Road development work costing Rs. 4.90 crore started in K. Mallasandra  
ಜಿಲ್ಲೆ

ಸಂಪರ್ಕ ರಸ್ತೆಗಳಿಂದ ಸ್ಥಳೀಯ ಅಭಿವೃದ್ಧಿ ಸಾಧ್ಯ

ಶಿವರಾಜ.ಎಂ

ಶಾಸಕ ಶರತ್‌ಬಚ್ಚೇಗೌಡ ಹೇಳಿಕೆ

ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಒಂದು ಪ್ರದೇಶ ವಾಣೀಜ್ಯ, ವ್ಯಾಪಾರ, ವ್ಯವಹಾರಗಳಲ್ಲಿ ಅಭಿವೃದ್ಧಿ ಹೊಂದಬೇಕಾದರೆ ಸಂಪರ್ಕ ರಸ್ತೆಗಳು ಉತ್ತಮವಾಗಿರಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ತಾಲೂಕಿನ ಕಣ್ಣೂರಹಳ್ಳಿ ಹಾಗೂ ಕೆ.ಮಲ್ಲಸಂದ್ರದಲ್ಲಿ 4.90 ಕೋಟಿ ರೂ.ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನ ಕಸಬಾ ಹೋಬಳಿಯ ರಾಜ್ಯ ಹೆದ್ದಾರಿ-4ರ ಕಟ್ಟಿಗೇನಹಳ್ಳಿ ಮಾರ್ಗದ ಕಣ್ಣೂರಹಳ್ಳಿ, ಚೀಮಂಡಹಳ್ಳಿ, ಜಿನ್ನಾಗರ, ವಾಗಟ ಗ್ರಾಮದಿಂದ ವಣಚನಹಳ್ಳಿವರೆಗಿನ 8 ಕಿ.ಮೀ. ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ-207 ರಿಂದ ನಡವತ್ತಿ, ಬಿಸನಹಳ್ಳಿ, ಪರಮನಹಳ್ಳಿವರೆಗೆ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ 5054 ಜಿಲ್ಲಾ ಮತ್ತು ಇತರೆ ರಸ್ತೆಗಳ ಸುಧಾರಣೆ ಯೋಜನೆಯಡಿ ಕಾಮಗಾರಿಗೆ ಚಾಲನೆ ನೀಡಿಲಾಗಿದೆ ಎಂದರು.
ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ತಯಾರಿಸಿಕೊಂಡಿರುವ ನೀಲನಕ್ಷೆ ಅನುಷ್ಠಾನಕ್ಕೆ ಹೆಜ್ಜೆಯಿಟ್ಟಿದ್ದು, ಗುಂಡಿಗಳಿಂದ ನಿತ್ಯ ಸಮಸ್ಯೆ ಎದುರಿಸುತ್ತಿರುವ ಈ ರಾಜ್ಯ ಹೆದ್ದಾರಿ 4ರ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿದ್ದು, ಶೀಘ್ರದಲ್ಲೇ ರಸ್ತೆ ಅಭಿವೃದ್ಧಿಯಾಗಲಿದೆ ಎಂದರು.
21 ಕೋಟಿ ರೂ.ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ-207ರ ಹೊಸಕೋಟೆ ಸರ್ಜಾಪುರ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. 104 ಕೋಟಿ ರೂ.ವೆಚ್ಚದಲ್ಲಿ ಕೊರಳೂರು ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಅನುಮತಿ ಪಡೆಯಲಾಗಿದೆ. ಕೆಸಿ ವ್ಯಾಲಿ ಪೈಪ್‌ಲೈನ್ ಮಾರ್ಗ ಬದಲಾವಣೆಗೆ ಅಗತ್ಯವಾಗಿದ್ದ 10 ಕೋಟಿ ರೂ.ವನ್ನು ರಾಜ್ಯ ಸರ್ಕಾರ ಭರಿಸುವ ನಿರ್ಣಯ ಕೈಗೊಂಡಿದ್ದು, ಮೇಲ್ಸೇತುವೆ ಕಾರ್ಯವೂ ಶೀಘ್ರ ಶುರುವಾಗಲಿದೆ ಎಂದರು.
ಹೊಸಕೋಟೆ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಾರಾಯಣ ಗೌಡ, ಗ್ರಾಪಂ ಸದಸ್ಯೆ ಶೋಭಾ ಸಂತೋಷ್ ಕುಮಾರ್, ಮಂಜುನಾಥ್, ಮುಖಂಡರಾದ ಕೆ.ಮಲ್ಲಸಂದ್ರ ಶೇಷಪ್ಪ, ಸಮೇತನಹಳ್ಳಿ ಸೊಣ್ಣಪ್ಪ, ರಮೇಶ್, ವೆಂಕಟೇಶ್ ಇದ್ದರು.