ಹೊಂಡ ಗುಂಡಿಗಳಿಂದ ಕೂಡಿದ ದೇರ್ಲ ಪರಿಶಿಷ್ಟ ಜಾತಿ ಕಾಲನಿ ಭಾಗದ ರಸ್ತೆ. 
ಜಿಲ್ಲೆ

ದೇರ್ಲ ರಸ್ತೆಯಲ್ಲಿ ಸಂಚಾರ ಕಷ್ಟ: ಹೊಂಡಗುಂಡಿ, ಕೆಸರುಮಯ ದಾರಿ: ಪರಿಶಿಷ್ಟ ಕಾಲನಿ ವ್ಯಾಪ್ತಿ ಪರಿಸ್ಥಿತಿ ಶೋಚನೀಯ

ಸೌಮ್ಯ ಆರ್

ಶಶಿ ಕುತ್ಯಾಳ ಈಶ್ವರಮಂಗಲ

ಬಹುತೇಕ ಕಡೆಗಳಲ್ಲಿ ಸಂಪರ್ಕ ರಸ್ತೆಗಳು ಸೇರಿದಂತೆ ಹೆಚ್ಚಿನ ರಸ್ತೆಗಳು ಕಾಂಕ್ರಿಟೀಕರಣಗೊಳ್ಳುವ ಮೂಲಕ ಅಭಿವೃದ್ಧಿ ಕಂಡಿವೆ. ಆದರೆ ಕೆಯ್ಯೂರು ಗ್ರಾಮದ ಇಳಂತಾಜೆಯಿಂದ ಶೇಖಮಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ದೇರ್ಲ ಪರಿಶಿಷ್ಟ ಕಾಲನಿ ವ್ಯಾಪ್ತಿಯಲ್ಲಿ ತೀರಾ ಹದಗೆಟ್ಟಿದೆ. ಬೇಸಿಗೆಯಲ್ಲಿ ಹೊಂಡಗುಂಡಿಗಳಿಗೆ ಹಾಕಲಾದ ಮಣ್ಣು ಇದೀಗ ಕೆಸರುಮಯವಾಗಿ ರಸ್ತೆ ಸಂಚಾರಕ್ಕೆ ಸಂಕಷ್ಟ ಎದುರಾಗಿದೆ. ವಾಹನ ಸವಾರರು ‘ಸರ್ಕಸ್’ ಸವಾರಿ ಮಾಡಬೇಕಾದ ಪ್ರಮೇಯ ಬಂದಿದೆ.

ಕೆಯ್ಯೂರು-ಕೌಡಿಚ್ಚಾರು ರಸ್ತೆಯ ಇಳಂತಾಜೆಯಿಂದ ದೇರ್ಲ-ಅರಿಯಡ್ಕ ಮೂಲಕವಾಗಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಶೇಕಮಲೆಯಲ್ಲಿ ಸಂಪರ್ಕ ಕಲ್ಪಿಸುವ ಇಳಂತಾಜೆ-ಶೇಖಮಲೆ ರಸ್ತೆ, ದೇರ್ಲ ಮಠದಿಂದ ದೇರ್ಲ ಪರಿಶಿಷ್ಟ ಕಾಲನಿಯ ತನಕ ಸಂಪೂರ್ಣವಾಗಿ ಹದಗೆಟ್ಟಿದೆ. ಹಲವು ವರ್ಷಗಳ ಹಿಂದೆ ಸಡಕ್ ಯೋಜನೆಯಲ್ಲಿ ಈ ರಸ್ತೆಯ ಡಾಂಬರೀಕರಣ ನಡೆದಿತ್ತು. ಆದರೆ ಈಗ ಇಳಂತಾಜೆ ಏರಡ್ಕದಿಂದ ದೇರ್ಲ ಅಂಗನವಾಡಿ ಕೇಂದ್ರದ ತನಕದ ಸುಮಾರು ಅರ್ಧ ಕಿಲೋ ಮೀಟರ್ ವ್ಯಾಪ್ತಿಯ ರಸ್ತೆಯಲ್ಲಿ ಡಾಂಬರು ಎದ್ದು ಹೋಗಿದ್ದು, ಅಲ್ಲಲ್ಲಿ ಹೊಂಡಗುಂಡಿಗಳಾಗಿವೆ.

