಿವರ್ಷ ಮಳೆಗಾಲ ಆರಂಭವಾಯಿತೆಂದರೆ ಕೂಳೂರು ಮೇಲ್ಸೇತುವೆ ಬಳಿಯ ಸರ್ವೀಸ್ ರಸ್ತೆ ಹಾಳಾಗುತ್ತಿದ್ದು, ಈ ಬಾರಿ ಅದಕ್ಕೆ ಮೊದಲೇ ಹೊಂಡ ಗುಂಡಿಗಳಿಂದ ತುಂಬಿದೆ. ಯಾವಾಗ ಫ್ಲೈಓವರ್ ಆರಂಭವಾಯಿತೋ ಅಂದಿನಿಂದ ಇಂದಿನವರೆಗೂ ಸರ್ವೀಸ್ ರಸ್ತೆ ಸಮಸ್ಯೆ ಅಂತ್ಯ ಕಂಡೇ ಇಲ್ಲ. ಕೂಳೂರು ಜಂಕ್ಷನ್‌ನಿಂದ ಕೊಟ್ಟಾರ ಚೌಕಿ ಕಡೆ ಹೋಗುವ ಸರ್ವೀಸ್ ರಸ್ತೆ ಹದಗೆಟ್ಟಿದ್ದು, ಈಗಾಗಲೇ ಹೊಂಡಗುಂಡಿಗಳು ಎದ್ದಿವೆ. ದೊಡ್ಡ ಮಳೆ ಬಂದರೆ ರಿಲಾಯನ್ಸ್ ಪೆಟ್ರೋಲ್ ಪಂಪ್ ಬಳಿ ಸರ್ವೀಸ್ ರಸ್ತೆ ಇದೆಯೋ ಇಲ್ಲವೋ ಎಂದು ಗೊತ್ತಾಗದಷ್ಟು ನೀರು ತುಂಬುತ್ತದೆ. ದ್ವಿಚಕ್ರ ವಾಹನ ಸವಾರರು ಹೆದ್ದಾರಿ ಗುಂಡಿ ತಪ್ಪಿಸಲು ಸರ್ಕಸ್ ಮಾಡಬೇಕು.

ಕುಂಟಿಕಾನ ಬಳಿ ಕೊಟ್ಟಾರ ಚೌಕಿಯಿಂದ ಮಂಗಳೂರು ಕಡೆ ಹೋಗುವಾಗ ಲೋಹಿತ್‌ನಗರ ಬಳಿ ಫ್ಲೈಓವರ್ ಬದಿಯಲ್ಲೇ ಎಡಗಡೆ ಬಿಎಂಎಸ್ ಹೋಟೆಲ್, ಅದ್ವೈತ್ ಹುಂಡೈ, ಭಾರತ್ ಆಟೋ ಕಾರ್ಸ್‌ ಮುಂಭಾಗ ಸರ್ವೀಸ್ ರಸ್ತೆ ಹಾದು ಹೋಗುತ್ತದೆ. ಒಳಚರಂಡಿ ಕಾಮಗಾರಿಗೆಂದು ರಸ್ತೆ ಮಧ್ಯೆ ಗುಂಡಿ ತೋಡಿ, ಪೈಪ್ ಅಳವಡಿಸಿ ಮಣ್ಣು ಹಾಕಿ ಮುಚ್ಚಲಾಗಿದೆ. ರಸ್ತೆಗೆ ಮರು ಡಾಂಬರು ಹಾಕುವ ಕೆಲಸ ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ. ಹಿಂದೊಮ್ಮೆ ರಸ್ತೆಗೆ ಜಲ್ಲಿ, ಸಿಮೆಂಟ್ ಮಿಕ್ಸ್ ಹಾಕಲಾಗಿದ್ದು, ಅದು ಮಳೆಗೆ ಎದ್ದು ಹೋಗಿ ಹೊಂಡಗಳು ಎದ್ದಿವೆ. ರಸ್ತೆಯಲ್ಲಿ ದೊಡ್ಡದೊಡ್ಡ ಜಲ್ಲಿ ಕಲ್ಲುಗಳೇ ಎದ್ದು ವಾಹನ ಸಂಚಾರವೇ ಸವಾಲು ಎಂಬಂತಾಗಿದೆ.

ವಾಹನ ಕಡಿಮೆ, ಗುಂಡಿ ಹೆಚ್ಚು: 
ಈ ಬಾರಿ ಏಪ್ರಿಲ್ ಕೊನೇ ವಾರದಿಂದ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ರಸ್ತೆಗಿಳಿಯುವ ವಾಹನಗಳ ಸಂಖ್ಯೆ ಕಡಿಮೆಯಾಗಿದೆ. ಅದರಲ್ಲೂ ಬಸ್‌ಗಳಂತೂ ಒಂದು ತಿಂಗಳಿಂದ ಸಂಚರಿಸಿಯೇ ಇಲ್ಲ. ಆದರೂ ಕೂಳೂರು ಸರ್ವೀಸ್ ರಸ್ತೆಯಲ್ಲಿ ಗುಂಡಿಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ವಾಹನಗಳ ಸಂಖ್ಯೆ ಕಡಿಮೆ ಇರುವಾಗಲೇ ಈ ರಸ್ತೆ ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎನ್ನುತ್ತಾರೆ ಜನ.

ತೊಕ್ಕೊಟ್ಟು, ಪಂಪ್‌ವೆಲ್‌ನಲ್ಲೂ ಅರೆಬರೆ: ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಸಂದರ್ಭ ತೊಕ್ಕೊಟ್ಟು ಮತ್ತು ಪಂಪ್‌ವೆಲ್ನಲ್ಲಿ ಸರ್ವೀಸ್ ರಸ್ತೆ ನಿರ್ಮಿಸಿದ್ದು ಅದರ ಅರೆಬರೆ ಕೆಲಸದಿಂದ ವಾಹನ ಸವಾರರು, ಸಾರ್ವಜನಿಕರು ಎಚ್ಚರ ತಪ್ಪಿದರೆ ದೇವರ ಪಾದ ಇಲ್ಲವೇ ಆಸ್ಪತ್ರೆಯ ಐಸಿಯು ಸೇರುವುದು ಗ್ಯಾರಂಟಿ ಎಂಬಂತಾಗಿದೆ! ತೊಕ್ಕೊಟ್ಟು -ಉಳ್ಳಾಲ ಅಡ್ಡರಸ್ತೆಯಿಂದ ನಾಗನ ಕಟ್ಟೆವರೆಗೆ ಮೇಲ್ಸೇತುವೆ ಇದ್ದು ಇಲ್ಲಿ ಎರಡು ಭಾಗದಲ್ಲಿ ಸರ್ವೀಸ್ ರಸ್ತೆ ಇದೆ. ಇದು ಅತ್ಯಂತ ಇಕ್ಕಟ್ಟಿನ ರಸ್ತೆ, ಜತೆಗೆ ಹೊಂಡ ಎದ್ದಿದ್ದು, ಮಳೆ ಬಂದಾಗ ನೀರು ಹರಿಯಲೂ ಜಾಗವಿಲ್ಲ. ಇದರ ಮಧ್ಯೆ ತೊಕ್ಕೊಟ್ಟು ಜಂಕ್ಷನ್‌ನಿಂದ ತಲಪಾಡಿಯತ್ತ ಹೋಗುವ ಹಳೇ ಚೆಕ್‌ಪೋಸ್ಟ್ ಮುಂಭಾಗ ಚರಂಡಿ ಕೆಲಸ ಅರ್ಧದಲ್ಲಿದ್ದು, ಇದರಿಂದ ವಾಹನ ಸವಾರರು ಮತ್ತು ಪಾದಚಾರಿಗಳು ಆತಂಕದಲ್ಲೇ ಸಂಚರಿಸಬೇಕು. ಇಲ್ಲಿ ಕಳೆದ ವರ್ಷ ಲಾರಿ ಬಿದ್ದು ಓರ್ವನ ಪ್ರಾಣವೂ ಹೋಗಿತ್ತು. ಆದರೂ ಚರಂಡಿ ಕಾಮಗಾರಿ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಗುತ್ತಿಗೆ ಸಂಸ್ಥೆ ನಿರ್ಲಕ್ಷೃ ತಾಳಿದೆ. ಇಂಥದ್ದೇ ಅಪಾಯ ಪಂಪ್ ಗೋರಿಗುಡ್ಡೆಯಿಂದ ಪಂಪ್‌ವೆಲ್ವರೆಗೆ ಇದೆ. ಗೋರಿಗುಡ್ಡದಿಂದ ಪಂಪ್‌ವೆಲ್ಗೆ ಸಂಚರಿಸುವ ಸರ್ವೀಸ್ ರಸ್ತೆ ಬದಿ ತೆರೆದ ಚರಂಡಿ ಮಾತ್ರವಲ್ಲದೆ ಬೃಹತ್ ನಾಲೆಯೂ ಇದೆ. ಇದು ತೆರೆದೇ ಇರುವುದರಿಂದ ವಾಹನ ಸವಾರರು ಮತ್ತು ಸಾರ್ವಜನಿಕರು ಆತಂಕದಲ್ಲೇ ಸಂಚರಿಸಬೇಕಿದೆ.