ಜಿಲ್ಲೆ

ರಸ್ತೆ ದುರಸ್ತಿ ಕಾಣದ ರಸ್ತೆ

ಎ. ಆರ್. ರಘುರಾಮ

ಕೊಳ್ಳೇಗಾಲ : ಸುಪ್ರಸಿದ್ಧ ಚಿಕ್ಕಲ್ಲೂರು ಘನನೀಲಿ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದೆ. ಆದರೆ, ಶ್ರೀ ಕ್ಷೇತ್ರಕ್ಕೆ ಸಂಪರ್ಕಿಸುವ ರಸ್ತೆ ಇನ್ನು ದುರಸ್ತಿ ಕಂಡಿಲ್ಲ.
ಜ.25 ರಿಂದ 29 ರವರೆಗೆ ಜಾತ್ರೆ ನಡೆಯಲಿದೆ. ರಾಜ್ಯದ ವಿವಿಧ ಕಡೆಯಿಂದ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಭಕ್ತರು ಜಾತ್ರೆಗೆ ತೆರಳುವ ಮಾರ್ಗ ಹಳ್ಳಕೊಳ್ಳದಿಂದ ಕೂಡಿದೆ. ಸ್ಥಳೀಯರು ರಸ್ತೆಯ ದುರಸ್ತಿಗೆ ಒತ್ತಾಯಿಸುತ್ತಿದ್ದರೂ ಸಂಬಂಧಿಸಿದವರು ಕ್ರಮ ವಹಿಸಿಲ್ಲ.
ಈ ದೇವಾಲಯಕ್ಕೆ ಸಂಪರ್ಕ ಕಲ್ಪಿಸಲು ಕೊಳ್ಳೇಗಾಲದಿಂದ ದೊಡ್ಡಿಂದುವಾಡಿ, ಇಕ್ಕಡಹಳ್ಳಿ, ಮತ್ತೀಪುರ ಕಡೆಯಿಂದ ಮಾರ್ಗ ಪ್ರಮುಖವಾಗಿದೆ. ಜಾತ್ರೆಗೆ ಬರುವ ಜನರ ವಾಹನಗಳು ಈ ಮುಖ್ಯ ದಾರಿಯನ್ನೇ ಅವಲಂಬಿಸಿದ್ದಾರೆ.
ಮತ್ತೀಪುರ ಬಳಿಯ ಮುತುಕನ ಕಟ್ಟೆ ಸ್ಥಳದಿಂದ ಕೊತ್ತನೂರು ಗ್ರಾಮದ ವರೆಗಿನ 7 ಕಿ.ಮೀ. ರಸ್ತೆ ಹಳ್ಳ-ಕೊಳ್ಳದಿಂದ ಕೂಡಿದ್ದು, ಅಧ್ವಾನವಾಗಿದೆ. ಇತ್ತೀಚೆಗಷ್ಟೇ ಪಿಡಬ್ಲ್ಯೂಡಿ 20 ಲಕ್ಷ ರೂ . ವೆಚ್ಚದಲ್ಲಿ ಸುಮಾರು 5 ಕಿ.ಮೀ. ವ್ಯಾಪ್ತಿಗೆ ಬರುವ ಅಂದರೆ, ಮುತುಕನ ಕಟ್ಟೆಯಿಂದ ಆರನೇ ಮೈಲಿಗಲ್ಲು ವರೆಗೆ ಜಂಗಲ್ ಕಟಿಂಗ್ ಹಾಗೂ ಗುಂಡಿಗಳಿಗೆ ತೇಪೆ ಕಾಮಗಾರಿ ನಡೆಸಿತ್ತು. ಹಣದ ಕೊರತೆಯಿಂದ ಇನ್ನುಳಿದ 6 ಮೈಲಿಕಲ್ಲಿನಿಂದ ಕೊತ್ತನೂರುವರೆಗಿನ 2 ಕಿ. ಮೀ. ರಸ್ತೆಗೆ ತೇಪೆ ಹಾಕು ಗುಂಡಿ ಮುಚ್ಚುವ ಕಾಮಗಾರಿ ನೆನೆಗುದಿಗೆ ಬಿದ್ದಿದೆ.
