ಹೂವಿನಹಡಗಲಿ: ಕಳೆದ ಐದು ವರ್ಷಗಳಿಂದಲೂ ಪಟ್ಟಣದ ಸರ್ಕಾರಿ ಬಸ್‌ನಿಲ್ದಾಣದ ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ ಸಾರ್ವಜನಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿದೆ.
ಬಸ್‌ನಿಲ್ದಾಣಕ್ಕೆ ಪ್ರವೇಶ ಕಲ್ಪಿಸುವ ಎರಡೂ ಮಾರ್ಗ ಮತ್ತು ಬಸ್‌ನಿಲ್ದಾಣದ ಮುಂಭಾಗದಲ್ಲಿ ಖಾಸಗಿ ವ್ಯಕ್ತಿಗಳು ಸಾಲಾಗಿ ಗೂಡಂಗಡಿಗಳನ್ನು ಹಾಗೂ ಶಾಶ್ವತ ಅಂಗಡಿಗಳನ್ನು ನಿರ್ಮಾಣ ಮಾಡಿಕೊಂಡು ರಸ್ತೆ ಅತಿಕ್ರಮ ಮಾಡಿಕೊಂಡಿದ್ದಾರೆ. ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ.
ಫೂಟ್‌ಪಾತ್ ಮೇಲೆಯೇ ಚಪ್ಪಲ್ಲಿ ವ್ಯಾಪಾರ, ತರಕಾರಿ ವ್ಯಾಪಾರ, ಎಗ್‌ರೈಸ್, ಹೋಟೆಲ್, ಹಣ್ಣುಗಳ ಮಾರಾಟ, ಬೀಡಿ ಅಂಗಡಿಗಳನ್ನು ನಿರ್ಮಾಣ ಮಾಡಲಾಗಿದೆ. ಇದರಿಂದ ಬಸ್‌ನಿಲ್ದಾಣದಲ್ಲಿ ನಿರ್ಮಾಣ ಮಾಡಿರುವ ವ್ಯಾಪಾರ ಮಳಿಗೆಗಳ ಕಡೆಗೆ ಯಾರೂ ಕೂಡಾ ಗಮನ ಹರಿಸುತ್ತಿಲ್ಲ . ಬಸ್‌ನಿಲ್ದಾಣ ಪ್ರವೇಶ ಮಾಡುವ ಎರಡೂ ಮಾರ್ಗಗಳು ಕಿರಿದಾಗಿದ್ದು, ಸಾರಿಗೆ ವಾಹನ ಚಾಲಕರು ವಾಹನ ಚಲಾಯಿಸಲು ಪರದಾಡುತ್ತಿದ್ದಾರೆ.
ಕ್ರಮಕ್ಕೆ ಮುಂದಾಗದ ಅಧಿಕಾರಿಗಳು: ಬಸ್‌ನಿಲ್ದಾಣದ ಮುಂಭಾಗದಲ್ಲಿರುವ ಗೂಡಂಗಡಿಗಳನ್ನು ತೆರವುಗೊಳಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳು, ಪುರಸಭೆ, ತಾಲೂಕು ಪಂಚಾಯತಿ, ಪೊಲೀಸ್ ಇಲಾಖೆ ಸೇರಿದಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರೂ ಅಧಿಕಾರಿಗಳು ಮಾತ್ರ ಇತ್ತ ಕಡೆ ಗಮನಹರಿಸುತ್ತಿಲ್ಲ. ಅಂಗಡಿಗಳ ತೆರವುಗೊಳಿಸಿದರೆ ಬಸ್‌ನಿಲ್ದಾಣದ ಅಂದ ಹೆಚ್ಚುವುದರ ಜತೆಗೆ ಸಾರಿಗೆ ವಾಹನಗಳ ಸರಾಗ ಸಂಚಾರ ಹಾಗೂ ಪಾರ್ಕಿಂಗ್ ವ್ಯವಸ್ಥೆಗೆ ಅವಕಾಶ ದೊರುಕುತ್ತದೆ ಎಂಬುದು ಕೆಲ ಸಾರಿಗೆ ನೌಕರರ ಅಭಿಪ್ರಾಯವಾಗಿದೆ.
ಅಕ್ರಮ ಚಟುವಟಿಕೆಗಳ ತಾಣ: ಸಾರಿಗೆ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಬೀಡಿ ಅಂಗಡಿಗಳಲ್ಲಿ ನಿತ್ಯ ಅಕ್ರಮವಾಗಿ ಮದ್ಯಮಾರಾಟ ನಿರಂತರವಾಗಿ ನಡೆಯುತ್ತಿದೆ. ಬೀಡಿ ಅಂಗಡಿಗಳ ಹಿಂಭಾಗ ಹಾಗೂ ಬಸ್‌ನಿಲ್ದಾಣದ ಮುಂಭಾಗದಲ್ಲಿ ಮದ್ಯಪ್ರೀಯರು ಬಾಟಲಿ ಹಾಗೂ ಗ್ಲಾಸ್‌ಗಳನ್ನು ಹಿಡಿದು ಮದ್ಯ ಸೇವಿಸುತ್ತಾ ಕುಳಿತುಕೊಳ್ಳುತ್ತಾರೆ. ಮದ್ಯ ಸೇವಿಸಿದ ಅಮಲಿನಲ್ಲಿ ಬಸ್‌ನಿಲ್ದಾಣದಲ್ಲಿರುವ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವ ದೃಶ್ಯಗಳು ಸಾಮಾನ್ಯವಾಗಿವೆ. ಇದರಿಂದ ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮದ್ಯ ಸೇವಿಸುವವರು ಬಸ್‌ನಿಲ್ದಾಣದಲ್ಲಿಯೇ ಮದ್ಯದ ಬಾಟಲಿ ಹಾಗೂ ಪ್ಲಾಸ್ಟಿಕ್ ಗ್ಲಾಸ್‌ಗಳನ್ನು ಎಸೆಯುತ್ತಾರೆ ಇದರಿಂದ ನಿಲ್ದಾಣದಲ್ಲಿ ಸ್ವಚ್ಛತೆ ಮಾಯವಾಗಿದೆ.
