ಸಿ.ಜಿ ಪುನೀತ್ ಚಪ್ಪರದಹಳ್ಳಿ ಬೆಟ್ಟದಪುರ
ಪಿರಿಯಾಪಟ್ಟಣ ತಾಲೂಕಿನ ರಾಜನಬಿಳಗೂಲಿ ಗ್ರಾಮದಿಂದ ಐಚನಹಳ್ಳಿ ಮಾರ್ಗವಾಗಿ ಕಣಗಾಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮಾರ್ಗದ ಹಲವೆಡೆ ಗುಂಡಿಬಿದ್ದ ಪರಿಣಾಮ ವಾಹನ ಸವಾರರು ಸಂಚರಿಸಲು ಹರಸಾಹಸಪಡುವ ಪರಿಸ್ಥಿತಿ ಎದುರಾಗಿದೆ.
ಬೆಟ್ಟದಪುರದಿಂದ ಕಣಗಾಲು ಮಾರ್ಗವಾಗಿ ಕೊಡಗು ಜಿಲ್ಲೆಯ ಹೆಬ್ಬಾಲೆ ಹಾಗೂ ಹಾಸನ ಜಿಲ್ಲೆಯ ಕಡುವಿನಹೊಸಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಜಿಲ್ಲೆಯ ಗಡಿಯ ಮುಖ್ಯರಸ್ತೆ ಇದಾಗಿದೆ. ಅಲ್ಲದೇ ಕೊಡಗು ಜಿಲ್ಲೆಯ ಸಮೀಪ ಇರುವುದರಿಂದ ಈ ವ್ಯಾಪ್ತಿಯ ಜನರು ವ್ಯಾಪಾರ, ಆಸ್ಪತ್ರೆ, ಕೂಲಿ ಕೆಲಸ ಸೇರಿದಂತೆ ಇನ್ನಿತರ ಚಟುವಟಿಕೆಗಳಿಗೆ ಹೆಚ್ಚಾಗಿ ಈ ರಸ್ತೆಯನ್ನೇ ಅವಲಂಭಿಸಿದ್ದಾರೆ. ಅಲ್ಲದೇ ಪ್ರಮುಖ ರಸ್ತೆಯಾಗಿರುವ ಹಿನ್ನೆಲೆ ನಿತ್ಯ ಸಾವಿರಾರು ವಾಹನಗಳು ಗುಂಡಿ ಬಿದ್ದ ರಸ್ತೆಯಲ್ಲೇ ಸಂಚರಿಸುವ ಪರಿಸ್ಥಿತಿ ಬಂದಿದೆ.
ಸುಮಾರು ಐದಾರು ವರ್ಷಗಳ ಹಿಂದೆ ರಸ್ತೆಗೆ ಡಾಂಬರೀಕರಣವಾಗಿದ್ದು, ನಿರಂತರ ಮಳೆ ಹಾಗೂ ವಾಹನಗಳ ಸಂಚಾರ ದಟ್ಟಣೆಯಿಂದ ಈ ಮಾರ್ಗದ ರಾಜನಬಿಳಗೂಲಿ, ಸುಬ್ಬಯ್ಯನಕೊಪ್ಪಲು ಗೇಟ್ ಸೇರಿದಂತೆ ಹಲವಡೆ ರಸ್ತೆಯಲ್ಲಿ ಬೃಹತ್ ಗಾತ್ರದ ಗುಂಡಿಗಳು ಬಾಯ್ತೆರೆದಿದೆ. ಅಲ್ಲದೆ ಮಳೆ ಬಂದಂತಹ ಸಂದರ್ಭದಲ್ಲಿ ಗುಂಡಿಗಳಲ್ಲಿ ನೀರು ತುಂಬಿದ ಪರಿಣಾಮ ದೊಡ್ಡ ವಾಹನಗಳು ಸಂಚರಿಸುವ ಸಂದರ್ಭ ಪಾದಚಾರಿಗಳಿಗೆ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಗುಂಡಿಯ ನೀರು ಹಾರುತ್ತಿರುವ ಸಮಸ್ಯೆಗಳು ಉಂಟಾಗುತ್ತಿವೆ. ಇದರಿಂದ ವಾಹನ ಸವಾರರು ಸಂಚಾರ ಮಾಡುವಾಗ ಅಪಘಾತವಾಗಿ ಪೆಟ್ಟು ತಿಂದಿದ್ದಾರೆ. ಇದರಿಂದ ನಮಗೆ ರಸ್ತೆಯ ಮೇಲೆ ಸರ್ಕಸ್ ಮಾಡಿದಂತ ಅನುಭವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರಿ ವಾಹನಗಳ ಸಂಚಾರ: ಈ ಭಾಗದಲ್ಲಿ ಇರುವಂತಹ ಕಲ್ಲಿನ ಕ್ವಾರೆ ಹಾಗೂ ಕ್ರಷರ್ ಲಾರಿಗಳು ನಿತ್ಯ ಕಲ್ಲಿನಪುಡಿ, ಜಲ್ಲಿಕಲ್ಲುಗಳು ಸೇರಿದಂತೆ ಕಲ್ಲುಗಳನ್ನು ತುಂಬಿಕೊಂಡು ನಿಗದಿತ ಸ್ಥಳಕ್ಕೆ ತಲುಪಿಸಲು ಈ ರಸ್ತೆಯಲ್ಲಿಯೇ ಹೆಚ್ಚಾಗಿ ಸಂಚಾರ ಮಾಡುತ್ತವೆ. ಲಾರಿ, ಬೃಹತ್ ವಾಹನಗಳ ಓಡಾಟದಿಂದಲೂ ರಸ್ತೆ ಬಹುಬೇಗನೆ ಗುಂಡಿಬಿದ್ದು ಹಾಳಾಗಿವೆ. ನಿಗದಿತ ಸಾಮರ್ಥ್ಯಕಿಂತ ಹೆಚ್ಚಿನ ಮಟ್ಟದಲ್ಲಿ ತುಂಬಿಕೊಂಡು ಓಡಾಡುವುದು ಹಾಗೂ ರಸ್ತೆಯಲ್ಲಿ ವಾಹನಗಳು ಸಂಚಾರ ಮಾಡುವ ವೇಳೆ ಸರಿಯಾಗಿ ಜಾಗ ನೀಡದೆ ಇರುವುದು ಕೂಡ ಲಾರಿಗಳ ಮತ್ತೊಂದು ಸಮಸ್ಯೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಸಾರಿಗೆ ಆಯುಕ್ತರು ಹಾಗೂ ಸ್ಥಳೀಯ ಆಡಳಿತವು ಗಮನಹರಿಸಬೇಕು ಎಂಬುದು ಜನರ ಒತ್ತಾಯವಾಗಿದೆ.
