ಜಿಲ್ಲೆ

ಮಹದೇವಪುರ ರಸ್ತೆಯಲ್ಲಿ ಭತ್ತದ ನಾಟಿ: ದುರಸ್ತಿ ಮಾಡದಕ್ಕೆ ಗ್ರಾಮಸ್ಥರ ಆಕ್ರೋಶ

ಮಂಡ್ಯ: ಪ್ರತಿನಿತ್ಯ ನೂರಾರೂ ವಾಹನ ಸಂಚರಿಸುವ ಮುಖ್ಯರಸ್ತೆಯನ್ನು ದುರಸ್ತಿ ಮಾಡದಿರುವುದನ್ನು ಖಂಡಿಸಿ ಶ್ರೀರಂಗಪಟ್ಟಣ ತಾಲೂಕು ಮಹದೇವಪುರದಲ್ಲಿ ಗ್ರಾಮಸ್ಥರು ಭತ್ತದ ನಾಟಿ ಮಾಡಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಗುಂಡಿ ಬಿದ್ದು ಕೆಸರು ನೀರು ತುಂಬಿಕೊಂಡಿದ್ದ ಗ್ರಾಮದ ಮುಖ್ಯರಸ್ತೆಯಲ್ಲಿ ಭತ್ತದ ಪೈರು ನೆಟ್ಟು ಶಾಸಕ ರಮೇಶ ಬಂಡಿಸಿದ್ದೇಗೌಡ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ರಸ್ತೆ ಮಧ್ಯೆ ದೊಡ್ಡ ಗುಂಡಿಗಳಾಗಿದ್ದರೂ ದುರಸ್ತಿ ಮಾಡದೇ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಧಿಕ್ಕಾರ ಕೂಗಿದರು.

ಗ್ರಾಮದ ಮುಖ್ಯರಸ್ತೆಯಲ್ಲಿ ಮಂಡ್ಯ, ಬನ್ನೂರು ಮಾರ್ಗದ ನೂರಾರು ವಾಹನಗಳು ಮೈಸೂರು ಕಡೆ ಪ್ರತಿನಿತ್ಯ ಸಂಚರಿಸುತ್ತಿರುತ್ತವೆ. ಜತೆಗೆ ಶಾಲಾ- ಕಾಲೇಜು ವಾಹನಗಳು ಸಂಚಾರ ಮಾಡುತ್ತವೆ. ಇನ್ನು ದ್ವಿಚಕ್ರ ವಾಹನ ಸವಾರರು ಜೀವ ಭಯದಲ್ಲೇ ಓಡಾಡಬೇಕಾದ ಪರಿಸ್ಥಿತಿ ಇದೆ. ಇಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಈಗಾಗಲೇ ಹಲವು ವಾಹನ ಸವಾರರು ಕೆಳಕ್ಕೆ ಬಿದ್ದು ಪೆಟ್ಟು ಮಾಡಿಕೊಂಡಿರುವ ಉದಾಹರಣೆಗಳಿವೆ ಎಂದು ಬೇಸರ ವ್ಯಕ್ತಪಡಿಸಿದರು.

ದಿನನಿತ್ಯ ಎಗ್ಗಿಲ್ಲದೆ ಸಂಚರಿಸುವ ಕ್ರಷರ್ ಟಿಪ್ಪರ್ ಮತ್ತು ಲಾರಿಗಳಿಂದ ರಸ್ತೆ ಹದಗೆಟ್ಟಿದೆ. ರಸ್ತೆ ಸರಿಪಡಿಸಿಕೊಡುವಂತೆ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗೆ ಮನವಿ ಮಾಡಿಕೊಳ್ಳಲಾಗಿದೆ. ಆದರೂ ಗಮನಹರಿಸುತ್ತಿಲ್ಲ. ಆದ್ದರಿಂದ ಹೆಚ್ಚಿನ ಅವಘಢಗಳು ಸಂಭವಿಸುವ ಮುನ್ನ ಎಚ್ಚೆತ್ತುಕೊಂಡು ರಸ್ತೆ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿದರು.

ಗ್ರಾಮಸ್ಥರಾದ ರಾಮಚಂದ್ರ, ವೆಂಕಟರಮಣ, ಜಯರಾಂ, ಮನು, ಸುಧಾಕರ್, ಲಿಂಗಣ್ಣ, ಭಾಸ್ಕರ್, ಕಿಟ್ಟಿ ಇದ್ದರು.