ಜಿಲ್ಲೆ

ರಸ್ತೆಯೇ ಡಂಪಿಂಗ್ ಯಾರ್ಡ್! : ನರಿಕೊಂಬು ಗ್ರಾಮದ ನೆಹರುನಗರ ಬಳಿ ಕಸದ ರಾಶಿ : ಸ್ವಚ್ಛತಾ ಜಾಗೃತಿ ಮರೆತ ಕಿಡಿಗೇಡಿಗಳು

ಸೌಮ್ಯ ಆರ್

ಸಂದೀಪ್ ಸಾಲ್ಯಾನ್ ಬಂಟ್ವಾಳ

ನರಿಕೊಂಬು ಗ್ರಾಮದ ನೆಹರುನಗರ ಬಳಿ ಕಸದ ರಾಶಿಯೊಂದು ವ್ಯಾಪಿಸಿಕೊಂಡು ಸಂಪರ್ಕ ರಸ್ತೆಯನ್ನೇ ಆಪೋಶನಗೈಯ್ಯುತ್ತಿದೆ. ನೆಹರುನಗರ ಕಿರಿಯ ಪ್ರಾಥಮಿಕ ಶಾಲೆಯ ಹಿಂಭಾಗ, ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿ ಸನಿಹವೇ ಈ ಕಸದ ರಾಶಿಯಿದ್ದು ಡಂಪಿಂಗ್ ಯಾರ್ಡ್ ಆಗಿ ಬದಲಾಗುತ್ತಿದೆ.

ನೂತನವಾಗಿ ನಿರ್ಮಾಣಗೊಂಡಿರುವ ಚತುಷ್ಪಥ ಹೆದ್ದಾರಿಯಿಂದ ನರಿಕೊಂಬು, ಶಂಭೂರು, ಜೈನರ ಪೇಟೆ, ಮಾರುತಿ ನಗರ ಮತ್ತಿತರ ಭಾಗಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಈ ಅನಧಿಕೃತ ಕಸ ರಾಶಿ ಸಾರ್ವಜನಿಕರಿಗೆ ಅಸಹ್ಯ ಹುಟ್ಟಿಸುತ್ತಿದೆ. ಈ ರಸ್ತೆ ಸ್ಥಳೀಯ ಕೆಲವು ಮನೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ರಸ್ತೆ ಮೂಲಕ ನಿತ್ಯ ಅನೇಕ ಮಂದಿ ನಡೆದುಕೊಂಡು ಹೋಗುತ್ತಾರೆ. ಆದರೆ ಇತ್ತೀಚಿನ ಕೆಲ ದಿನಗಳಿಂದ ಇಲ್ಲಿ ಕಸದ ರಾಶಿ ತುಂಬಿಕೊಂಡು, ಪರಿಸರವಿಡಿ ವಾಸನೆ ಬೀರಿ ಜನರು ನಡೆಯಲಾಗದ ಸ್ಥಿತಿ ನಿರ್ಮಾಣಗೊಂಡಿದೆ.

ಸ್ಥಳೀಯರು ಹಲವು ಬಾರಿ ಈ ಬಗ್ಗೆ ನರಿಕೊಂಬು ಪಂಚಾಯಿತಿಗೆ ದೂರು ಸಲ್ಲಿಸಿದ್ದಾರೆ. ಪಂಚಾಯಿತಿ ಕೂಡ ಆಗಾಗ ಕಸ ತೆಗೆಯುವ ಕಾರ್ಯ ಮಾಡಿದೆ. ಆದರೆ ಮತ್ತೆ ಮತ್ತೆ ಕಸ ಬೀಳುತ್ತಲೆ ಇದೆ. ಜನವಸತಿ ಪ್ರದೇಶಕ್ಕೆ ಸಂಪರ್ಕಿಸುವ ರಸ್ತೆ ಬದಿ ಈ ರೀತಿ ಕಸ ರಾಶಿ ಬಿದ್ದು ವಾಸನೆ ಬೀರುತ್ತಿದ್ದರೆ ರೋಗ ರುಜಿನಗಳು ಸುಲಭವಾಗಿ ಹರಡುತ್ತವೆ. ಈ ದುರ್ವಾಸನೆಯನ್ನು ಸಹಿಸಿಕೊಂಡು ಸಂಚರಿಸಬೇಕಾದ ಅನಿವಾರ್ಯತೆ ನಮಗೆ ಬಂದೊದಗಿದೆ ಎಂದು ಸ್ಥಳೀಯರು ‘ವಿಜಯವಾಣಿ’ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.

