ಸಿದ್ದಾಪುರ: ಕೊಣನೂರು ಮಾಕುಟ್ಟ ರಾಜ್ಯ ಹೆದ್ದಾರಿಯ ಕಾಮಗಾರಿಗೆ ನೆಲ್ಲಿಹುದಿಕೇರಿಯಲ್ಲಿ ಶಾಸಕ ಮಂತರ್ ಗೌಡ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ಸೇತುವೆಯಿಂದ ಅತ್ತಿಮಂಗಲವರೆಗೆ ಕಾಂಕ್ರೀಟ್ ರಸ್ತೆ ಹಾಗೂ ಅತ್ತಿಮಂಗಲದಿಂದ ಒಂಟಿಯಂಗಡಿವರೆಗೆ ಡಾಂಬರೀಕರಣ ಕಾಮಗಾರಿ ಮಾಡಲಾಗುತ್ತಿದೆ. ಶೀಘ್ರದಲ್ಲೇ ಹಾಗೂ ಗುಣಮಟ್ಟದಿಂದ ಕಾಮಗಾರಿ ಮಾಡುವಂತೆ ಗುತ್ತಿಗೆದಾರ ಹಾಗೂ ಇಂಜಿನಿಯರ್‌ಗೆ ಖಡಕ್ ಸೂಚನೆ ನೀಡಿದರು.
ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಶಾಸಕರು ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರುವ ಮೂಲಕ ವಿರೋಧ ಪಕ್ಷದವರ ಟೀಕೆಗೆ ಆಸ್ಪದ ಇಲ್ಲದ ರೀತಿ ಕೆಲಸ ಮಾಡುತ್ತಿದ್ದಾರೆ. ಕಾರ್ಯಕರ್ತರು, ಜನಪ್ರತಿನಿಧಿಗಳು ಸ್ಥಳದಲ್ಲಿಯೇ ಇದ್ದು ಗುಣಮಟ್ಟದ ಕಾಮಗಾರಿ ಮಾಡಿಸಬೇಕು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಚ್.ಎನ್.ಧನಲಕ್ಷ್ಮೀ, ಜಿಲ್ಲಾ ಕೆಡಿಪಿ ಸದಸ್ಯೆ ಸುನಿತಾ ಮಂಜುನಾಥ್, ಪಿಸಿ ಹಸೈನಾರ್ ಹಾಜಿ, ಏ.ಕೆ.ಹಕೀಮ್, ಡಿಸಿಸಿ ಸದಸ್ಯೆ ರಿಯಾ ಬಷೀರ್, ಸಫಿಯಾ ಮಹಮ್ಮದ್, ಕುಶಾಲನಗರ ತಾಲೂಕ ಕೆಡಿಪಿ ಸದಸ್ಯ ಹನೀಫ್, ಕೆಪಿಸಿಸಿ ಸದಸ್ಯ ಜೋಸೆಫ್ ಶ್ಯಾಮ್, ಪಿ.ಕೆ.ಮುಸ್ತಫಾ ಇತರರು ಇದ್ದರು.