ಜಿಲ್ಲೆ

ಪ್ರಸಿದ್ಧ ಪ್ರವಾಸಿ ತಾಣವಾಗಲಿದೆ ಹಲ್ಲೇಗೆರೆ: ಶಾಸಕ ರವಿಕುಮಾರ್ ಗಣಿಗ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಅಂತಾರಾಷ್ಟ್ರೀಯ ಧ್ಯಾನ ಕೇಂದ್ರದಿಂದಾಗಿ ಹಲ್ಲೇಗೆರೆ ಗ್ರಾಮ ಮುಂದಿನ ದಿನಗಳಲ್ಲಿ ದೇಶದಲ್ಲಿಯೇ ಪ್ರಖ್ಯಾತ ಪ್ರವಾಸಿ ತಾಣವಾಗಲಿದೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.

ತಾಲೂಕಿನ ಹಲ್ಲೇಗೆರೆ ಗ್ರಾಮದ ಹೊರವಲಯದಲ್ಲಿ 20 ಕೋಟಿ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಹಲ್ಲೇಗೆರೆ ಸುತ್ತಮುತ್ತ 100 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಇಷ್ಟೊಂದು ಅನುದಾನ ಕೊಡಲಾಗುತ್ತಿದೆ ಎಂದರೆ ಸ್ಥಳೀಯರು ಅರ್ಥ ಮಾಡಿಕೊಳ್ಳಬೇಕು. ಇತಿಹಾಸದಲ್ಲಿ ಒಂದು ಹಳ್ಳಿಗೆ 20 ಕೋಟಿ ರೂ ಅನುದಾನ ಬಿಡುಗಡೆಯಾಗಿರುವ ಉದಾಹರಣೆ ಕಡಿಮೆ ಎಂದರು.

ಹಲ್ಲೇಗೆರೆ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಸ್ಥಳೀಯರು ಸಹಕರಿಸಬೇಕು. ಮುಂದಿನ ದಿನದಲ್ಲಿ ವಿದೇಶಿಗಳು ಬರುತ್ತಾರೆ. ಮಾತ್ರವಲ್ಲದೆ ಅಕ್ಕಪಕ್ಕದ ಜಮೀನಿಗೆ ಚಿನ್ನದ ದರ ಬರುತ್ತದೆ. ಇಲ್ಲಿ ನನ್ನ ಜಾಗವಿಲ್ಲ. ಆದರೆ ರಸ್ತೆ ಮಾಡಬೇಕೆನ್ನುವ ಜವಾಬ್ದಾರಿ ಇದೆ. 10 ಅಡಿ ಜಾಗ ಬಿಟ್ಟುಕೊಟ್ಟರೆ ಗ್ರಾಮದ ಅಭಿವೃದ್ಧಿಯಾಗಲಿದೆ. ನಿಮ್ಮ ಮಕ್ಕಳಿಗೂ ಅನುಕೂಲವಾಗಲಿದೆ. ಆದ್ದರಿಂದ ರಸ್ತೆ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು. ಗುತ್ತಿಗೆದಾರರಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಹಲ್ಲೇಗೆರೆ ಡಾ.ಮೂರ್ತಿ ಅವರ ಭೂದೇವಿ ಟ್ರಸ್ಟ್ 14ಕ್ಕೂ ಹೆಚ್ಚು ದೇಶದಲ್ಲಿ ಸದಸತ್ವ ಹೊಂದಿದೆ. ಇನ್ನು ಹಲವು ವಿಶೇಷತೆಯುಳ್ಳ ಅಂತಾರಾಷ್ಟ್ರೀಯ ಧ್ಯಾನ ಕೇಂದ್ರವನ್ನು ತೆರೆಯುತ್ತಿದ್ದಾರೆ. ಇದೊಂದು ವಿಶೇಷ ತಾಣವಾಗುವುದರಲ್ಲಿ ಅನುಮಾನವಿಲ್ಲ. ಈ ಹಿನ್ನೆಲೆಯಲ್ಲಿ ಶಾಸಕ ರವಿಕುಮಾರ್ ಗಣಿಗ ಅವರು ರಸ್ತೆ ಅಭಿವೃದ್ಧಿಗೆ 20 ಕೋಟಿ ರೂ ಮಂಜೂರು ಮಾಡಿಸಿದ್ದಾರೆ. ಇದಲ್ಲದೆ ಇನ್ನು 25 ಕೋಟಿ ರೂ ವೆಚ್ಚದಲ್ಲಿ ಮುಂದುವರೆದ ರಸ್ತೆ ಹಾಗೂ ಅಭಿವೃದ್ಧಿ ಕಾಮಗಾರಿ ಮಾಡಲಾಗುವುದು ಎಂದರು.

ಹಲ್ಲೇಗೆರೆ ಗ್ರಾಮದಲ್ಲಿ ವಿಶಾಲವಾದ ರಸ್ತೆ ಆಗಬೇಕಿದೆ. ಕೆಲವೇ ದಿನದಲ್ಲಿ ಅಂತಾರಾಷ್ಟ್ರೀಯ ಧ್ಯಾನ ಕೇಂದ್ರ ಉದ್ಘಾಟನೆಗೊಳ್ಳಲಿದೆ. ಅಂದು ದೇಶದ ಹಲವು ಗಣ್ಯಾತಿಗಣ್ಯರು ಸೇರಿದಂತೆ ವಿದೇಶಿಗಳು ಪಾಲ್ಗೊಳ್ಳಲಿದ್ದಾರೆ. ಈ ನಿಟ್ಟಿನಲ್ಲಿ ಶಾಸಕರಿಗೆ ಗ್ರಾಮಸ್ಥರ ಸಹಕಾರ ನೀಡಬೇಕು ಎಂದು ಹೇಳಿದರು.

ಮಂಡ್ಯ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಹಲ್ಲೇಗೆರೆ ಡಾ.ಮೂರ್ತಿ, ಅಭಿನವ ಭಾರತಿ ವಿದ್ಯಾಸಂಸ್ಥೆ ಪ್ರಧಾನ ಕಾರ್ಯದರ್ಶಿ ಶಿವಮೂರ್ತಿ ಕೀಲಾರ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಕಂಬದಹಳ್ಳಿ ಪುಟ್ಟಸ್ವಾಮಿ, ತಾಪಂ ಮಾಜಿ ಸದಸ್ಯ ಚಿಕ್ಕಬಳ್ಳಿ ಕೃಷ್ಣ, ಕಾವೇರಿ ನೀರಾವರಿ ನಿಗಮದ ಇಇ ನಂಜುಂಡೇಗೌಡ, ಎಇಇಗಳಾದ ದೀಪಕ್, ಅಜಯ್‌ಕುಮಾರ್ ಇತರರಿದ್ದರು.