ಜಿಲ್ಲೆ

ರಸ್ತೆ ಒತ್ತುವರಿ ತೆರವಿಗೆ ಅಡ್ಡಿ

ಎನ್.ವೆಂಕಟೇಶ್

ಮುಖ್ಯಮಂತ್ರಿ, ಜಿಲ್ಲಾಧಿಕಾರಿ ಆದೇಶಕ್ಕೂ ಬೆಲೆಯಿಲ್ಲ ಅಧಿಕಾರಿಗಳ ಕರ್ತವ್ಯಕ್ಕೆ ತೊಂದರೆ

ಬಾಗೇಪಲ್ಲಿ: ನಕಾಶೆಯಲ್ಲಿರುವ ಬಂಡಿ ದಾರಿಯನ್ನು ಗುರುತಿಸಿ ರೈತರ ಜಮೀನುಗಳಿಗೆ ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ಮುಖ್ಯಮಂತ್ರಿಗಳು, ಕಂದಾಯ ಇಲಾಖೆ ವಿಶೇಷ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಆದೇಶವಿದ್ದರೂ ರಸ್ತೆ ಒತ್ತುವರಿ ತೆರವಿಗೆ ಕೆಲವರು ಅಡ್ಡಿಪಡಿಸಿರುವ ಘಟನೆ ಹೊಸಹುಡ್ಯ ಗ್ರಾಮದಲ್ಲಿ ಗುರುವಾರ ನಡೆದಿದೆ.

ಬಾಗೇಪಲ್ಲಿ ತಾಲೂಕಿನ ಕಸಬಾ ಹೋಬಳಿಯ ಹೊಸಹುಡ್ಯ ಗ್ರಾಮದಿಂದ ಬೆಂಗಳೂರು - ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ಕ್ಕೆ ಸಂಪರ್ಕ ಕಲ್ಪಿಸುವ ನಕಾಶೆ (ಬಂಡಿದಾರಿ) ರಸ್ತೆ ಹಾದು ಹೋಗಿದೆ. ಹೊಸಹುಡ್ಯ ಗ್ರಾಮದ ಹಲವು ಸರ್ವೇ ನಂಬರ್‌ಗಳಲ್ಲಿ ಹಾದು ಹೋಗಿರುವ ಈ ರಸ್ತೆಯನ್ನು ಕೆಲ ಬಲಾಢ್ಯರು ಒತ್ತುವರಿ ಮಾಡಿಕೊಂಡು ಸರಕು, ಗೊಬ್ಬರ, ತರಕಾರಿ ಸಾಗಿಸುವ ಟ್ರ್ಯಾಕ್ಟರ್, ಟೆಂಪೋ, ಆಟೋ ವಾಹನಗಳ ಸಂಚಾರಕ್ಕೆ ನಿತ್ಯ ಅಡ್ಡಿಯುಂಟು ಮಾಡುತ್ತಿದ್ದಾರೆ. ಇದರಿಂದ ಬೇಸತ್ತ ರೈತರು ಬಂಡಿದಾರಿಯನ್ನು ಅಳತೆ ಮಾಡಿ ರಸ್ತೆ ಒತ್ತುವರಿ ತೆರವುಗೊಳಿಸುವಂತೆ ಬಾಗೇಪಲ್ಲಿ ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ನಂತರ ತಾಲೂಕು ಕಚೇರಿ ಅಧಿಕಾರಿಗಳು, ಸರ್ವೇಯರ್ ಸಮೇತ ಹೊಸಹುಡ್ಯ ಗ್ರಾಮಕ್ಕೆ ಭೇಟಿ ನೀಡಿ ನಕಾಶೆ ರಸ್ತೆ ಒತ್ತುವರಿ ತೆರವಿಗೆ ಮುಂದಾದಾಗ ಕೆಲವರು ಗಲಾಟೆ ಮಾಡಿ ಹೆದರಿಸಿ ಸರ್ವೇ ಕಾರ್ಯಕ್ಕೆ ಅಡ್ಡಿಪಡಿಸಿ ಅಧಿಕಾರಿಗಳನ್ನು ವಾಪಸ್ ಕಳಿಸಿದ್ದರು.

