ದೇವದುರ್ಗ: ಪಟ್ಟಣ ಸೇರಿ ತಾಲೂಕಾದ್ಯಂತ ಬೆಂಬಿಡದೆ ಮಳೆ ಸುರಿಯುತ್ತಿದ್ದು, ರಸ್ತೆಗಳು ಕೆಸರು ಗದ್ದೆಯಂತಾಗಿವೆ. ಇದನ್ನು ಗಮನಿಸಿದ ಜಯ ಕರ್ನಾಟಕ ಸಂಘಟನೆ ಮುಖಂಡರು ತಗ್ಗು ಗುಂಡಿಗಳಿಗೆ ಮರಂ ಹಾಕಿ ಭಾನುವಾರ ಮುಚ್ಚುವ ಮೂಲಕ ಗಮನ ಸೆಳೆದರು.
ಪಟ್ಟಣದ ಮಹಾತ್ಮಗಾಂಧಿ ರಸ್ತೆ, ಕಟಕರ ಕಟ್ಟೆ ಏರಿಯಾ, ಬಟ್ಟೆ ಬಜಾರ್ ಸೇರಿ ವಿವಿಧೆಡೆ ಮಳೆಯಿಂದ ರಸ್ತೆ ಹಾಳಾಗಿದೆ. ಸಲಿಕೆ, ಪುಟ್ಟಿ, ಗುದ್ದಲಿ ಹಿಡಿದ ಕಾರ್ಯಕರ್ತರು ತಗ್ಗು-ತುಂಡಿಗಳನ್ನು ಮುಚ್ಚಿದರು. ಮಹಾತ್ಮಗಾಂಧಿ ವೃತ್ತದಿಂದ ದರ್ಬಾರ್ ರಸ್ತೆ, ಕಟಕರಕಟ್ಟೆ ಏರಿಯಾಗೆ ಸಂಪರ್ಕ ಕಲ್ಪಿಸುವ ಎರಡೂ ರಸ್ತೆ ವಿವಿಧೆಡೆ ಮರಂ ಹಾಕಿದರು. ಹೋರಾಟಗಾರರ ಈ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಾಳಾದ ರಸ್ತೆ ರಿಪೇರಿಗೆ ಜನರು, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಸ್ಪಂದಿಸಿರಲಿಲ್ಲ. ಹೀಗಾಗಿ ಸಂಘಟನೆ ಮುಖಂಡರು ರಸ್ತೆ ಮರಂಹಾಕಿ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಮುಖಂಡರಾದ ಮಹಮ್ಮದ್ ಮುಸ್ತಫ್, ಬಸವರಾಜ ಗೋಸಲ್, ಮಲ್ಲಪ್ಪ ಬೆಣಕಲ್, ಹೇಮರೆಡ್ಡಿ ಜಾಧವ್, ರಂಗಯ್ಯ ಪೊಪಾ, ಅಲ್ತಾಫ್, ರಂಗು ನಾಯಕ ಚಿಕ್ಕಗುಡ, ಮರಿಗೆಯ್ಯ ನಾಯಕ, ಜುಬಿರ್, ಆರಿಫ್, ಅಬ್ದುಲ್ ಅಜಿತ್ ಇತರರಿದ್ದರು.