ಜಿಲ್ಲೆ

ರಸ್ತೆಯುದ್ದಕ್ಕೂ ನೂರಾರು ಹೊಂಡಗುಂಡಿ : ಗೋಳಿತ್ತಡಿ ಸಂಪರ್ಕ ಮಾರ್ಗದ ದುಸ್ಥಿತಿ : ಡಾಂಬರು ಹಾಕದಿದ್ದರೆ ಹೋರಾಟದ ಎಚ್ಚರಿಕೆ

ಸೌಮ್ಯ ಆರ್

ಕಡಬ: ಕಡಬ ತಾಲೂಕು ಕೊೈಲ ಮತ್ತು ರಾಮಕುಂಜ ಗ್ರಾಪಂ ವ್ಯಾಪ್ತಿಯ ಗೋಳಿತ್ತಡಿಯಿಂದ ಸಬಳೂರು, ಏಣಿತ್ತಡ್ಕ, ಕುದುಲೂರು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹೊಂಡಮಯವಾಗಿ ಸಂಚಾರ ದುಸ್ತರವಾಗಿದೆ. ಹೊಂಡ ತಪ್ಪಿಸಿ ಸಂಚರಿಸುವುದೇ ವಾಹನ ಸವಾರರಿಗೆ ಸಾಹಸದ ಕೆಲಸವಾಗಿದೆ.

ಈ ರಸ್ತೆಗೆ 7 ವರ್ಷದ ಹಿಂದೆ ನಬಾರ್ಡ್ ಯೋಜನೆಯಡಿ 34 ಲಕ್ಷ ರೂ. ವೆಚ್ಚದಲ್ಲಿ ಗೋಳಿತ್ತಡಿಯಿಂದ ನೆಲ್ಯೋಟ್ಟು ತನಕ ಮರು ಡಾಂಬರೀಕರಣ ಮಾಡಲಾಯಿತು. ಎರಡು ತಿಂಗಳಲ್ಲಿ ಡಾಂಬರು ಕಿತ್ತು ಹೋಗಿ ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ಕಳಪೆ ಕಾಮಗಾರಿ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್, ಗುತ್ತಿಗೆದಾರರ ವಿರುದ್ಧ ಸಾರ್ವಜನಿಕರು ಸಿಡಿದೆದ್ದಿರು. ಬಳಿಕ ಮತ್ತೊಮ್ಮೆ ಡಾಂಬರೀಕರಣ ಮಾಡಲಾಯಿತು. ಅದು ಕೂಡ ಕಳಪೆಯಾಗಿ ಮರುವರ್ಷದಲ್ಲಿ ಹೊಂಡ ನಿರ್ಮಾಣವಾಯಿತು.

ಬಳಿಕ ವರ್ಷಕ್ಕೊಮ್ಮೆ ಗುತ್ತಿಗೆದಾರರು ತೇಪೆ ಕಾರ್ಯ ನಡೆಸುತ್ತಾ ಬಂದರು. ಅವರ ಅವಧಿ ಮುಗಿದ ಬಳಿಕ ಮತ್ತೆ ಸೃಷ್ಟಿಯಾದ ಹೊಂಡಗಳಿಗೆ ಮಾಜಿ ಸಚಿವ ಎಸ್.ಅಂಗಾರ ಶಿಪಾರಸ್ಸಿನ ಮೇರೆಗೆ ರಸ್ತೆ ಅಭಿವೃದ್ಧಿ ನಿಗಮದಡಿ 4.50 ಲಕ್ಷ ರೂ. ವೆಚ್ಚದಲ್ಲಿ ತೇಪೆ ಕಾರ್ಯ ನಡೆಸಲಾಯಿತು.

