-ನರೇಂದ್ರ ಎಸ್.ಮರಸಣಿಗೆ ಹೆಬ್ರಿ
ಸಿದ್ದಾಪುರ ಹಾಗೂ ಹೆಬ್ರಿ ಸಂಪರ್ಕಿಸುವ ಬಡ್ತಾನಬೈಲಿನಿಂದ ಹಾಲಿಕೋಡ್ಲು ತನಕ ಕೆಲವು ಕಿಲೋಮೀಟರ್ ರಸ್ತೆ ಅತ್ಯಂತ ಕಿರಿದಾಗಿದ್ದು ಬೃಹತ್ ವಾಹನಗಳು ಬಂದಾಗ ಸೈಡ್ ಕೊಡಲು ಸಾಧ್ಯವಾಗುವುದಿಲ್ಲ. ಈ ರಸ್ತೆಯಲ್ಲಿ ಸಂಚರಿಸುವುದು ಬಹಳ ಕಷ್ಟಕರವಾಗಿದೆ.
ರಸ್ತೆ ಕಿರಿದಾಗಿದೆ ಒಂದು ಬೃಹತ್ ವಾಹನ ಬಂದರೆ ಇನ್ನೊಂದು ವಾಹನ ರಸ್ತೆಯಿಂದ ಕೆಳಗಿಳಿಸಬೇಕು. ಅಲ್ಲಲ್ಲಿ ರಸ್ತೆ ನೆಲದಿಂದ ಬಹಳ ಎತ್ತರದಲ್ಲಿರುವುದರಿಂದ ವಾಹನ ರಸ್ತೆ ಬಿಟ್ಟು ಕೆಳಗೆ ಇಳಿಸಲು ಸಾಧ್ಯವಾಗುವುದಿಲ್ಲ. ಜನರು ಉತ್ತಮ ರಸ್ತೆಯ ನಿರೀಕ್ಷೆಯಲ್ಲಿದ್ದಾರೆ.
ಹಿಂದೆ ಕುಂದಾಪುರ ಹೋಗುವವರು ಕುಂದಾಪುರ ಆಲ್ಬಾಡಿ ಬೇಳಂಜೆ ಮಾರ್ಗವಾಗಿ ಹೆಬ್ರಿ ಹೋಗುತ್ತಿದ್ದರು. ಸೇತುವೆ ಸಹಿತ ಕಿಂಡಿಅಣೆಕಟ್ಟು ಚಾರದ ಬಳಿ ನಿರ್ಮಾಣವಾಗುತ್ತಿರುವುದರಿಂದ ಬದಲಿ ಮಾರ್ಗ ಕಿರಿದು ಹಾಗೂ ದೂರವಾಗಿರುವುದರಿಂದ ಪ್ರತಿನಿತ್ಯ ಜನರು ಇದೇ ರಸ್ತೆ ಅವಲಂಬಿಸಿದ್ದಾರೆ. ಬಹುತೇಕ ಹೆಚ್ಚಿನ ವಾಹನಗಳು ಈ ರಸ್ತೆ ಬಳಸುತ್ತವೆ.
ಮಳೆಗಾಲದಲ್ಲಿ ರಸ್ತೆ ಬದಿಗೆ ಮಣ್ಣು ಹಾಕಿ ದುರಸ್ತಿ ಮಾಡಿದ್ದರೆ ಮಳೆಗಾಲದಲ್ಲಿ ರಸ್ತೆಗೆ ಹೊಂದಿಕೆಯಾಗುತ್ತಿತ್ತು. ವಾಹನ ಚಾಲನೆ ವೇಳೆ ಸ್ವಲ್ಪ ಯಾಮಾರಿದರು ಚರಂಡಿ ಬಹಳ ಸಮೀಪ ಇರುವುದರಿಂದ ಇನ್ನಷ್ಟು ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಿವೆ. ಆ ನಿಟ್ಟಿನಲ್ಲಿ ತಾತ್ಕಾಲಿಕ ದುರಸ್ತಿಯನ್ನಾದರೂ ಸಂಬಂಧಪಟ್ಟವರು ಮಾಡಬೇಕಾಗಿದೆ.