ನೆಹರುನಗರ, ನರಿಕೊಂಬು, ಶಂಭೂರು ಭಾಗಗಳಿಗೆ ಪರ್ಯಾಯ ಸಂಪರ್ಕ ರಸ್ತೆ ವ್ಯವಸ್ಥೆ ಇದ್ದರೂ ಕಸ ಎಸೆಯಲೆಂದೇ ಆ ಭಾಗದ ಕೆಲವರು ವಾಹನಗಳಲ್ಲಿ ಬಂದು ಕಸ ಎಸೆದು ಹೋಗುತ್ತಾರೆ. ಈ ಬಗ್ಗೆ ಪಂಚಾಯಿತಿ ಯಾವುದೇ ಕಠಿಣ ಕಾನೂನು ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯಲು ಅವಕಾಶ ಮಾಡಿಕೊಟ್ಟಂತಾಗಿದೆ ಎನ್ನುವುದು ಸ್ಥಳೀಯರ ದೂರು.

ಶಾಲೆ ಬಳಿ ಕಸದ ರಾಶಿ

ಕಸದ ರಾಶಿ ತುಂಬಿರುವ ಜಾಗದಲ್ಲಿ ನೆಹರು ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿದೆ. ಶಾಲೆಯ ಹಿಂಭಾಗದಲ್ಲಿರುವ ತ್ಯಾಜ್ಯದ ದುರ್ವಾಸನೆ ಶಾಲೆಯವರೆಗೂ ವ್ಯಾಪಿಸುತ್ತಿದೆ. ಶಾಲೆ ಬಳಿಯಲ್ಲಿ ಇಂತಹ ಕೊಚ್ಚೆ ತುಂಬಿಕೊಂಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈಗ ಶಾಲೆಗೆ ರಜೆ ಇದೆ, ಕೆಲವೇ ದಿನಗಳಲ್ಲಿ ಶಾಲೆ ಪುನರಾರಂಭಗೊಳ್ಳುವಾಗ ದುರ್ವಾಸನೆ ಬೀರುವ ತ್ಯಾಜ್ಯದ ರಾಶಿ ವಿದ್ಯಾರ್ಥಿಗಳನ್ನು ಎದುರುಗೊಳ್ಳಲಿದೆ. ಆದ್ದರಿಂದ ಸಂಬಂಧಪಟ್ಟವರು ಇತ್ತ ಗಮನಹರಿಸಿ ಪರಿಸರವನ್ನು ಸ್ವಚ್ಛಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ನೆಹರು ನಗರ ರಸ್ತೆ ಬಳಿ ಕಸ ರಾಶಿ ಬೀಬಿಳುವುದರಿಂದ ನಮಗೆ ನಡೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುತ್ತಿರುವುದರಿಂದ ಪರಿಸರದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ರಶ್ಮಿ ವೆಂಕಟೇಶ್, ಸ್ಥಳೀಯ ನಿವಾಸಿ ಇಲ್ಲಿ ಹಲವು ಬಾರಿ ರಾಶಿ ಬಿದ್ದ ಕಸವನ್ನು ಪಂಚಾಯತಿ ವತಿಯಿಂದ ತೆರವುಗೊಳಿಸಲಾಗಿದೆ. ಕಸ ಎಸೆಯದಂತೆ ಎಚ್ಚರಿಕೆ ಬ್ಯಾನರ್ ಕೂಡ ಅಳವಡಿಸಲಾಗಿದೆ. ಆದರೂ ಕೆಲವರು ಇಲ್ಲೇ ಕಸ ಎಸೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಿಸಿ ಟಿವಿ ಅಳವಡಿಸುವ ಬಗ್ಗೆ ಯೋಜನೆ ರೂಪಿಸಲಾಗುವುದು. ಸಂತೋಷ್ ಕುಮಾರ್ ನರಿಕೊಂಬು ಗ್ರಾಮ ಪಂಚಾಯಿತಿ ಅಧ್ಯಕ್ಷ