ಐದು ತಿಂಗಳ ಹಿಂದೆ 9.13 ಲಕ್ಷ ರೂ.ವೆಚ್ಚದಲ್ಲಿ ಜಿಪಂ ಇಂಜಿನಿಯರಿಂಗ್ ವಿಭಾಗದಿಂದ ರಸ್ತೆಗೆ ತ್ರಿವೇಣಿ ಸರ್ಕಲ್ ತನಕ ತೇಪೆ ಕಾರ್ಯ ನಡೆಸಲಾಯಿತು. ಮಳೆಗಾಲ ಇನ್ನೇನು ಪ್ರಾರಂಭವಾಯಿತು ಎನ್ನುವಷ್ಟರಲ್ಲಿ ತೇಪೆ ಕಾರ್ಯ ಮುಗಿಸಲಾಯಿತು. ಮತ್ತೆ ಈ ರಸ್ತೆಯಲ್ಲಿ ದೊಡ್ಡ ಹೊಂಡ ನಿರ್ಮಾಣವಾಗಿ ರಸ್ತೆಯ ಚಿತ್ರಣವೇ ಬದಲಾಗಿದೆ. ಮರಳು ಲಾರಿಗಳು ಮಿತಿಮೀರಿದ ಓಡಾಟದಿಂದ ರಸ್ತೆ ಹದಗೆಡಲು ಕಾರಣವಾಗಿದೆ. ತಕ್ಷಣ ರಸ್ತೆ ಮರು ಡಾಂಬರೀಕರಣ ಮಾಡದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

ಸುಗಮ ಸಂಚಾರಕ್ಕೆ ತೊಂದರೆ

ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಗೋಳಿತ್ತಡಿಯಿಂದ ತ್ರಿವೇಣಿ ಸರ್ಕಲ್ ತನಕ 3 ಕಿ.ಮೀ. ರಸ್ತೆ ಹೊಂಡಗಳು ನಿರ್ಮಾಣವಾಗಿ ಸಂಚಾರಕ್ಕೆ ತೊಂದರೆಯಾಗಿದೆ. ಗೋಳಿತ್ತಡಿಯಿಂದ ಕಕ್ವೆ, ಕುದುಲೂರು, ಕೊಲ್ಯ, ಕಡೆಂಬ್ಯಾಲು, ಪರಂಗಾಜೆ ಮೊದಲಾದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ದಿನಂಪತ್ರಿ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ತ್ರಿವೇಣಿ ಸರ್ಕಲ್‌ನಿಂದ ಮುಂದುವರಿದ ರಸ್ತೆ ಕುದುಲೂರು ಪ್ರದೇಶಕ್ಕೆ ಸಂಪರ್ಕ ಕಲ್ಪಿಸಿದರೆ ತ್ರಿವೇಣಿ ಸರ್ಕಲ್‌ನಿಂದ ಟಿಸಿಲೊಡೆದ ಇನ್ನೊಂದು ರಸ್ತೆ ಏಣಿತ್ತಡ್ಕ ಭಾಗಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇಲ್ಲೂ ಅಲ್ಲಲ್ಲಿ ಹೊಂಡ ನಿರ್ಮಾಣವಾಗಿದೆ.

ಈಗಾಗಲೇ ತೇಪೆ ಕಾರ್ಯ ನಡೆಸಿದ ಗೋಳಿತ್ತಡಿಯಿಂದ ಏಣಿತ್ತಡ್ಕ ಕುದುಲೂರು ರಸ್ತೆ ಮತ್ತೆ ಹದಗೆಟ್ಟಿರುವುದು ಗಮನಕ್ಕೆ ಬಂದಿದೆ. ಸ್ಥಳೀಯ ಮುಖಂಡರು ಈ ರಸ್ತೆಗೆ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ. ನಮ್ಮ ಗ್ರಾಮ ನಮ್ಮ ರಸ್ತೆಯಲ್ಲಿ ಯೋಜನೆಯಡಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದ 16 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಸರ್ಕಾರ ಘೋಷಿಸಿದೆ. ಆದರೆ ಮಂಜೂರಾತಿ ಇನ್ನೂ ದೊರೆತಿಲ್ಲ. ಈ ಯೋಜನೆಯಲ್ಲಿ ಅನುದಾನ ನೀಡಲು ಪ್ರಯತ್ನಿಸತ್ತೇನೆ. ಭಾಗೀರಥಿ ಮುರುಳ್ಯ, ಶಾಸಕಿ https://www.vijayavani.net/arrest-18 https://www.vijayavani.net/a-new-car-caught-fire