ರಸ್ತೆಗೆ ಅಲ್ಲಲ್ಲಿ ಅಪಾಯಕಾರಿ ಮರಗಳು ವಾಲಿಕೊಂಡಿವೆ. ಕಳೆದ ವರ್ಷ ಕೆಲವು ಮರಗಳು ಧರೆಗೆ ಉರುಳಿದ ಘಟನೆ ನಡೆದು ಕೆಲವು ವಿದ್ಯುತ್ ಕಂಬಗಳು ತುಂಡಾಗಿವೆ. ಅನೇಕ ಅಪಾಯಕಾರಿ ಮರಗಳ ತೆರವಿನ ಬಗ್ಗೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ದಿನ ನಿತ್ಯ ಅನೇಕ ವಾಹನಗಳು ಓಡಾಡುತ್ತಿರುವುದರಿಂದ ಅಪಾಯಕಾರಿ ಮರಗಳನ್ನು ಅರಣ್ಯ ಇಲಾಖೆ ತೆರವುಗೊಳಿಸುವುದು ಒಳಿತು.
ಈ ರಸ್ತೆ ವನ್ಯಜೀವಿ ವಿಭಾಗದಲ್ಲಿ ಬರುವುದರಿಂದ ರಸ್ತೆ ದುರಸ್ತಿ ಹಾಗೂ ಅಗಲೀಕರಣಕ್ಕೆ ಅರಣ್ಯ ಇಲಾಖೆ ಅಡ್ಡಿ ಇದೆ. ಯಾವುದೇ ಸಮಸ್ಯೆ ಇದ್ದರೂ ಅರಣ್ಯ ಇಲಾಖೆಯವರು ತಾತ್ಕಾಲಿಕ ದುರಸ್ತಿಗಾದರೂ ಅವಕಾಶ ಮಾಡಿಕೊಟ್ಟು ಜನರಿಗೆ ಉಪಯೋಗವಾಗಬೇಕೆಂದು ಜನ ಆಗ್ರಹಿಸುತ್ತಿದ್ದಾರೆ.
ಈ ರಸ್ತೆಯಲ್ಲಿ ಕಾರು ಮತ್ತಿತರ ವಾಹನಗಳು ಎದುರುಬದುರಾಗಿ ಸೈಡ್ ಕೊಡುವಾಗ ಸೈಡ್ ಮಿರರ್‌ಗಳು ಪರಸ್ಪರ ತಾಗಿ ಮುರಿಯುತ್ತವೆ. ಈಗಾಗಲೇ ಹಲವು ಕಾರುಗಳ ಸೈಡ್ ಮಿರರ‌್ಗಳು ಮುರಿದಿವೆ. ಗುಂಡಿ ತಪ್ಪಿಸುವ ಅಥವಾ ಸೈಡ್ ನೀಡುವ ಸಂದರ್ಭದಲ್ಲಿ ಇಂತಹ ಚಿಕ್ಕಪುಟ್ಟ ಅಪಘಾತಗಳು ನಿರಂತರವಾಗಿ ನಡೆಯುತ್ತಿವೆ. ವಾಹನಗಳು ವಿಪರೀತ ವೇಗವಾಗಿ ಬಂದರೆ ನಿಯಂತ್ರಣಕ್ಕೆ ತರುವುದು ಕೂಡ ಕಷ್ಟ. ಬೈಕ್ ಸವಾರರಿಗೆ ನರಕದರ್ಶನವಾಗುತ್ತದೆ.
ಈ ರಸ್ತೆಯ ಬಗ್ಗೆ ಪರಿಶೀಲನೆ ನಡೆಸಲು ಸ್ಥಳೀಯ ಅಧಿಕಾರಿಗಳಿಗೆ ತಿಳಿಸಲಾಗುವುದು. ಒಂದು ವೇಳೆ ಸಾಧ್ಯವಾಗುವುದಾದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗುವುದು.-ಗಣಪತಿ, ಡಿಸಿಎಫ್, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಕಾರ್ಕಳ ವಿಭಾಗ
ಈ ರಸ್ತೆಯಲ್ಲಿ ನಾವು ದಿನನಿತ್ಯ ಸಂಚರಿಸುತ್ತೇವೆ. ಕೆಲವೊಮ್ಮೆ ಭಾರಿ ಗಾತ್ರದ ವಾಹನಗಳು ಬಂದಾಗ ಸೈಡ್ ಕೊಡಲು ಸ್ಥಳವೇ ಇರುವುದಿಲ್ಲ.ವಾಹನ ರಸ್ತೆಯಿಂದ ಕೆಳಗಿಳಿಸಲು ಭಯವಾಗುತ್ತದೆ. ಸದ್ಯದ ಮಟ್ಟಿಗೆ ತಾತ್ಕಾಲಿಕ ದುರಸ್ತಿಯನ್ನಾದರೂ ಮಾಡಿಕೊಡಬೇಕು.-ಜಗದೀಶ್ ಕುಚ್ಚೂರು, ದಿನನಿತ್ಯ ವಾಹನ ಸವಾರ