ಜಿಲ್ಲೆ

ಪುನರೂರಲ್ಲಿ ವಾಹನ ಸಂಚಾರ ಅಪಾಯಕಾರಿ

ಸೌಮ್ಯ ಆರ್

ಮೂಲ್ಕಿ: ರಾಜ್ಯ ಹೆದ್ದಾರಿ ಪುನರೂರು ಬಳಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಹೆದ್ದಾರಿ ಬದಿಯ ಪ್ರದೇಶಗಳಿಂದ ಮಳೆ ನೀರು ರಸ್ತೆಗೆ ಬರುತ್ತಿದ್ದು ಹೊಂಡಗಳು ಉಂಟಾಗಿ ವಾಹನ ಸಂಚಾರ ಅಪಾಯಕಾರಿಯಾಗಿ ಪರಿಣಮಿಸಿದೆ.

ಪರಿಸರದಲ್ಲಿ ವಸತಿ ಸಂಕೀರ್ಣಗಳಿಗಾಗಿ ಲೇಔಟ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಕಳೆದ ವರ್ಷ ಮಳೆಗಾಲದಲ್ಲಿ ಇದೇ ಭಾಗದಲ್ಲಿ ರಸ್ತೆ ಸಂಪೂರ್ಣ ಹಾಳಾಗಿತ್ತು ಈ ಬಗ್ಗೆ ಕಿಲ್ಪಾಡಿ ಪಂಚಾಯಿತಿ ಲೇಔಟ್ ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿತ್ತು. ಬಳಿಕ ತಾತ್ಕಾಲಿಕ ವ್ಯವಸ್ಥೆಗಳು ನಡೆದರೂ ಈ ಬಾರಿ ರಸ್ತೆ ಕೆಟ್ಟು ಹೋಗಿ ಮಳೆಗೆ ಭಾರಿ ಗಾತ್ರದ ಹೊಂಡಗಳು ಉಂಟಾಗಿವೆ.

ಕೂಡಲೇ ಲೋಕೋಪಯೋಗಿ ಇಲಾಖೆ ಎಚ್ಚೆತ್ತು ಈ ಭಾಗದಲ್ಲಿ ಹೆದ್ದಾರಿ ಎರಡು ಬದಿ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.