ಮದ್ದೂರು ತಾಲೂಕಿನ ಮುಳ್ಳಹಳ್ಳಿ ಗ್ರಾಮದಲ್ಲಿ 5 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಎಂ.ಉದಯ್ ಭೂಮಿಪೂಜೆ ನೆರವೇರಿಸಿದರು. ಪಿ.ಸಂದರ್ಶ, ಬೋರೇಗೌಡ, ಮಾರಸಿಂಗನಹಳ್ಳಿ ರಾಮಚಂದ್ರು, ಗೋವಿಂದು ಇದ್ದರು. 
ಜಿಲ್ಲೆ

ಬಜೆಟ್‌ನಲ್ಲಿ ಮದ್ದೂರು ಕ್ಷೇತ್ರ ಅಗತ್ಯ ಅನುದಾನ

ನಾಗೇಶ ಎಸ್

ಮದ್ದೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಮಂಡ್ಯ ಜಿಲ್ಲೆಗೆ ಅದರಲ್ಲೂ ಮದ್ದೂರು ಕ್ಷೇತ್ರಕ್ಕೆ ಅಗತ್ಯ ಅನುದಾನ ಮಂಜೂರಾಗುವ ಪೂರ್ಣ ವಿಶ್ವಾಸವಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ತಾಲೂಕಿನ ನಿಲುವಾಗಿಲು ಗ್ರಾ.ಪಂ. ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರ ಜಮೀನುಗಳಿಗೆ ಸಂಪರ್ಕಿಸುವ ರಸ್ತೆಗಳು ಮತ್ತು ಸೀಳು ನಾಲೆಗಳ ಆಧುನೀಕರಣ ಸಂಬಂಧ 5 ಕೋಟಿ ರೂ. ಅನುದಾನದ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ನಿಲುವಾಗಿಲು, ಮಾರಸಿಂಗನಹಳ್ಳಿ, ನಾಗನದೊಡ್ಡಿ, ಮುಳ್ಳಳ್ಳಿ, ಕುರಿದೊಡ್ಡಿ ಮತ್ತು ಸೀನಪ್ಪನದೊಡ್ಡಿ ವ್ಯಾಪ್ತಿಯ ನಾಲೆಗಳು ಮತ್ತು ನಾಲಾ ಸಂಪರ್ಕ ರಸ್ತೆಗಳು ಬಹುದಿನಗಳಿಂದ ದುರಸ್ತಿಯಾಗದ ಮತ್ತು ರೈತರಿಗೆ ಆಗುತ್ತಿರುವ ಅನನುಕೂಲಗಳ ಕುರಿತಾಗಿ ಸ್ಥಳೀಯರ ಕೋರಿಕೆ ಮೇರೆಗೆ ಅಗತ್ಯ ಕಾಮಗಾರಿಗೆ ಮುಂದಾಗಿರುವುದಾಗಿ ತಿಳಿಸಿದರು.

ಬೆಸಗರಹಳ್ಳಿ ಮತ್ತು ಭಾರತೀನಗರ ಗ್ರಾ.ಪಂ.ಗಳನ್ನು ಮೇಲ್ದರ್ಜೆಗೇರಿಸುವ ಕುರಿತಾಗಿ ಸಲ್ಲಿಕೆಯಾಗಿರುವ ಮನವಿ ಮೇರೆಗೆ ಪ್ರಥಮ ಆದ್ಯತೆಯಾಗಿ ಭಾರತೀನಗರವನ್ನು ಪರಿಗಣಿಸಲು ಯೋಜಿಸಿದ್ದು, ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿರುವುದಾಗಿ ಹೇಳಿದರು.

ರಾಜ್ಯದ ಉಪ ನೋಂದಣಿ ಅಧಿಕಾರಿಗಳು ವರ್ಗಾವಣೆ ನೀತಿ ಮತ್ತು ಇತರ ಯೋಜನೆಗಳನ್ನು ವಿರೋಧಿಸಿ ಮುಷ್ಕರಕ್ಕೆ ಮುಂದಾಗಿರುವ ಕ್ರಮವನ್ನು ಖಂಡಿಸಿದ ಶಾಸಕ ಕೆ.ಎಂ.ಉದಯ್, ಎಲ್ಲ ನೋಂದಣಿ ಅಧಿಕಾರಿಗಳಿಗೂ ದೇವನಹಳ್ಳಿ, ಕೆಂಗೇರಿ, ಗಾಂಧಿನಗರ ಕಚೇರಿಗಳೇ ಬೇಕಿದ್ದು ಗ್ರಾಮೀಣ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವ ಪರಿವೇ ಇಲ್ಲ. ಕೆಲ ಅಧಿಕಾರಿಗಳು ರಾಜಧಾನಿಯಲ್ಲೇ ನೆಲೆನಿಂತಿದ್ದು ಗ್ರಾಮೀಣ ಭಾಗಕ್ಕೆ ಅವರ ಸೇವೆಯನ್ನು ಕೊಂಡೊಯ್ಯುವ ದೃಷ್ಟಿಯಿಂದ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಮಾರ್ಪಾಡು ಮಾಡಿದ್ದು, ಇದರನ್ವಯ ಕರ್ತವ್ಯ ನಿರ್ವಹಿಸಬೇಕಲ್ಲವೇ ಎಂದರು.

ಕೆ.ಆರ್.ಎಸ್ ಅಣೆಕಟ್ಟೆಯಿಂದ ವಿಶ್ವೇಶ್ವರಯ್ಯ ನಾಲಾ ಕೊನೆಯ ಭಾಗದ ಕೆರೆಗಳು ಮತ್ತು ಕುಡಿಯುವ ನೀರು ಉದ್ದೇಶದಿಂದ ಎಕ್ಸ್‌ಪ್ರೆಸ್ ಕೆನಲ್ ಅಳವಡಿಸುವ ಕುರಿತು ಸರ್ಕಾರದ ಮುಂದೆ ಪ್ರಸ್ತಾವನೆ ಇದ್ದು, ಇದು ಅನುಷ್ಠಾನಗೊಂಡಲ್ಲಿ ಮದ್ದೂರು, ಚನ್ನಪಟ್ಟಣ, ಕುಣಿಗಲ್ ವ್ಯಾಪ್ತಿಗೆ ಅನುಕೂಲವಾಗುವ ವಿಶ್ವಾಸ ವ್ಯಕ್ತಪಡಿಸಿದರು.

ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಗ್ರಾ.ಪಂ.ಸದಸ್ಯ ಬೋರೇಗೌಡ, ಮುಖಂಡರಾದ ಅಪ್ಪಸ್ವಾಮಿ, ಕುಮಾರ್, ಕೃಷ್ಣಪ್ಪ, ಗೋವಿಂದು, ನಂಜುಂಡ, ವೆಂಕಟರಾಮು, ಮಾರಸಿಂಗನಹಳ್ಳಿ ರಾಮಚಂದ್ರು, ಗೋಪಿ, ಶರತ್ ಇತರರಿದ್ದರು.