ಡಾಂಬರು ಎದ್ದು ಹೋಗಿ ಹೊಂಡ-ಗುಂಡಿಗಳಾದ ರಸ್ತೆ ಭಾಗಕ್ಕೆ ಕಳೆದ ಬೇಸಿಗೆಯಲ್ಲಿ ಮಣ್ಣು ಹಾಕಿ ರಸ್ತೆ ಗುಂಡಿಗಳನ್ನು ಮುಚ್ಚಲಾಗಿತ್ತು. ಇದೀಗ ಮಳೆಗಾಲದ ಆರಂಭದಲ್ಲೇ ರಸ್ತೆಯ ಹೊಂಡ-ಗುಂಡಿಗಳಿಗೆ ತುಂಬಲಾಗಿದ್ದ ಮಣ್ಣು ಕೊಚ್ಚಿ ಹೋಗಿ ರಸ್ತೆ ಸಂಪೂರ್ಣ ಕೆಸರುಮಯವಾಗಿರುವುದಲ್ಲದೆ, ಹೊಂಡ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಂಡಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ, ಅದರಲ್ಲೂ ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರಿಗೆ ಸಮಸ್ಯೆ ಎದುರಾಗಿದೆ. ಏರು ಭಾಗದಲ್ಲೇ ರಸ್ತೆ ಹದಗೆಟ್ಟು ಕೆಸರುಮಯವಾಗಿರುವುದರಿಂದ ಪ್ರಾಣಾಪಾಯದ ಭೀತಿ ಇದೆ.

ರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ರಸ್ತೆ ಹೊಂಡಗುಂಡಿಗಳನ್ನು ಶೀಘ್ರವೇ ಮುಚ್ಚಿ ರಸ್ತೆ ದುರಸ್ತಿಗೊಳಿಸಲು ಸಂಬಂಧಪಟ್ಟವರು ಕ್ರಮಕೈಗೊಳ್ಳಬೇಕು. ಶಾಸಕರು ಈ ಬಗ್ಗೆ ಗಮನ ಹರಿಸಿ ಶೀಘ್ರವೇ ರಸ್ತೆಯ ಹೊಂಡಗುಂಡಿಗಳನ್ನು ಮುಚ್ಚಿಸುವ ಕೆಲಸ ಮಾಡಬೇಕು ಎಂಬುವುದು ಗ್ರಾಮಸ್ಥರ ಮನವಿ.

