ಜಿಲ್ಲೆ

ಹದಗೆಟ್ಟ ಗಂಗೊಳ್ಳಿ ಮುಖ್ಯರಸ್ತೆ

Udupi

ಗಂಗೊಳ್ಳಿ: ಉಡುಪಿ ಜಿಲ್ಲೆಯ ಪ್ರಮುಖ ಮೀನುಗಾರಿಕಾ ಬಂದರು ಪ್ರದೇಶ ಗಂಗೊಳ್ಳಿಯ ಮುಖ್ಯರಸ್ತೆಯಲ್ಲಿ ಹೊಂಡಗುಂಡಿ ಹೆಚ್ಚಾಗಿದ್ದು, ಜನರ ಮತ್ತು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.

ಗಂಗೊಳ್ಳಿ ಗ್ರಾಪಂ ಕಾರ್ಯಾಲಯ ಸಮೀಪದಿಂದ ಬಂದರು ಬಸ್ ನಿಲ್ದಾಣ ಮತ್ತು ವಾಟರ್ ಟ್ಯಾಂಕ್ ಬಳಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಮಳೆಗಾಲದಲ್ಲಿ ನೀರು ಸರಿಯಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದಿರುವುದರಿಂದ ನೀರು ರಸ್ತೆಯಲ್ಲಿ ನಿಂತುಕೊಳ್ಳುತ್ತಿದೆ. ವಾಹನ ಸವಾರರು ರಸ್ತೆಯಲ್ಲಿನ ಹೊಂಡಗುಂಡಿ ಅಂದಾಜಿಸಲಾಗದೆ ರಸ್ತೆಯಲ್ಲಿ ಬಿದ್ದು ಗಾಯಗೊಂಡ ಮತ್ತು ಹೊಂಡವನ್ನು ತಪ್ಪಿಸುವ ಭರದಲ್ಲಿ ಅಪಘಾತಗಳು ಕೂಡ ನಡೆದಿದೆ. ಮಳೆ ನೀರು ಹರಿದು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮುಖ್ಯರಸ್ತೆ ಕಾಂಕ್ರಿಟ್ ಕಾಮಗಾರಿಗೆ 1.47 ಕೋಟಿ ರೂ. ಮಂಜೂರಾಗಿದ್ದು ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಗಂಗೊಳ್ಳಿ ಮುಖ್ಯರಸ್ತೆಯಲ್ಲಿ ಸಂಚರಿಸುವುದು ಕಷ್ಟವಾಗುತ್ತಿದ್ದು, ಹೊಂಡಗುಂಡಿಗಳನ್ನು ಮುಚ್ಚಿ ತುರ್ತಾಗಿ ರಸ್ತೆ ದುರಸ್ತಿ ಮಾಡುವಂತೆ ನಾಗರಿಕರು ಆಗ್ರಹಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಯಾಂತ್ರೀಕೃತ ಮೀನುಗಾರಿಕೆ ಮತ್ತು ಶಾಲಾ ಕಾಲೇಜುಗಳು ಪ್ರಾರಂಭವಾಗುವ ಸಾಧ್ಯತೆಗಳಿರುವುದರಿಂದ ವಾಹನಗಳ ಮತ್ತು ಜನರ ಓಡಾಟ ಕೂಡ ಹೆಚ್ಚಾಗಲಿದೆ. ಆದ್ದರಿಂದ ಆದಷ್ಟು ಶೀಘ್ರ ರಸ್ತೆ ಕಾಮಗಾರಿ ಪ್ರಾರಂಭಿಸಬೇಕು ಹಾಗೂ ರಸ್ತೆಯನ್ನು ದುರಸ್ತಿ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಗಂಗೊಳ್ಳಿ ಮುಖ್ಯರಸ್ತೆಯು ಪಂಚಾಯಿತಿ ಕಚೇರಿಯಿಂದ ಬಂದರು ಬಸ್ ನಿಲ್ದಾಣದವರೆಗೆ ಸಂಪೂರ್ಣ ಹಾಳಾಗಿದ್ದು, ವಾಹನಗಳು ಹಾಗೂ ಪಾದಚಾರಿಗಳು ಸಂಚರಿಸಲು ಕಷ್ಟವಾಗುತ್ತಿದೆ. ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಅನುದಾನ ಮಂಜೂರಾಗಿದ್ದರೂ ಕೆಲಸಇನ್ನು ಪ್ರಾರಂಭವಾಗಿಲ್ಲ. ಕನಿಷ್ಠಪಕ್ಷ ರಸ್ತೆಯಲ್ಲಿನ ಹೊಂಡವನ್ನು ಮುಚ್ಚಿ ದುರಸ್ತಿ ಮಾಡಬೇಕು . ಎಚ್.ಎಸ್.ಚಿಕ್ಕಯ್ಯ ಪೂಜಾರಿ, ಅಧ್ಯಕ್ಷರು, ನಾಗರಿಕ ಹೋರಾಟ ಸಮಿತಿ, ಗಂಗೊಳ್ಳಿ ಗಂಗೊಳ್ಳಿಯ ಮುಖ್ಯರಸ್ತೆ ಕಾಂಕ್ರೀಟ್ ಕಾಮಗಾರಿಗೆ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಅವರ ವಿಶೇಷ ಮುತುವರ್ಜಿಯಿಂದ 1.50 ಕೋಟಿ ರೂ. ಮಂಜೂರಾಗಿದ್ದು, ಮಳೆಗಾಲ ಮುಗಿಯುತ್ತಿದ್ದಂತೆಯೇ ಕಾಮಗಾರಿ ಪ್ರಾರಂಭಿಸಲಾಗುವುದು. ರಾಘವೇಂದ್ರ ನಾಯ್ಕ, ಇಂಜಿನಿಯರ್, ಕುಂದಾಪುರ ಪಿಡಬ್ಲುೃಡಿ