ನಂತರ ನಕಾಶೆ ರಸ್ತೆ ಒತ್ತುವರಿ ತೆರವಿಗೆ ಆಗ್ರಹಿಸಿ 2024ರ ಸೆ.20ರಂದು ಮುಖ್ಯಮಂತ್ರಿಗಳಿಗೆ, ಕಂದಾಯ ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ ರೈತರು ದಾಖಲೆ ಸಮೇತ ಮೇಲ್ಮನವಿ ಸಲ್ಲಿಸಿದ್ದರು. ದಾಖಲೆ ಪರಿಶೀಲಿಸಿದ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಎಂ.ಶಾಂತಪ್ಪ ಅವರು ರಸ್ತೆ ಅಳತೆ ಮಾಡಿ ಒತ್ತುವರಿ ತೆರವುಗೊಳಿಸಿ ವರದಿ ಸಲ್ಲಿಸುವಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದು, ಜಿಲ್ಲಾಧಿಕಾರಿಗಳ ಆದೇಶದಂತೆ ಒತ್ತುವರಿ ತೆರವಿಗೆ ತಹಸೀಲ್ದಾರ್ ಮನೀಷಾ ಎನ್. ಪತ್ರಿ ಮಾರ್ಗದರ್ಶನದಲ್ಲಿ ಕಂದಾಯ ಇಲಾಖೆ, ಭೂ ಮಾಪನಾ ಮತ್ತು ಪೊಲೀಸ್ ಇಲಾಖೆ ಗುರುವಾರ ಕಾರ್ಯಾಚರಣೆ ಕೈಗೊಂಡಿದ್ದು, ಸರ್ವೇ ಕಾರ್ಯ ಮುಗಿದು ಬಂಡಿ ದಾರಿ ಸಂಪರ್ಕ ಕಲ್ಪಿಸುವ ಸಮಯದಲ್ಲಿ ಒತ್ತುವರಿದಾರರು ವಿರೋಧ ವ್ಯಕ್ತಪಡಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ರಾಜಸ್ವ ನಿರೀಕ್ಷಕ ಪ್ರಶಾಂತ್, ಗ್ರಾಮ ಲೆಕ್ಕಾಧಿಕಾರಿ ಜಯರಾಂ, ತಾಲೂಕು ಸರ್ವೇಯರ್ ನರಸಿಂಹಮೂರ್ತಿ, ಪೊಲೀಸ್ ಪೇದೆಗಳಾದ ಗರೀಶ್, ಹರೀಶ್, ಗ್ರಾಮಸ್ಥರಾದ ಎ.ರಮೇಶ್, ವೆಂಕಟೇಶ್, ಸತೀಶ್, ಸೂರ್ಯನಾರಾಯಣರೆಡ್ಡಿ, ಪುರುಷೋತ್ತಮ್, ನಾಗರಾಜು, ಎಚ್.ಎ.ರಾಮಲಿಂಗಪ್ಪ, ರಫೀಕ್, ನಜೀರ್ ಸಾಬ್, ನಂದೀಶ್, ನಾರಾಯಣಸ್ವಾಮಿ ಮತ್ತಿತರರು ಇದ್ದರು.

"ರಸ್ತೆ ಒತ್ತುವರಿ ತೆರವುಗೊಳಿಸುವಂತೆ ಮುಖ್ಯಮಂತ್ರಿಗಳು, ಕಂದಾಯ ಸಚಿವರು, ಜಿಲ್ಲಾಧಿಕಾರಿಗಳು ಸೂಚಿಸಿದ್ದರೂ ಸ್ಥಳೀಯ ಅಧಿಕಾರಿಗಳಿಗೆ ಒತ್ತುವರಿ ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಜಮೀನುಗಳಿಗೆ ದಾರಿ ಇಲ್ಲದಂತಾಗಿದೆ. ರಸಗೊಬ್ಬರ, ತರಕಾರಿ ಸಾಗಿಸುವ ಟ್ರ್ಯಾಕ್ಟರ್, ಟೆಂಪೋ, ಆಟೋ ಹೋಗಿ ಬರಲು ಸಾಧ್ಯವಾಗುತ್ತಿಲ್ಲ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಬಂಡಿ ದಾರಿ ಒತ್ತುವರಿ ತೆರವುಗೊಳಿಸಿ ಅನುಕೂಲ ಮಾಡಿಕೊಡಬೇಕಿದೆ." - ಸತೀಶ್, ಹೊಸಹುಡ್ಯ

ಬಿಪಿಎಲ್ 27 ನ್ಯೂಸ್ ಪೋಟೊ 1 ಬಾಗೇಪಲ್ಲಿ ತಾಲೂಕಿನ ಹೊಸಹುಡ್ಯ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿಗೆ ಸರ್ವೇ ನಡೆಸಿ ನಕಾಶೆಯಂತೆ ಬಂಡಿ ದಾರಿಯ ಸಂಪರ್ಕ ಕಲ್ಪಿಸುತ್ತಿರುವುದು.

ಬಿಪಿಎಲ್ 27 ನ್ಯೂಸ್ ಪೋಟೊ 2

ರಾಷ್ಟ್ರೀಯ ಹೆದ್ದಾರಿ ಬಳಿ ಬಂಡಿ ದಾರಿಯ ಸಂಪರ್ಕಕ್ಕೆ ಅಡ್ಡಿಪಡಿಸುತ್ತಿರುವ ಒತ್ತುವರಿದಾರರು.