ಜಿಲ್ಲೆ

ಕಚ್ಚಾ ರಸ್ತೆಗೆಂದು ಕಾಯಕಲ್ಪ?: ದೊಡ್ಡಳಿಕೆ ಅಣೆಕಟ್ಟು ಮಾರ್ಗ ಅಭಿವೃದ್ಧಿಗೆ ಆಗ್ರಹ : ಅನುದಾನಕ್ಕೆ ಮನವಿ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಗುರುಪುರ

ಮಂಗಳೂರಿನ ಕುಪ್ಪೆಪದವು ಮತ್ತು ಬಂಟ್ವಾಳ ತಾಲೂಕಿನ ಕರ್ಪೆ ಮಧ್ಯೆ ಹರಿಯುತ್ತಿರುವ ಫಲ್ಗುಣಿ ನದಿಗೆ ಕುಪ್ಪೆಪದವಿನ ದೊಡ್ಡಳಿಕೆ ಎಂಬಲ್ಲಿ ನಿರ್ಮಿಸಲಾದ ಬೃಹತ್ ಅಣೆಕಟ್ಟೆ ಮೇಲ್ಗಡೆ ಮಂಗಳೂರು ಮತ್ತು ಬಂಟ್ವಾಳ ಸಂಪರ್ಕ ರಸ್ತೆ ಇದ್ದು, ಅಣೆಕಟ್ಟೆ ಎರಡೂ ಕೊನೆಯಲ್ಲಿರುವ ಕಚ್ಚಾ ರಸ್ತೆ ಡಾಂಬರೀಕರಣಗೊಳಿಸಿ, ಸಣ್ಣ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಸಾರ್ವಜನಿಕ ವಲಯದಿಂದ ಆಗ್ರಹ ಕೇಳಿ ಬಂದಿದೆ.

ಖಾಸಗಿ ಜಾಗದವರ ತಕರಾರು: ವರ್ಷದ ಹಿಂದೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಒಟ್ಟು 36 ಕೋಟಿ ರೂ.ವೆಚ್ಚದಲ್ಲಿ ದೊಡ್ಡಳಿಕೆ ಅಣೆಕಟ್ಟೆ ನಿರ್ಮಿಸಿತ್ತು. ನದಿಗೆ ಹತ್ತಿರದ ಗ್ರಾಮಗಳ ಕೃಷಿಗೆ ನೀರು, ಬಹುಗ್ರಾಮ ಕುಡಿಯುವ ನೀರು, ಅಂತರ್ಜಲ ವೃದ್ಧಿ ಉದ್ದೇಶದಿಂದ ಅಣೆಕಟ್ಟು ನಿರ್ಮಿಸಿದ್ದು ಅದಕ್ಕೆ ಹೊಂದಿಕೊಂಡು ರಸ್ತೆ ನಿರ್ಮಿಸಲಾಗಿದೆ. ಇದರ ಎರಡೂ ಕೊನೆಯಲ್ಲಿ ಕಚ್ಚಾ ರಸ್ತೆ ಇದ್ದು, ಬಂಟ್ವಾಳ ಭಾಗದ ಖಾಸಗಿ ಜಾಗದವರ ತಕರಾರಿನಿಂದ ಇದುವರೆಗೆ ಕಚ್ಚಾ ರಸ್ತೆ ಅಭಿವೃದ್ಧಿ ಕಾರ್ಯ ನಡೆದಿಲ್ಲ ಎಂದು ಅಧಿಕೃತ ಮೂಲವೊಂದು ತಿಳಿಸಿದೆ.

