ಮಂಡ್ಯ: ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.
ತಾಲೂಕಿನ ವಿವಿಧೆಡೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಹಂತ ಹಂತವಾಗಿ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ತಾಲೂಕು ಸೇರಿದಂತೆ ನಗರ ಪ್ರದೇಶದಲ್ಲಿ ರಸ್ತೆಗಳು ಗುಂಡಿ ಬಿದ್ದಿದ್ದು, ಸಾರ್ವಜನಿಕರ ಸಂಚಾರಕ್ಕೆ ತುಂಬಾ ತೊಂದರೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರು ರಸ್ತೆ ಸರಿಪಡಿಸಲು ಮನವಿ ಮಾಡಿದ್ದರು. ಅದರಂತೆ 2 ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದರು.
ಮಂಡ್ಯ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಮಾಜಿ ಸದಸ್ಯ ಚಿಕ್ಕಬಳ್ಳಿ ಕೃಷ್ಣ, ಮೊಳೆ ಗ್ರಾಮದ ಕಾಂಗ್ರೆಸ್ ಮುಖಂಡರಾದ ರಾಮಕೃಷ್ಣ, ಮಂಚಯ್ಯ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಿದ್ದಾರಾಜು, ನವಿಲೆ ಸಿದ್ದಯ್ಯ, ಶಿವರಾಜ್ ಇತರರಿದ್ದರು.
ಮಂಡ್ಯ ನಗರದ ಹಳೇ ಎಂ.ಸಿ ರಸ್ತೆಯಿಂದ ಎ ಆ್ಯಂಡ್ ಎ ಕನ್ವೆನ್ಷನ್ ಹಾಲ್ವರೆಗೆ ರಸ್ತೆ ಹಾಗೂ ಹಲ್ಲೇಗೆರೆ ಗ್ರಾಮದ ಮುಖ್ಯರಸ್ತೆಯಿಂದ ರಾಯಶೆಟ್ಟಿಪುರ ಮಾರ್ಗವಾಗಿ ಮೊಳೆ ಹಾಗೂ ತಂದನಾಯ್ಕನದೊಡ್ಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಯಿತು. ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಪ್ರಕಾಶ್, ಸದಸ್ಯರಾದ ಶ್ರೀಧರ್, ಪೂರ್ಣಿಮಾ, ಅಭಿಲಾಷ್, ಹರೀಶ್ ಇತರರಿದ್ದರು.