ಜಿಲ್ಲೆ

ಬಿಳಿಯೂರು ರಸ್ತೆ ಪೂರ್ತಿ ಕೆಸರು : ಖಾಸಗಿ ಭೂಮಿ ಸಮತಟ್ಟುಗೊಳಿಸಿದ್ದರಿಂದ ಸಮಸ್ಯೆ

ಸೌಮ್ಯ ಆರ್

ಉಪ್ಪಿನಂಗಡಿ: ಪೆರ್ನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖಾಸಗಿ ಜಾಗದಲ್ಲಿ ನಡೆಸಿದ ಸಮತಟ್ಟು ಕಾಮಗಾರಿಯ ಮಣ್ಣು ಮಳೆ ನೀರಿನಲ್ಲಿ ಕೊಚ್ಚಿಹೋಗಿ ರಸ್ತೆ ಮೇಲೆ ಸಂಗ್ರಹಗೊಂಡಿದ್ದು, ಇದರಿಂದ ಸಂಚಾರಕ್ಕೆ ಅಡಚಣೆಯಾಗಿದೆ.

ಬಿಳಿಯೂರು ಒಂದನೇ ವಾರ್ಡ್‌ನಲ್ಲಿ ಖಾಸಗಿ ವ್ಯಕ್ತಿಯೊಬ್ಬರು ನಿವೇಶನ ಸಮತಟ್ಟು ಕಾಮಗಾರಿ ನಡೆಸಿದ್ದರು. ಜತೆಗೆ ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ ಮಣ್ಣು ಮಳೆನೀರಿನೊಂದಿಗೆ ಸೇರಿ ರಸ್ತೆ ಮೇಲೆ ಸಂಗ್ರಹಗೊಂಡಿದೆ. ನಿತ್ಯವೂ ಪುತ್ತೂರು, ಉಪ್ಪಿನಂಗಡಿ, ಬೆಳ್ತಂಗಡಿ ತಾಲೂಕಿನ ತೆಕ್ಕಾರು ಸರಳಿಕಟ್ಟೆ ಭಾಗದಿಂದ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ಶೀಘ್ರವೇ ಅಧಿಕಾರಿಗಳು ಕೆಸರು ತೆರವು ಕಾರ್ಯಕ್ಕೆ ಸೂಚನೆ ನೀಡಬೇಕು ಎಂದು ಪೆರ್ನೆ ಗ್ರಾ.ಪಂ. ಸದಸ್ಯ ಕೇಶವ ಪೂಜಾರಿ ಸುಣ್ಣಾನ ಆಗ್ರಹಿಸಿದ್ದಾರೆ.

ಪೆರ್ನೆ ಪಿಡಿಒ ಸುನೀಲ್ ಕುಮಾರ್ ಬಿಳಿಯೂರು ರಸ್ತೆ ದುಃಸ್ಥಿತಿ ಪರಿಶೀಲಿಸಿದ್ದು, ಮಾರ್ಗದ ಮೇಲೆ ಸಂಗ್ರಹಗೊಂಡ ಕೆಸರು ತೆರವುಗೊಳಿಸುವಂತೆ ಖಾಸಗಿ ಭೂಮಿ ಮಾಲೀಕರಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.