ಬೆಳಗಾವಿ: ಇಲ್ಲಿನ ಹೊಸ ಗಾಂಧಿನಗರಕ್ಕೆ ಹೊಂದಿಕೊಂಡಿರುವ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಸೃಷ್ಟಿಯಾಗಿದ್ದ ಗುಂಡಿ ಮುಚ್ಚಿ ದುರಸ್ತಿ ಮಾಡುವ ಮೂಲಕ ವಾಹನ ಸವಾರರ ಸುಗಮ ಓಡಾಟಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನುಕೂಲ ಕಲ್ಪಿಸಿಕೊಟ್ಟಿದೆ.
ವಿಜಯವಾಣಿ ದಿನಪತ್ರಿಕೆಯು ತಪ್ಪದ ವಾಹನ ಸವಾರ ಸರ್ಕಸ್‘ ಎಂಬ ಶೀರ್ಷಿಕೆಯಡಿ ಗುರುವಾರ ಪ್ರಕಟಿಸಿದ ವರದಿ ಅಧಿಕಾರಿಗಳ ಗಮನ ಸೆಳೆದಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್‌ಗಳು ಸರ್ವಿಸ್ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿದರು. ಅಲ್ಲದೆ, ಮಣ್ಣು, ಕಲ್ಲುಗಳಿಂದ ತುಂಬಿದ್ದ ಚರಂಡಿಗಳನ್ನು ಸ್ವಚ್ಛಗೊಳಿಸಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿದರು. ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳು ನೆಹರು ನಗರ, ಶಹಾಪುರ, ಎಪಿಎಂಸಿ ಯಾರ್ಡ್, ಆರ್‌ಪಿಡಿ ಸೇರಿ ನಗರದ ವಿವಿಧ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಕಾಮಗಾರಿ ಆರಂಭಿಸಿದ್ದಾರೆ. ಮತ್ತೊಂದೆಡೆ ಪಾಲಿಕೆಯುವ ರಸ್ತೆಗಳ ದುರಸ್ತಿಗಾಗಿ ಅಂದಾಜು ಪತ್ರಿಕೆಯ 44 ಲಕ್ಷ ರೂ. ಟೆಂಡರ್ ಕರೆದಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.