ಮಾನ್ವಿ ಸಾರ್ವಜನಿಕ ಆಸ್ಪತ್ರೆಗೆ ಹೋಗುವ ರಸ್ತೆಯಲ್ಲಿ ಹಾಕಿರುವ ರೋಡ್ ಹಂಪ್ ದಾಟುತ್ತಿರುವ ಆಂಬುಲೆನ್ಸ್  
ಜಿಲ್ಲೆ

ರೋಡ್ ಹಂಪ್‌ಗಳಿಂದ ಸುಸ್ತು - ಸರ್ಕಾರಿ ಆಸ್ಪತ್ರೆ ದಾರಿಯಲ್ಲಿ ಅವೈಜ್ಞಾನಿಕ ನಿರ್ಮಾಣ - ರೋಗಿಗಳಿಗೆ ಮತ್ತಷ್ಟು ತೊಂದರೆ

ಶರಣಬಸವ ನೀರಮಾನ್ವಿ ಮಾನ್ವಿ
ಜನವಸತಿ ಸ್ಥಳಗಳಲ್ಲಿ ಅತಿಯಾದ ವೇಗದಿಂದ ಉಂಟಾಗುವ ಅಪಘಾತ ತಡೆಯಲು ಅಲ್ಲಲ್ಲಿ ರೋಡ್ ಹಂಪ್ಸ್ (ರಸ್ತೆ ಉಬ್ಬುಗಳು) ನಿರ್ಮಿಸುವುದು ಸಾಮಾನ್ಯ. ಆದರೆ, ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಹೋಗುವ ದಾರಿಯುದ್ದಕ್ಕೂ 20ಕ್ಕೂ ಹೆಚ್ಚು ಕಡೆ ಅವೈಜ್ಞಾನಿಕ ರೋಡ್ ಹಂಪ್ಸ್ ಹಾಕಿರುವುದು ವಿಪರ್ಯಾಸ.

ಶಾಲಾ-ಕಾಲೇಜು ಪ್ರದೇಶ, ಆಸ್ಪತ್ರೆ, ಜನದಟ್ಟಣೆ ಪ್ರದೇಶದಲ್ಲಿ ಹಾಗೂ ರಸ್ತೆ ಕ್ರಾಸ್ ಬಳಿ ಅಪಘಾತ ತಡೆಯಲು ಸುರಕ್ಷತಾ ದೃಷ್ಟಿಯಿಂದ ವೈಜ್ಞಾನಿಕವಾಗಿ ಹಂಪ್ಸ್ ನಿರ್ಮಿಸುವುದನ್ನು ನೋಡಿರುತ್ತೇವೆ. ಆದರೆ, ಪಟ್ಟಣದ ಪ್ರವಾಸಿ ಮಂದಿರದಿಂದ ಸಾರ್ವಜನಿಕ ಆಸ್ಪತ್ರೆ ಸುಮಾರು ಅರ್ಧ ಕಿಮೀ ಇರಬಹುದು. ಅಷ್ಟರೊಳಗೆ 20ಕ್ಕೂ ಹೆಚ್ಚು ರೋಡ್ ಹಂಪ್ಸ್ ಹಾಕಿರುವುದರಿಂದ ಆಸ್ಪತ್ರೆಗೆ ಹೋಗುವ ಅಂಬುಲೆನ್ಸ್ ಮತ್ತು ಇತರೆ ಖಾಸಗಿ ವಾಹನಗಳು ತೊಂದರೆ ಅನುಭವಿಸುವಂತಾಗಿದೆ.

ಆಸ್ಪತ್ರೆಗೆ ರೋಗಿಗಳನ್ನು, ವೃದ್ಧರನ್ನು, ಗರ್ಭಿಣಿಯರನ್ನು ಕರೆದೊಯ್ಯುವಾಗಿ ಈ ರೋಡ್ ಹಂಪ್ಸ್‌ಗಳಿಂದ ತೀವ್ರ ತೊಂದರೆ ಮತ್ತು ಕಿರಿಕಿರಿಯಾಗುತ್ತಿದೆ. ವೇಗವಾಗಿ ಹೋದರೆ ಹಂಪ್ಸ್‌ಗಳಿಂದ ವಾಹನ ಮತ್ತು ಅದರೊಳಿರುವ ರೋಗಿಗಳಿಗೆ ಅಪಾಯ. ಗರ್ಭಿಣಿಯರನ್ನು ಕರೆದೊಯ್ಯುವಾಗ ಈ ಹಂಪ್ಸ್ ಕಾಟಕ್ಕೆ ಎಲ್ಲಿ ವಾಹನದಲ್ಲೇ ಹೆರಿಗೆ ಆಗುತ್ತದೆಯೋ ಎಂಬ ಆತಂಕ ಕಾಡದೇ ಇರದು.

