ವಿಜಯವಾಣಿ ಸುದ್ದಿಜಾಲ ಬದಿಯಡ್ಕ
ಬದಿಯಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರ್ಚಾಲು-ಸಾಯಿಮಂದಿರ-ಮುಗು ರಸ್ತೆ, ಉರುಳಿತ್ತಡ್ಕ(ಪಾಡ್ಲಡ್ಕ)-ಬೇಳ ರಸ್ತೆಯಲ್ಲಿ ಭಾರಿ ಹೊಂಡಗಳು ಇದ್ದು, ಈ ಭಾಗದಲ್ಲಿ ವೇಗವಾಗಿ ಆಗಮಿಸುವ ವಾಹನಗಳು ಒಂದಿಲ್ಲೊಂದು ಅವಘಡಗಳಿಗೆ ಬಲಿಯಾಗುತ್ತಲೇ ಇದ್ದರೂ ಸಂಬಂಧಿತ ಅಧಿಕಾರಿಗಳು ತಮಗೂ ಇದಕ್ಕೂ ಸಂಬಂಧವಿಲ್ಲದಂತಿದ್ದಾರೆ.
ನೀರ್ಚಾಲು-ಸಾಯಿಮಂದಿರ-ಮುಗು ರಸ್ತೆ, ಉರುಳಿತ್ತಡ್ಕ(ಪಾಡ್ಲಡ್ಕ)-ಬೇಳ ರಸ್ತೆಯನ್ನು ದುರಸ್ತಿಗೊಳಿಸಿ 17 ವರ್ಷಗಳ ಹಿಂದೆಯೇ ಬದಿಯಡ್ಕ ಗ್ರಾಮ ಪಂಚಾಯಿತಿ ವತಿಯಿಂದ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಬಳಿಕವೂ ರಸ್ತೆಗಳಲ್ಲಿ ಗುಂಡಿಗಳಾಗುತ್ತಲೇ ಇದ್ದು, ಇಲಾಖೆಯು ಈ ಕುರಿತು ಗಮನ ಹರಿಸುತ್ತಿಲ್ಲ.
ಪದೇಪದೆ ದುರಸ್ತಿ: ಎರಡು ವರ್ಷಗಳ ಹಿಂದೆಯಷ್ಟೇ ಹಲವು ಭಾಗಗಳಲ್ಲಿ ದುರಸ್ತಿಗೊಳಿಸಲಾಗಿದ್ದು, ಆದರೂ ರಸ್ತೆ ಮತ್ತೊಮ್ಮೆ ಹದಗೆಟ್ಟು ಸಂಚಾರಕ್ಕೆ ಅಯೋಗ್ಯವೆನಿಸಿದೆ. ನೀರ್ಚಾಲು-ಕಿಳಿಂಗಾರು ಸಾಯಿಮಂದಿರ, ಮುಗುರಸ್ತೆಯಂತೂ ತೀರಾ ಹದಗೆಟ್ಟಿದೆ. ಕಿಳಿಂಗಾರು ಶಾಲೆಯಿಂದ ಮುಗು ರಸ್ತೆಯ ಹಲವೆಡೆ ಡಾಂಬರು ಕಿತ್ತುಹೋಗಿ ಸಮಸ್ಯೆಯಾಗುತ್ತಿದೆ. ಪೆರ್ಮುದೆ ಭಾಗಕ್ಕೆ ಸಂಪರ್ಕಿಸುವ ಹತ್ತಿರದ ದಾರಿ ಇದಾಗಿದ್ದು, ಈ ಭಾಗವಾಗಿ ಶಾಲಾ ವಾಹನಗಳು ಸಹಿತ ನಿತ್ಯವೂ ನೂರಾರು ವಾಹಗಳು, ಜನರು ಓಡಾಡುತ್ತಿರುತ್ತಾರೆ.
