ಜಿಲ್ಲೆ

ಮೇಲ್ದರ್ಜೆಗೇರಿದ ರಸ್ತೆಗಿಲ್ಲ ಡಾಂಬರು! : ಪುತ್ಯೆ- ಪಟ್ರಮೆ- ಧರ್ಮಸ್ಥಳ- ಸಂಚಾರ ದುಸ್ತರ ಮೈಲುಗಲ್ಲಿಗೆ ಸೀಮಿತ ಅಭಿವೃದ್ಧಿ

ಸ್ವಾತಿ ಬಾಳ್ತಿಲ್ಲಾಯ ಕೊಕ್ಕಡ

ಕಡಬ ತಾಲೂಕಿನ ನೆಲ್ಯಾಡಿಯಿಂದ ಬೆಳ್ತಂಗಡಿ ತಾಲೂಕಿನ ಪುತ್ಯೆ ಮಾರ್ಗವಾಗಿ ಪಟ್ರಮೆ ಮೂಲಕ ಧರ್ಮಸ್ಥಳ ಸಂಪರ್ಕಿಸುವ ರಾಜ್ಯ ಹೆದ್ದಾರಿ ಮೇಲ್ದರ್ಜೆಗೇರಿ ವರ್ಷ ಐದು ಕಳೆದರೂ ಅಭಿವೃದ್ಧಿ ಮಾತ್ರ ಶೂನ್ಯ. ಲೋಕೋಪಯೋಗಿ ಇಲಾಖೆ ಈ ರಸ್ತೆಯ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದ್ದು, ರಸ್ತೆ ಸುರಕ್ಷತೆ ಬಗ್ಗೆ ನಿರ್ಲಕ್ಷೃ ವಹಿಸುತ್ತಿರುವ ಬಗ್ಗೆ ಸಾರ್ವಜನಿಕರ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಪುತ್ಯೆಯಿಂದ ಧರ್ಮಸ್ಥಳವರೆಗಿನ 26 ಕಿ.ಮೀ. ರಸ್ತೆಯಲ್ಲಿ 50 ಮೀಟರ್‌ಗಳ ಅಂತರಗಳಲ್ಲಿ ಬೃಹತ್ ಹೊಂಡಗಳು ನಿರ್ಮಾಣವಾಗಿದ್ದು, ವಾಹನ ಸವಾರರ ಸಂಚಾರ ದುಸ್ತರವಾಗಿದೆ. ಅನಾರು, ಪಟ್ರಮೆ, ಪಟ್ಟೂರು, ಉಪ್ಪಾರಪಳಿಕೆ, ಹಳ್ಳಿಂಗೇರಿ, ಪುತ್ಯೆ ಭಾಗದ ಜನರು ಹೋಬಳಿ ಕೇಂದ್ರವಾದ ಕೊಕ್ಕಡವನ್ನು ತಲುಪಲು ಇದೇ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ರಾಜ್ಯದ ನಾನಾ ಭಾಗಗಳಿಂದ ಬರುವ ಭಕ್ತರು ಧರ್ಮಸ್ಥಳ, ಸೌತಡ್ಕ, ಕೊಕ್ಕಡ ಕ್ಷೇತ್ರಗಳನ್ನು ಸಂಪರ್ಕಿಸಲು ಇದೇ ರಸ್ತೆಯನ್ನು ಅವಲಂಬಿಸುವ ಅಗತ್ಯವಿದೆ.

ಹೆಸರು ಬದಲಿಸಿದರೂ ತಪ್ಪದ ಬವಣೆ: ಕೊಕ್ಕಡ- ಪಟ್ರಮೆ- ಧರ್ಮಸ್ಥಳ ರಸ್ತೆ ಐದು ವರ್ಷಗಳ ಹಿಂದೆ ಜಿ.ಪಂ. ರಸ್ತೆಯಾಗಿತ್ತು. ಈಗ ಮೇಲ್ದರ್ಜೆಗೇರಿ ದಿಡುಪೆ- ಪೈಚಾರು ರಾಜ್ಯ ಹೆದ್ದಾರಿಯಾಗಿದೆ. ಆದರೆ ಅಭಿವೃದ್ಧಿ ಮೈಲುಗಂಬಗಳಿಗಷ್ಟೇ ಸೀಮಿತವಾಗಿದೆ. ಗ್ರಾಮಸಭೆಗಳಲ್ಲಿ ದೂರುಗಳು ಕೇಳಿ ಬಂದರೂ ಪ್ರಯೋಜನ ಇಲ್ಲದಂತಾಗಿದೆ. ರಸ್ತೆಯುದ್ದಕ್ಕೂ ಪೊದೆಗಳಿದ್ದು, ಚರಂಡಿ ಮುಚ್ಚಿ ಹೋಗಿದ್ದು, ಮಳೆಯ ನೀರು ರಸ್ತೆಯಲ್ಲಿಯೇ ನಿಂತು ಹೊಂಡ ನಿರ್ಮಾಣವಾಗಿದೆ.