ಕೃಷಿ ಚಟುವಟಿಕೆಗೆ ಸಮಸ್ಯೆ: ಈಗಾಗಲೇ ಮುಂಗಾರು ಮಳೆ ಆರಂಭಗೊಂಡು ಈ ಭಾಗದಲ್ಲಿ ಬಹುತೇಕ ಕೃಷಿ ಚಟುವಟಿಕೆಗಳು ನಡೆಯುತ್ತಿವೆ. ಪ್ರಮುಖ ವಾಣಿಜ್ಯ ಬೆಳೆಗಳಾದ ತಂಬಾಕು ಹಾಗೂ ಶುಂಠಿ ಬೆಳೆಗಳನ್ನು ಇಲ್ಲಿನ ರೈತರು ಬೇಸಾಯ ಮಾಡಿದ್ದು, ಈಗಾಗಲೇ ಉತ್ತಮ ಇಳುವರಿ ಬಂದಿರುವ ತಂಬಾಕು ಎಲೆಗಳನ್ನು ಮುರಿದು ಹದ ಮಾಡುವ ಪ್ರಕ್ರಿಯೆ ಕೂಡ ಚಾಲ್ತಿಯಲ್ಲಿದೆ. ರೈತರು ಮುರಿದಂತಹ ತಂಬಾಕು ಎಲೆಗಳನ್ನು ಟ್ರಾೃಕ್ಟರ್ ಹಾಗೂ ಎತ್ತಿನ ಗಾಡಿಗಳು ಸೇರಿದಂತೆ ಇನ್ನಿತರ ವಾಹನಗಳಲ್ಲಿ ಇದೇ ರಸ್ತೆಯಲ್ಲಿ ತಮ್ಮ ಬ್ಯಾರನ್ ಮನೆಗೆ ಕೊಂಡೊಯ್ಯಬೇಕಾಗಿದ್ದು, ಈ ರಸ್ತೆಯನ್ನೇ ಹೆಚ್ಚಾಗಿ ಅವಲಂಭಿಸಿದ್ದಾರೆ. ಆದರೆ ರಸ್ತೆಯಲ್ಲಿ ಗುಂಡಿಗಳದೇ ದರ್ಬಾರ್ ಉಂಟಾಗಿರುವ ಪರಿಣಾಮ ರೈತರಿಗೂ ಓಡಾಡಲು ಸಾಕಷ್ಟು ಸಮಸ್ಯೆ ಉಂಟಾಗಿ ಕೃಷಿ ಚಟುವಟಿಕೆಗೂ ಒಂದಿಷ್ಟು ತೊಡಕು ಉಂಟಾಗಿದೆ.
ಹಲಗನಹಳ್ಳಿ, ರಾಜನಬಿಳಗೂಲಿ, ಐಚನಹಳ್ಳಿ, ಕಣಗಾಲು, ಹೊನ್ನಾಪುರ, ಸೂಳೆಕೋಟೆ, ಹೆಬ್ಬಾಲೆ ಮಾರ್ಗವಾಗಿ ಮಡಿಕೇರಿ ಹಾಸನ ಹೆದ್ದಾರಿಗೆ ಮತ್ತು ಶ್ಯಾನುಭೋನಹಳ್ಳಿ, ಆವರ್ತಿ, ಕೊಪ್ಪ ಮಾರ್ಗವಾಗಿ ಬೆಂಗಳೂರು ಮಂಗಳೂರು ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ರಸ್ತೆಯೂ ಹಲವೆಡೆ ತುಂಬ ಅಚ್ಚುಕಟ್ಟಾಗಿ ಇದ್ದರು, ಸಾಕಷ್ಟು ಕಡೆ ಗುಂಡಿಬಿದ್ದು ಸಂಪೂರ್ಣ ಹಾಳಾಗಿದೆ. ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನಹರಿಸಿ ಕೂಡಲೇ ಗುಂಡಿ ಬಿದ್ದಿರುವ ಸ್ಥಳಗಳಲ್ಲಿ ದುರಸ್ಥಿಕೈಗೊಳ್ಳಬೇಕು ಎಂಬುದು ಈ ಭಾಗದ ಸ್ಥಳೀಯರು ಹಾಗೂ ವಾಹನ ಸವಾರರ ಪ್ರಮುಖ ಒತ್ತಾಯವಾಗಿದೆ.