ಪ್ರಭಾವಿಗಳಿಂದ ಶೆಡ್ ನಿರ್ಮಾಣ: ಪಟ್ಟಣದ ಪ್ರಮುಖ ರಸ್ತೆ ಮತ್ತು ವೃತ್ತದಲ್ಲಿನ ಸಾರ್ವಜನಿಕ ಸ್ಥಳಗಳಲ್ಲಿ ಪ್ರಭಾವಿಗಳು ಬಿದಿರು ಹಾಗೂ ಕಬ್ಬಿಣದ ಶೆಡ್‌ಗಳನ್ನು ನಿರ್ಮಿಸಿದ್ದಾರೆ. ಅವುಗಳಿಗೆ ತಿಂಗಳಿಗೆ ಇಂತಿಷ್ಟು ಹಣವನ್ನು ನಿಗದಿ ಮಾಡಿ ಬಾಡಿಗೆ ನೀಡುತ್ತಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಶೆಡ್‌ನಿರ್ಮಾಣ ಮಾಡಿ ತಿಂಗಳಿಗೆ ಸಾವಿರಾರು ರೂ. ಹಣ ಗಳಿಸುತ್ತಿರುವ ಪ್ರಭಾವಿಗಳು ಅಧಿಕಾರಿಗಳೊಂದಿಗೆ ಶಾಮೀಲಾಗಿದ್ದಾರೆ ಎಂಬ ಮಾತುಗಳು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸಾಕಷ್ಟು ಬಾರಿ ಚರ್ಚೆಯಾದರೂ ಅಧಿಕಾರಿಗಳು ಜನಪ್ರತಿನಿಧಿಗಳು ಅನಧಿಕೃತ ಶೆಡ್‌ಗಳ ತೆರವಿಗೆ ಮಾತ್ರ ಮುಂದಾಗದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಸಾರಿಗೆ ಬಸ್‌ನಿಲ್ದಾಣದ ಮುಂಭಾಗದಲ್ಲಿರುವ ಅನಧಿಕೃತ ಶೆಡ್ ಹಾಗೂ ಗೂಡಂಗಡಿಗಳನ್ನು ನಿರ್ಮಾಣ ಮಾಡಿದ್ದು ಅವುಗಳನ್ನು ತೆರುವುಗೊಳಿಸುವಂತೆ ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು. ಮನವಿಗೆ ಜಿಲ್ಲಾಧಿಕಾರಿಗಳು ಮಾ.14.2025 ರಂದು ಪುರಸಭೆ ಅಧಿಕಾರಿಗಳಿಗೆ ಈ ಕುರಿತು ಸೂಕ್ತ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದರೂ ಕೂಡ ಅಧಿಕಾರಿಗಳು ಮಾತ್ರ ತಮಗೆ ಸಂಬಂಧವಿಲ್ಲವೆಂಬಂತೆ ಕುಳಿತುಕೊಂಡಿದ್ದಾರೆ.
ಸಾರಿಗೆ ಬಸ್‌ನಿಲ್ದಾಣದ ಮುಂಭಾಗದಲ್ಲಿ ನಿರ್ಮಾಣಮಾಡಿರುವ ಗೂಡಂಗಡಿಗಳಿಂದ ನಮ್ಮ ಸಾರಿಗೆ ವಾಹನಗಳ ಸುಗಮ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ. ಅವುಗಳನ್ನು ತೆರವುಗೊಳಿಸುವಂತೆ ಪುರಸಭೆ, ತಾಲೂಕು ಪಂಚಾಯತಿ, ಜಿಲ್ಲಾಧಿಕಾರಿ ಸೇರಿದಂತೆ ಇತರೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಏನೂ ಪ್ರಯೋಜನವಾಗಿಲ್ಲ. ವೆಂಕಟಾಚಲಪತಿ ಸಾರಿಗೆ ಘಟಕ ವ್ಯವಸ್ಥಾಪಕ, ಹೂವಿನಹಡಲಿ ಪಟ್ಟಣದಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ಪಾದಚಾರಿ ಮಾರ್ಗ ಅಭಿವೃದ್ಧಿಗೊಳಿಸಲಾಗುತ್ತಿದ್ದು, ಕಿತ್ತೂರುರಾಣಿ ಚನ್ನಮ್ಮ ವೃತ್ತದಿಂದ ಶಾಸ್ತ್ರಿವೃತ್ತದ ವರೆಗೆ ಕಾಮಗಾರಿ ಪ್ರಗತಿಯಲ್ಲಿದೆ. ನಂತರದ ದಿನಗಳಲ್ಲಿ ಸೋಗಿ ವೃತ್ತದವರೆಗೂ ಕಾಮಗಾರಿ ಅಭಿವೃದ್ಧಿ ಪಡಿಸಲಾಗುವುದು. ಆ ಸಂದರ್ಭದಲ್ಲಿ ರಸ್ತೆ ಬದಿಯ ಎಲ್ಲ ಅಂಗಡಿಗಳನ್ನು ತೆರವುಗೊಳಿಸಲಾಗುವುದು. ಇಮಾಮ್ ಸಾಹೇಬ್ ಪುರಸಭೆ ಮುಖ್ಯಾಧಿಕಾರಿ, ಹೂವಿನಹಡಗಲಿ