ಅಪಘಾತಕ್ಕೆ ಕಾರಣ, ಅವೈಜ್ಞಾನಿಕ ನಿರ್ಮಾಣ
ಪಟ್ಟಣದ ಮತ್ತು ಗ್ರಾಮೀಣ ಪ್ರದೇಶಗಳ ಕೆಲಕಡೆ ಅವಶ್ಯವಿಲ್ಲದೆ ಇದ್ದರೂ ರಸ್ತೆಗೆ ಹಂಪ್ಸ್ ಹಾಕಲಾಗಿದೆ. ಇದರಿಂದಲೇ ಹಲವು ಅವಘಡಗಳು ಸಂಭವಿಸಿವೆ. ಅಪಘಾತ ತಪ್ಪಿಸಲು ಇರಬೇಕಾದ ಹಂಪ್‌ಗಳಿಂದಲೇ ಸಾವು-ನೋವು ಉಂಟಾದರೆ ಹೇಗೆ ಎಂಬುದು ವಾಹನ ಸವಾರ ಪ್ರಶ್ನೆ. ಪಟ್ಟಣದ ಬಹುತೇಕ ರಸ್ತೆಗಳಲ್ಲಿ ವಾಹನ ಚಾಲಕರು ಜಾಗರೂಕರಾಗಿ ಚಲಾಯಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಪಟ್ಟಣದ ಸಿಮೆಂಟ್ ರೋಡ್, ಅಂಚೆ ಕಚೇರಿ ಮುಂದೆ, ಕೆನಾಲ್ ರೋಡ್, ತಾಲೂಕಿನ ಕಪಗಲ್, ಹಿರೇಕೊಟ್ನೆಕಲ್, ಸಂಗಾಪುರ, ಪೋತ್ನಾಳ ಗ್ರಾಮಗಳಲ್ಲಿ ನಾಲ್ಕೈದು ಕಡೆ ಹಂಪ್ಸ್ ಹಾಕಲಾಗಿದೆ. ಬಹುತೇಕ ಎಲ್ಲ ಹಂಪ್‌ಗಳನ್ನು ನಿಯಮ ಗಾಳಿಗೆ ತೂರಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಹಲವೆಡೆ ಬೇಕಾಬಿಟ್ಟಿ ನಿರ್ಮಿಸಲಾಗಿದೆ. ಕೆಲವಡೆಯಂತೂ ಗೋಡೆ ನಿರ್ಮಿಸಿದಂತೆ ಹಂಪ್ಸ್ ಹಾಕಲಾಗಿದ್ದು, ಕಾರು-ದ್ವಿಚಕ್ರ ವಾಹನಗಳ ಕೆಳಭಾಗ ಜಖಂ ಆಗಿವೆ. ಎಷ್ಟೋ ವಾಹನಗಳು ಕೆಟ್ಟು ನಿಂತು ವಾಹನ ಸವಾರರು ತೊಂದರೆ ಅನುಭವಿಸಿರುವ ಉದಾಹರಣೆಗಳು ಇವೆ. ಬೈಕ್ ಹಿಂದೆ ಕುಳಿತವರಂತೂ ಪ್ರಾಣ ಬಿಗಿಹಿಡಿದು ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ.