ಈ ಬಗ್ಗೆ ವಿಜಯವಾಣಿ ಪತ್ರಿಕೆ 2023ರ ಡಿ.25 ರಂದು ‘ಚಿಕ್ಕಲ್ಲೂರು ರಸ್ತೆ ಸಂಚಾರ ದುಸ್ತರ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಪಿಡಬ್ಲ್ಯೂಡಿ ಎಇಇ ಪುರುಷೋತ್ತಮ ಅವರು ಆ ಸಂದರ್ಭ ಪ್ರತಿಕ್ರಿಯಿಸಿ, ಹಣ ಕೊರತೆಯಿಂದ ರಸ್ತೆ ದುರಸ್ತಿ ಕಾಮಗಾರಿ ನಿಂತಿದೆ. ಹೆಚ್ಚುವರಿಯಾಗಿ 40 ಲಕ್ಷ ಅನುದಾನ ಬಿಡುಗಡೆಗೆ ಮನವಿ ಮಾಡಲಾಗಿದೆ. 1 ವಾರದೊಳಗೆ ಕೆಲಸ ಪ್ರಾರಂಭಿಸುತ್ತೇವೆ ಎಂದಿದ್ದರು.
ಅವರು ಭರವಸೆ ನೀಡಿ 20 ದಿನವಾದರೂ ಇನ್ನು ರಸ್ತೆ ದುರಸ್ತಿ ಕೆಲಸ ಪ್ರಾರಂಭವಾಗಿಲ್ಲ. ಇನ್ನು ಜಾತ್ರೆ ಆರಂಭಕ್ಕೆ ಕೇವಲ 9 ದಿನ ಇದೆ. ರಸ್ತೆ ಸಮಸ್ಯೆ ಕೊತ್ತನೂರು, ಮತ್ತೀಪುರ ಸೇರಿದಂತೆ ಸ್ಥಳೀಯ ಗ್ರಾಮಸ್ಥರ ಅಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೆ ಪಿಡಬ್ಲ್ಯೂಡಿ 5 ಕಿಮೀ ಗುಂಡಿಗೆ ತೇಪೆ ಹಾಕುವ ಕಾಮಗಾರಿ ನಡೆಸಿದ್ದರೂ ಅದು ಕಳಪೆ ಯಾಗಿದೆ. ದೊಡ್ಡ ದೊಡ್ಡ ಗುಂಡಿಗಳನ್ನು ಬಿಟ್ಟು ಚಿಕ್ಕ ಗುಂಡಿ ಮುಚ್ಚುವ ಕೆಲಸ ಮಾಡಲಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಚಿಕ್ಕಲ್ಲೂರು ಜಾತ್ರೆ ಸಂಬಂಧ ಕಳೆದ 4 ದಿನಗಳ ಹಿಂದೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಜಿಲ್ಲಾಡಳಿತ ಸಭಾಂಗಣದಲ್ಲಿ ಸಭೆ ಕರೆದು ಜಾತ್ರೆಗೆ ಅಗತ್ಯವಿರುವ ಮೂಲ ಸೌಕರ್ಯ ಹಾಗೂ ಚಿಕ್ಕಲ್ಲೂರು ಸಂಪರ್ಕ ರಸ್ತೆ ಅಭಿವೃದ್ಧಿ ಪಡಿಸುವಂತೆ ಸೂಚನೆ ನೀಡಿದ್ದಾರೆ. ಹೀಗಿದ್ದರೂ ರಸ್ತೆ ದುರಸ್ತಿ ಕೆಲಸವಾಗಿಲ್ಲ. ಇದು ದಿವ್ಯ ನಿರ್ಲಕ್ಷೃವೇ ಸರಿ ಎಂದು ಜನತೆ ದೂರಿದ್ದಾರೆ.