ಹತ್ತಿರದ ರಸ್ತೆ

ಬಜ್ಪೆ ವಿಮಾನ ನಿಲ್ದಾಣ ಮತ್ತು ಕಟೀಲು ದೇವಸ್ಥಾನಕ್ಕೆ ಭೇಟಿ ನೀಡುವ ಬೆಳ್ತಂಗಡಿ, ವೇಣೂರು, ಪುಂಜಾಲಕಟ್ಟೆ ಮತ್ತು ವಾಮದಪದವು ಭಾಗದ ಜನರಿಗೆ ಅತಿ ಹತ್ತಿರದ ರಸ್ತೆ ಇದಾಗಿದೆ. ಮಳೆಗಾಲದಲ್ಲಿ ಸೃಷ್ಟಿಯಾಗುವ ಹೊಂಡಗುಂಡಿ, ಕೆಸರು ನೀರು ಹಾಗೂ ಬೇಸಿಗೆಯಲ್ಲಿ ಅತಿಯಾದ ಧೂಳಿನಿಂದ ಈ ರಸ್ತೆಯಲ್ಲಿ ರಿಕ್ಷಾ, ಕಾರು ಸಂಚರಿಸುವುದು ಕಷ್ಟ. ಇದಕ್ಕೆ ಡಾಂಬರು ಹಾಕಿದರೆ ಎಲ್ಲ ಕಾಲದಲ್ಲೂ ಇದೊಂದು ಉತ್ತಮ ಹಾಗೂ ಹತ್ತಿರದ ರಸ್ತೆಯಾಗಲಿದೆ ಎಂದು ಈ ಭಾಗದಲ್ಲಿ ಸಂಚರಿಸುವ ರಿಕ್ಷಾ ಚಾಲಕರು ತಿಳಿಸಿದ್ದಾರೆ.

ಮಳೆಗಾಲದಲ್ಲೂ ಸಂಚಾರಕ್ಕೆ ಯೋಗ್ಯ

ಅಣೆಕಟ್ಟೆಯ ಒಂದು ಭಾಗದ ಕರ್ಪೆಯಿಂದ ಅಂದಾಜು 150 ಮೀಟರ್ ಹಾಗೂ ಕುಪ್ಪೆಪದವು ಭಾಗದಲ್ಲಿ 400 ಮೀಟರ್ ಕಚ್ಚಾ ರಸ್ತೆ ಇದೆ. ಈ ರಸ್ತೆ ಅಭಿವೃದ್ಧಿಪಡಿಸಿದರೆ ಕುಪ್ಪೆಪದವು-ಎಡಪದವು-ಇರುವೈಲು-ಮುಚ್ಚೂರು-ಗುರುಪುರ ಕೈಕಂಬ ಮೂಲಕ ಬಜ್ಪೆ ಹಾಗೂ ಕಟೀಲಿಗೆ ಹತ್ತಿರದ ಮಾರ್ಗವಾಗಲಿದೆ. ಮತ್ತೊಂದು ಭಾಗದಲ್ಲಿ ಬಂಟ್ವಾಳದ-ಸಿದ್ಧಕಟ್ಟೆ-ಬೆಳ್ತಂಗಡಿ-ವೇಣೂರು-ಪುಂಜಾಲಕಟ್ಟೆಗೆ ಹತ್ತಿರ ರಸ್ತೆಯಾಗಲಿದ್ದು, ಜನರ ಸಮಯ ಉಳಿತಾಯದೊಂದಿಗೆ ಖರ್ಚು ಕಡಿಮೆಯಾಗಲಿದೆ. ಬೇಸಗೆಯಲ್ಲಿ ನೂರಾರು ವಾಹನ ಸವಾರರು ಬಳಸುತ್ತಿರುವ ಅಣೆಕಟ್ಟೆ ರಸ್ತೆ ಡಾಂಬರೀಕರಣಗೊಂಡಲ್ಲಿ ಮಳೆಗಾಲದಲ್ಲೂ ಸಂಚಾರಕ್ಕೆ ಯೋಗ್ಯ ರಸ್ತೆಯಾಗಲಿದೆ.

ಕಾಮಗಾರಿಗೆ 8 ಲಕ್ಷ ಅನುದಾನ

ಮಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯ ದೊಡ್ಡಳಿಕೆ ವೆಂಕಪ್ಪ ನಾಯ್ಕ ಅವರ ಮನೆಯಿಂದ ದೊಡ್ಡಳಿಕೆ ಅಣೆಕಟ್ಟೆಯವರೆಗೆ ರಸ್ತೆ ಡಾಂಬರೀಕರಣಕ್ಕೆ ಡಾ.ಭರತ್ ಶೆಟ್ಟಿ ಅವರ ಶಾಸಕರ ನಿಧಿಯಿಂದ 8 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಶೀಘ್ರ ಕಾಮಗಾರಿ ಆರಂಭವಾಗಲಿದೆ. ಬಂಟ್ವಾಳದ ಕಡೆಯಲ್ಲಿದ್ದ ಜಾಗದ ತಕರಾರು ಈಗ ಇತ್ಯರ್ಥವಾಗಿದ್ದು, ಸಾರ್ವಜನಿಕರ ಉಪಯೋಗದ ರಸ್ತೆ ನಿರ್ಮಾಣಕ್ಕೆ ಜಾಗ ಬಿಡಲು ತಮ್ಮಿಂದ ಆಕ್ಷೇಪವಿಲ್ಲ ಎಂದು ಜಾಗದ ಮಾಲೀಕ ಶಶಿಧರ ಪ್ರಭು ಹೇಳಿದ್ದಾರೆ. ಹಾಗಾಗಿ ಇನ್ನು ಬಂಟ್ವಾಳ ಭಾಗದ ಕಚ್ಚಾ ರಸ್ತೆ ಅಭಿವೃದ್ಧಿಗೆ ಶಾಸಕ ರಾಜೇಶ್ ನಾಯ್ಕ ಅವರು ಅನುದಾನ ಮಂಜೂರಾತಿಗೆ ಮನಸ್ಸು ಮಾಡಬಹುದು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ಅಣೆಕಟ್ಟೆ ಎರಡೂ ಕಡೆಯಲ್ಲಿ ರಸ್ತೆ ಅಭಿವೃದ್ಧಿಗೊಂಡಲ್ಲಿ ಸಾರ್ವಜನಿಕರ ಸಣ್ಣ ವಾಹನ ಸಂಚಾರ ಸುಗಮ ಹಾಗೂ ಹತ್ತಿರವಾಗಲಿದೆ. ಶಾಸಕ ಡಾ.ಭರತ್ ಶೆಟ್ಟಿ ಅವರು ದೊಡ್ಡಳಿಕೆ ಅಣೆಕಟ್ಟೆಯ ಕುಪ್ಪೆಪದವು ಭಾಗದ ಕಚ್ಚಾ ರಸ್ತೆ ಅಭಿವೃದ್ಧಿಗೆ 8 ಲಕ್ಷ ರೂ. ಅನುದಾನ ಇಟ್ಟಿರುವ ವಿಷಯ ಸಂತಸ ತಂದಿದೆ. ಗಣೇಶ್ ಪಾಕಜೆ ಜಿಲ್ಲಾ ಕಾರ್ಯದರ್ಶಿ, ಬಿಜೆಪಿ ಎಸ್‌ಸಿ ಮೋರ್ಚಾ ನದಿ ಮಟ್ಟದಿಂದ 25 ಮೀ. ಎತ್ತರವಿರುವ ಈ ಅಣೆಕಟ್ಟೆ 51 ಪಿಲ್ಲರ್ ಆಧರಿತವಾಗಿದೆ. ಅಣೆಕಟ್ಟೆ ಮೇಲ್ಭಾಗ 5.50 ಮೀ. ಅಗಲವಾಗಿ ನಿರ್ಮಿಸಲಾಗಿದ್ದು, ಇದರಲ್ಲಿ ಸಣ್ಣ ವಾಹನಗಳು ಸಂಚರಿಸಬಹುದು. ನದಿಯ ಎರಡೂ ಭಾಗದವರಿಗೆ ಪ್ರಯೋಜನವಾಗಲೆಂದು ಅಣೆಕಟ್ಟೆ ಮೇಲ್ಭಾಗದಲ್ಲಿ ರಸ್ತೆ ನಿರ್ಮಿಸಲಾಗಿದೆ. ಈ ರಸ್ತೆ ಎರಡೂ ಕೊನೆಯಲ್ಲಿರುವ(ಬಂಟ್ವಾಳ ಮತ್ತು ಮಂಗಳೂರು) ಕಚ್ಚಾ ರಸ್ತೆ ಅಭಿವೃದ್ಧಿಗೊಳಿಸುವುದು ಸಂಬಂಧಿಸಿದ ಇಲಾಖೆಗೆ ಸೇರಿದ ಕೆಲಸ. ಶಿವಪ್ರಸನ್ನ ಸಹಾಯಕ ಇಂಜಿನಿಯರ್, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