ನಿಯಮದ ಪ್ರಕಾರ ಪಟ್ಟಣದ ಮತ್ತು ಗ್ರಾಮೀಣ ವ್ಯಾಪ್ತಿಯಲ್ಲಿ ಅಗತ್ಯ ಇರುವಲ್ಲಷ್ಟೇ ಹಂಪ್‌ಗಳನ್ನು ಪೊಲೀಸ್ ಇಲಾಖೆ ಪರವಾನಗಿಯೊಂದಿಗೆ ಹಾಕಬೇಕು ಮತ್ತು ಅದಕ್ಕೆ ಬಣ್ಣದಿಂದ ಗುರುತು ಮಾಡಬೇಕು. ಆದರೆ, ಸ್ಥಳೀಯ ನಿವಾಸಿಗಳು ರಸ್ತೆ ಮಾಡುವ ಗುತ್ತಿಗೆದಾರರು ಮತ್ತು ಆ ಭಾಗದ ಜನಪ್ರತಿನಿಧಿ ಮೇಲೆ ಒತ್ತಡ ತಂದು ಹಂಪ್ಸ್ ಹಾಕಿಸಿಕೊಳ್ಳುತ್ತಾರೆ.

ಆಸ್ಪತ್ರೆಗೆ ಬರುವ ದಾರಿಯಲ್ಲಿ ಇಷ್ಟೊಂದು ರೋಡ್ ಹಂಪ್ಸ್ ಇರುವುದರಿಂದ ಅಂಬುಲೆನ್ಸ್ ವಾಹನ ಮತ್ತು ಆಸ್ಪತ್ರೆಗೆ ಬರುವ ರೋಗಿಗಳಿಗೆ ತೊಂದರೆಯಾಗುತ್ತಿದೆ. ಅದರಲ್ಲಿ ತುರ್ತು ಚಿಕಿತ್ಸೆಗೆಂದು ಜಿಲ್ಲಾ ಆಸ್ಪತ್ರೆಗೆ ಅಂಬುಲೆನ್ಸ್ ವಾಹನದಲ್ಲಿ ಕಳಿಸುವಾಗ ರೋಗಿಗೆ ಆಕ್ಸಿಜನ್, ಗ್ಲುಕೋಸ್ ಹಾಕಿ ಕಳಿಸಲಾಗುತ್ತದೆ. ವೇಗವಾಗಿ ಹೋಗುವ ಸಂದರ್ಭ ಅತಿಯಾದ ಜಂಪ್‌ಗಳಿಂದ ಅಂಬುಲೆನ್ಸ್‌ನಲ್ಲಿರುವ ಸಲಕರಣೆಗಳಿಗೆ ತೊಂದರೆಯಾದರೆ ಅದರಲ್ಲಿರುವ ರೋಗಿಗಳಿಗೆ ಇನ್ನೂ ಕಷ್ಟ. ಅವಶ್ಯಕತೆ ಇರುವೆಡೆ ಹಂಪ್ಸ್ ಉಳಿಸಿ, ಉಳಿದವನ್ನು ತೆರವುಗೊಳಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿಸುವೆ.
ಡಾ. ಚಂದ್ರಶೇಖರಸ್ವಾಮಿ, ತಾಲೂಕು ವೈದ್ಯಾಧಿಕಾರಿ, ಮಾನ್ವಿ

ಆಸ್ಪತ್ರೆ ದಾರಿಯಲ್ಲಿ ಅತಿಯಾದ ಅವೈಜ್ಞಾನಿಕವಾಗಿ ರೋಡ್ ಹಂಪ್ಸ್ ಹಾಕಲಾಗಿದೆ. ರೋಗಿಗಳು ತುರ್ತು ಚಿಕಿತ್ಸೆಗೆ ಹೋಗುವಾಗ ತ್ರಾಸು ಹಾಗುತ್ತದೆ. ಶಾಲೆ ಮತ್ತು ಸಾರ್ವಜನಿಕರು ರಸ್ತೆ ದಾಟುವಲ್ಲಿ ಹಂಪ್ಸ್ ಹಾಕಿದರೆ ಒಳ್ಳೆಯದು. 50 ಮೀಟರ್ ಅಂತರದಲೂ ಹಂಪ್ಸ್ ಹಾಕಿದ್ದು ಸರಿಯಲ್ಲ.
ಬಸವರಾಜ ಭಜಂತ್ರಿ , ಕುಳುವ ಸಮಾಜದ ಅಧ್ಯಕ್ಷ, ಮಾನ್ವಿ.