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬಾರದು. ಜನರ ಸೇವೆಗಾಗಿ ಇರುವವರು ಸೇವಕರಂತೆಯೇ ಇರಬೇಕು. ನಮ್ಮ ಭಾಗದ ರಸ್ತೆ ಅಭಿವೃದ್ಧಿ ಎಂದಾಗ ಅನುದಾನಗಳಿಲ್ಲ ಎಂಬ ಸಿದ್ಧ ಉತ್ತರ ಕೇಳಿಬರುತ್ತಿದೆ. ಆದರೆ ಬೇರೆ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಣುತ್ತಿದೆ. ಅಭಿವೃದ್ಧಿ ಮಾಡಲಾಗದವರು ರಾಜೀನಾಮೆ ನೀಡಿ ಬೇರೆಯವರಿಗೆ ಅವಕಾಶ ಮಾಡಿಕೊಡುವುದು ಉತ್ತಮ. ಕೊಕ್ಕಡ ಪಟ್ರಮೆ ಗ್ರಾಮಸ್ಥರು ಮತ್ತೆ ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯ. ಶ್ಯಾಮರಾಜ್ ಪಟ್ರಮೆ ಸಾಮಾಜಿಕ ಹೋರಾಟಗಾರ ರಸ್ತೆಯಲ್ಲಿ ಡಾಂಬರಿಗಿಂತ ಹೊಂಡಗಳೇ ಜಾಸ್ತಿಯಾಗಿವೆ. ರಸ್ತೆ ಬದಿ ಚರಂಡಿ ವ್ಯವಸ್ಥೆ ಇಲ್ಲದಿರುವುದು, ಕೊಕ್ಕಡದಿಂದ ಹಿಡಿದು ಪಟ್ರಮೆ ಮುಖಾಂತರ ಧರ್ಮಸ್ಥಳದವರೆಗೂ ನೀರು ಚರಂಡಿ ಬಿಟ್ಟು ರಸ್ತೆಯಲ್ಲೇ ಹರಿಯುತ್ತಿದೆ. ಈ ರಸ್ತೆಯು ರಾಜ್ಯ ಹೆದ್ದಾರಿಯಾಗಿ ಪರಿವರ್ತನೆಯಾಗಿ ಐದು ವರ್ಷಗಳಾದರೂ ಹಿಂದಿನ ಪರಿಸ್ಥಿತಿಯಲ್ಲೇ ಇದೆ. ವರ್ಷಕ್ಕೆ ಒಂದು ಬಾರಿ ರಸ್ತೆಗೆ ತೇಪೆ ಹಚ್ಚುವ ಕೆಲಸ, ಚರಂಡಿ ರಿಪೇರಿ ಮಾಡಿ, ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ನಡೆಯುತ್ತಿದೆ. ರೋಹಿತ್ ಕುಮಾರ್ ಪಚ್ಚೆ ನಿತ್ಯ ಪ್ರಯಾಣಿಕ ಪುತ್ಯೆಯಿಂದ ಧರ್ಮಸ್ಥಳವರೆಗಿನ ಸರ್ವೇ ಕಾರ್ಯ ಪೂರ್ಣಗೊಂಡಿದ್ದು, ಡಿಪಿಆರ್ ಹಂತದಲ್ಲಿದೆ. ಪ್ರಸ್ತುತ ಪುತ್ಯೆಯಿಂದ ದಿಡುಪೆವರೆಗಿನ 46 ಕಿ.ಮೀ. ರಸ್ತೆ ನಿರ್ವಹಣೆಗೆ 30 ಲಕ್ಷ ರೂ. ಅನುದಾನ ಬಂದಿದ್ದು, ಕಳೆದ ತಿಂಗಳಿನಲ್ಲಿಯೇ ನಾಗೇಶ್ ಕುಮಾರ್ ಎಂಬುವರಿಗೆ ಟೆಂಡರ್ ನೀಡಲಾಗಿದೆ. ಇದರಂತೆ ರಸ್ತೆಗೆ ಬಾಗಿರುವ ಮರದ ಗೆಲ್ಲುಗಳು ಸೇರಿದಂತೆ ಪೊದೆಗಳನ್ನು ತೆಗೆಯಲು ಹಾಗೂ ಚರಂಡಿ ನಿರ್ವಹಣೆ ಕಾರ್ಯ ಪುತ್ಯೆ ಭಾಗದಲ್ಲಿ ಈಗಾಗಲೇ ಆರಂಭಗೊಂಡಿದೆ. ಮಳೆ ಪ್ರಮಾಣ ಕಡಿಮೆಯಾದ ತಕ್ಷಣ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲಾಗುವುದು. ಬಕ್ಕಪ್ಪ ಹೊಸಮನಿ, ಎಇಇ, ಬೆಳ್ತಂಗಡಿ ಲೋಕೋಪಯೋಗಿ ಇಲಾಖೆ ರಾಜ್ಯ ಹೆದ್ದಾರಿ 276ರ ಪಟ್ರಮೆ ‘ಬಿ’ ಶಾಲೆಯ ಬಳಿ ರಸ್ತೆ ಮಧ್ಯೆ ಹೊಂಡ ನಿರ್ಮಾಣವಾಗಿರುವುದು. ಪುಂಡಿಕಾಯಿ ಬನ ಎಂಬಲ್ಲಿ ಹೊಂಡ ನಿರ್ಮಾಣವಾಗಿರುವುದು. https://www.vijayavani.net/saints-pilgrimage-in-edamangala v