ಜಿಲ್ಲೆ

ಲಿಂಗಸುಗೂರಿನಲ್ಲಿ ರಸ್ತೆ ಅತಿಕ್ರಮಣ ತೆರವು

ಅಶೋಕ್ ಕುಮಾರ್ ಎನ್

ಲಿಂಗಸುಗೂರು: ಪಟ್ಟಣದ ಬಸ್ ನಿಲ್ದಾಣ ಮುಂಭಾಗದಲ್ಲಿನ ರಸ್ತೆ ವಿಸ್ತರಣೆ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ಜೆಸಿಬಿ ಯಂತ್ರಗಳ ಮೂಲಕ ಪುರಸಭೆಯಿಂದ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಲಾಯಿತು.

ರಸ್ತೆ ಬದಿ ಡಬ್ಬಾಗಳನ್ನು ಅಂಗಡಿಯವರು ಸ್ವಯಂಪ್ರೇರಿತರಾಗಿ ತೆರವುಗೊಳಿಸಿದ್ದರು. ಆದರೆ, ಬಹುತೇಕ ಕಟ್ಟಡಗಳ ಮಾಲೀಕರು ಹಾಗೂ ಬುನಾದಿ ಹಾಕಿದ ಡಬ್ಬಾ ಅಂಗಡಿಗಳು ಹಾಗೆಯೇ ಉಳಿದಿದ್ದವು. ಭಾನುವಾರ ಬೆಳಗಿನ ಜಾವ 4 ಗಂಟೆಯಿಂದ ಪುರಸಭೆ ಅಧಿಕಾರಿ, ಸಿಬ್ಬಂದಿ ಪೊಲೀಸ್ ಬಂದೋಬಸ್ತ್‌ನಲ್ಲಿ ಜೆಸಿಬಿ ಯಂತ್ರಗಳ ಮೂಲಕ 50 ಅಡಿ ರಸ್ತೆ ಅಳತೆ ಮಾಡಿ ಅತಿಕ್ರಮಣ ತೆರವು ಕಾರ್ಯಚರಣೆ ನಡೆಸಿದರು.

ಕೆಲವೆಡೆ ವಿದ್ಯುತ್ ಕಂಬಗಳು ಮತ್ತು ಗಿಡ-ಮರಗಳನ್ನು ಹಾಗೆಯೇ ಉಳಿಸಲಾಗಿದೆ. 50 ಅಡಿ ಅಳತೆ ಮಾಡಿ ರಸ್ತೆ ಡಾಂಬರೀಕರಣಗೊಳಿಸಬೇಕು. ಚರಂಡಿ ಮತ್ತು ಫುಟ್‌ಪಾತ್ ಕಾಮಗಾರಿಗೆ ಆದ್ಯತೆ ನೀಡಬೇಕು. ಬೆಂಗಳೂರು ಬೈಪಾಸ್ ರಸ್ತೆ, ರಾಯಚೂರು, ಕಲಬುರಗಿ ರಸ್ತೆಗಳಲ್ಲಿ ಕೂಡ ಅತಿಕ್ರಮಣದಿಂದ ಸಂಚಾರಕ್ಕೆ ತೊಂದರೆಯಾಗಿದೆ. ಸದರಿ ರಸ್ತೆಗಳನ್ನು ಕೂಡ ವಿಸ್ತರಣೆಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದರು. ಸಹಾಯಕ ಆಯುಕ್ತ ಅವಿನಾಶ ಶಿಂಧೆ, ಪುರಸಭೆ ಮುಖ್ಯಾಧಿಕಾರಿ ರಡ್ಡಿ ರಾಯನಗೌಡ, ಪಿಡಬ್ಲ್ಯುಡಿ ಜೆಇ ಲಕ್ಷ್ಮೀಕಾಂತ ಗುಂಟಿ, ಸಿಪಿಐ ಸಂಜೀವ ಕುಮಾರ ಇದ್ದರು.