ಅಲ್ಲಲ್ಲಿ ಡಾಂಬರು ಕಿತ್ತುಹೋಗಿ ಸಮಸ್ಯೆಯಾಗಿದೆ. ದಿನನಿತ್ಯ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ಕಿಳಿಂಗಾರು ಶಾಲೆ, ನೀರ್ಚಾಲು ಶಾಲೆಗೆ ಈ ರಸ್ತೆಯು ಸಂಪರ್ಕಿಸುತ್ತದೆ. ಜತೆಗೆ ಸಭಾಭವನಗಳು, ಪಶು ಆಸ್ಪತ್ರೆ ಸಹಿತ ಹಲವು ಸರ್ಕಾರಿ ಕಚೇರಿಗಳೂ ಈ ರಸ್ತೆಯಲ್ಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದೇ ರಸ್ತೆಯ ಮೂಲಕ ಕಚೇರಿಗಳಿಗೆ ತೆರಳುತ್ತಿರುತ್ತಾರೆ. ನೀರ್ಚಾಲು-ಮುಗು ರಸ್ತೆ ಸಹಿತ ಹಲವೆಡೆಗೆ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಈ ರಸ್ತೆಗೆ ಶೀಘ್ರವೇ ಶಾಶ್ವತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಪಟ್ಟುಹಿಡಿದಿದ್ದಾರೆ.
ಹೊಸ ರಸ್ತೆಗೆ ಗ್ರಾಮಸ್ಥರ ಆಗ್ರಹ
ನೀರ್ಚಾಲು-ಸಾಯಿಮಂದಿರ-ಮುಗು ರಸ್ತೆ, ಉರುಳಿತ್ತಡ್ಕ(ಪಾಡ್ಲಡ್ಕ)-ಬೇಳ ರಸ್ತೆಯಲ್ಲಿ ದುರಸ್ತಿ, ತೇಪೆ ಹಾಕಿದಷ್ಟು ಪದೇ ಪದೆ ಹಾಳಾಗುತ್ತಲೇ ಇದ್ದು, ತಾತ್ಕಾಲಿಕ ದುರಸ್ತಿ ಬದಲು ಸಂಪೂರ್ಣ ರಸ್ತೆಯೇ ಹೊಸದಾಗಿ ನಿರ್ಮಿಸಬೇಕು ಅಥವಾ ಸಂಪೂರ್ಣ ಹೊಸದಾಗಿ ಡಾಂಬರೀಕರಣಗೊಳಿಸಬೇಕು ಎಂದು ಗ್ರಾಮಸ್ಥರು ಸ್ಥಳೀಯಾಡಳಿತವನ್ನು ಆಗ್ರಹಿಸಿದ್ದಾರೆ.
ನೀರ್ಚಾಲು-ಸಾಯಿಮಂದಿರ-ಮುಗು ರಸ್ತೆ, ಉರುಳಿತ್ತಡ್ಕ(ಪಾಡ್ಲಡ್ಕ)-ಬೇಳ ರಸ್ತೆ ಹದಿನೇಳು ವರ್ಷಗಳ ಹಿಂದೆಯೇ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಇಂದು ಸಂಚರಿಸಲು ಪರದಾಡುವಷ್ಟು ಹದಗೆಟ್ಟಿದೆ. ಕಿಳಿಂಗಾರು ಶಾಲೆಯಿಂದ ಮುಗು ತನಕ ಸಂಪೂರ್ಣ ಡಾಂಬರೀಕರಣಗೊಳ್ಳಬೇಕು. ಉಳಿದೆಡೆ ಉತ್ತಮವಾಗಿ ದುರಸ್ತಿಗೊಳ್ಳಬೇಕು. ಈ ಕುರಿತು ಅಧಿಕಾರಿಗಳು ಇತ್ತ ಗಮನ ಹರಿಸಲೇಬೇಕು. ಸಾಯಿರಾಂ ಕೆ.ಎನ್.ಕೃಷ್ಣ ಭಟ್ ಬದಿಯಡ್ಕ ಗ್ರಾಪಂ ಮಾಜಿ ಅಧ್ಯಕ್ಷ https://www.vijayavani.net/free-health-check-ups-medicine-distribution v