ಬಸ್ ಓಡಾಟ ನಿಲ್ಲುವ ಭೀತಿ

ದೇರ್ಲ ಪರಿಶಿಷ್ಟ ಜಾತಿ ಕಾಲನಿ ಪ್ರದೇಶದಲ್ಲಿ ನೂರಾರು ಮನೆಗಳಿವೆ. ಅಂಗನವಾಡಿ ಕೇಂದ್ರವೊಂದಿದೆ. ಈ ವ್ಯಾಪ್ತಿಯಲ್ಲೇ ಎಟ್ಯಡ್ಕ ದೇರ್ಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೂ ಇದೆ. ಈ ಶಾಲೆಗೆ ಬರುವ ಎಳೆಯ ಮಕ್ಕಳು, ಈ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ರಸ್ತೆಯನ್ನೇ ಅವಲಂಬಿಸಿಕೊಂಡಿದ್ದಾರೆ. ರಸ್ತೆಯಲ್ಲಿ ಕೆಸರುಮಣ್ಣು ತುಂಬಿಕೊಂಡಿರುವುದರಿಂದ ನಡೆದುಕೊಂಡು ಹೋಗಲು ಕೂಡ ಕಷ್ಟವಾಗಿದೆ ಎನ್ನುವುದು ಆ ಭಾಗದ ವಿದ್ಯಾರ್ಥಿಗಳ ಮತ್ತು ದಿನನಿತ್ಯ ಈ ರಸ್ತೆಯಲ್ಲಿ ತೆರಳುವ ಗ್ರಾಮಸ್ಥರ ಅಳಲು. ಕೆಎಸ್ಸಾರ್ಟಿಸಿ ಬಸ್, ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಕರೆದೊಯ್ಯುವ ಶಾಲಾ ಬಸ್ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ರಸ್ತೆ ಇನ್ನಷ್ಟು ಹದಗೆಟ್ಟರೆ ಬಸ್ ಸಂಚಾರವೂ ಸ್ಥಗಿತಗೊಳ್ಳಬಹುದು ಇಲ್ಲಿನ ಮಂದಿಯ ಆತಂಕ.

ದೇರ್ಲ ಮಠದಿಂದ ದೇರ್ಲ ಪರಿಶಿಷ್ಟ ಕಾಲನಿಯ ತನಕದ ಸುಮಾರು ಅರ್ಧ ಕಿ.ಮೀ. ರಸ್ತೆಯಲ್ಲಿ ಹೊಂಡಗುಂಡಿಗಳಾಗಿವೆ. ಬೇಸಿಗೆಯಲ್ಲಿ ಹೊಂಡಗುಂಡಿಗಳಿಗೆ ಹಾಕಿ ಮುಚ್ಚಲಾದ ಮಣ್ಣು ಈಗ ಕೆಸರುಮಯವಾಗಿ ಸಂಚಾರಕ್ಕೆ ಸಮಸ್ಯೆಯಾಗಿ ಕಾಡಿದೆ. ಸಂಬಂಧಪಟ್ಟವರು ರಸ್ತೆಯನ್ನು ದುರಸ್ತಿಗೊಳಿಸಿ ಸಂಚಾರ ಯೋಗ್ಯವನ್ನಾಗಿಸುವ ಮೂಲಕ ಈ ಭಾಗದ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಿಕೊಡಬೇಕು - ಬಾಬು ಪಾಟಾಳಿ, ದೇರ್ಲ ಗ್ರಾಮಸ್ಥ ದೇರ್ಲ ಪರಿಶಿಷ್ಟ ಜಾತಿ ಕಾಲನಿ ವ್ಯಾಪ್ತಿಯಲ್ಲಿ ಹಾದು ಹೋಗುವ ರಸ್ತೆಯಲ್ಲಿ ಸುಮಾರು 500 ಮೀ ದೂರದವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ಭಾಗದ ರಸ್ತೆಯು ಹೊಂಡ-ಗುಂಡಿಗಳಿಂದ ತುಂಬಿ ಕೆಸರುಮಯವಾಗಿದೆ. ಇದರಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಸೇರಿದಂತೆ ಗ್ರಾಮಸ್ಥರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಗ್ರಾಮಸ್ಥರ ಮನವಿಯಂತೆ ಶಾಸಕರಿಗೆ ಕೋರಿಕೆ ಸಲ್ಲಿಸಿ, ವಾಸ್ತವ ಸ್ಥಿತಿ ಮನವರಿಕೆ ಮಾಡಿದ್ದೇವೆ. ಶೀಘ್ರದಲ್ಲೇ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದ್ದಾರೆ - ಬಟ್ಯಪ್ಪ ರೈ ದೇರ್ಲ, ಕೆಯ್ಯೂರು ಗ್ರಾಪಂ ಸದಸ್ಯ https://www.vijayavani.net/a-herd-of-wildebeest-at-kottanguli-mulleri https://www.vijayavani.net/development-work-start-in-bajpe