ಜಿಲ್ಲೆ

ದೇವಳ ಸಂಪರ್ಕ ರಸ್ತೆ ಕೆಸರುಮಯ : ಮಣ್ಣು ಸಾಗಾಟದಿಂದ ಕಾರ್ನಾಡು ಸಮೀಪ ಸಂಚಾರ ದುಸ್ತರ

ಸೌಮ್ಯ ಆರ್

ಮೂಲ್ಕಿ: ಕಾರ್ನಾಡು ಗೇರು ಕಟ್ಟೆಯಿಂದ ಜೂನಿಯರ್ ಕಾಲೇಜ್ ಮೂಲಕ ವೆಂಕಟರಮಣ ದೇವಸ್ಥಾನ ಸಂಪರ್ಕ ರಸ್ತೆ ಬದಿಯಲ್ಲಿ ಸೈಟ್ ಒಂದರಿಂದ ನಿಯಮಗಳನ್ನು ಗಾಳಿಗೆ ತೂರಿ ಟಿಪ್ಪರ್‌ನಲ್ಲಿ ಮಣ್ಣು ಸಾಗಾಟ ಮಾಡುತ್ತಿದ್ದು, ರಸ್ತೆ ಕೆಸರುಮಯವಾಗಿ ಸಂಚಾರ ದುಸ್ತರವಾಗಿ ಪರಿಣಮಿಸಿದೆ.

ಈ ಬಗ್ಗೆ ಅನೇಕ ಬಾರಿ ಮೂಲ್ಕಿ ನಗರ ಪಂಚಾಯಿತಿ, ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದರೂ ಮಣ್ಣು ಸಾಗಾಟ ನಿರಂತರವಾಗಿ ನಡೆಯುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಯಮಗಳನ್ನು ಗಾಳಿಗೆ ತೂರಿ ಟಿಪ್ಪರ್ ಮೂಲಕ ಮಣ್ಣು ಸಾಗಾಟದಿಂದ ರಸ್ತೆ ಕೆಸರುಮಯವಾಗಿ ಅನೇಕ ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬಿದ್ದು ಗಾಯಗೊಂಡ ಘಟನೆಯೂ ನಡೆದಿದೆ.

ಸ್ಥಳಕ್ಕೆ ಮೂಲ್ಕಿ ನಗರ ಪಂಚಾಯಿತಿ ಸದಸ್ಯ ಪುತ್ತು ಬಾವ, ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.

ಮಣ್ಣು ಸಾಗಾಟದಿಂದ ತೊಂದರೆಯಾಗಿರುವ ಬಗ್ಗೆ ಸ್ಥಳೀಯರಿಂದ ದೂರುಗಳು ಬಂದಿವೆ. ಕೆಸರುಮಯ ರಸ್ತೆ ಸರಿಪಡಿಸಿ ಕೊಡುವಂತೆ ಮಣ್ಣು ಸಾಗಾಟ ನಡೆಸುತ್ತಿರುವ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. - ಸತೀಶ್ ಅಂಚನ್, ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ.