ಬಂಡಳ್ಳಿ - ಹನೂರು ಮಾರ್ಗದ ಮಣಗಳ್ಳಿ ಬಳಿಯ ರಸ್ತೆ ಬದಿಯಲ್ಲಿ ಕಾಮಗಾರಿ ನಡೆಯುತ್ತಿರುವುದು. 
ಜಿಲ್ಲೆ

ರಸ್ತೆ ಅಭಿವೃದ್ಧಿಗೆ ಚಾಲನೆ, ಗ್ರಾಮಸ್ಥರಲ್ಲಿ ಸಂತಸ

ನಾಗೇಶ ಎಸ್

ಹನೂರು: ಹಲವು ವರ್ಷಗಳ ಜನರ ಬೇಡಿಕೆಯ ಕನಸು ಹನೂರು-ಬಂಡಳ್ಳಿ ಮಾರ್ಗದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕಾಯಕಲ್ಪ ಕೂಡಿ ಬಂದಿದ್ದು, ಕಳೆದೆರಡು ದಿನಗಳಿಂದ ಕಾಮಗಾರಿ ಆರಂಭವಾಗಿದೆ. ಇದರಿಂದ ಈ ಮಾರ್ಗದ ಜನತೆ ನಿಟ್ಟುಸಿರು ಬಿಟ್ಟಂತಾಗಿದೆ.

ಹನೂರಿನಿಂದ ಬಂಡಳ್ಳಿ ಗ್ರಾಮದವರೆಗೆ 10 ಕಿ.ಮೀ ಅಂತರವನ್ನು ಹೊಂದಿರುವ ಈ ಮಾರ್ಗದ ರಸ್ತೆಯು ಗಣೇಶಪುರ, ಮಣಗಳ್ಳಿ, ಬಂಡಳ್ಳಿ, ಅಲಗಾಪುರ, ಶಾಗ್ಯ, ಗಾಣಿಗಮಂಗಲ, ಈ ಭಾಗದ ಇನ್ನಿತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಆದರೆ ಹಲವು ವರ್ಷಗಳಿಂದ ಈ ರಸ್ತೆಯು ಸಂಪೂರ್ಣ ಹದಗೆಟ್ಟಿತ್ತು. ಬಹುತೇಕ ಕಡೆಗಳಲ್ಲಿ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದರೆ, ಇನ್ನು ಕೆಲವು ಕಡೆಗಳಲ್ಲಿ ಮಣ್ಣಿನ ರಸ್ತೆಯಾಗಿ ಮಾರ್ಪಟ್ಟಿತ್ತು.

ಮಳೆಗಾಲದ ವೇಳೆ ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸುವುದೇ ದುಸ್ಸಾಹಸವಾಗಿತ್ತು. ಹದಗೆಟ್ಟ ರಸ್ತೆಯಿಂದಾಗಿ ಈ ಮಾರ್ಗದ ಕೆಲವರು ಚಿಂಚಳ್ಳಿ, ಎಡಳ್ಳಿದೊಡ್ಡಿ ಗ್ರಾಮದ ಮೂಲಕ ಹನೂರಿಗೆ ಸಂಚರಿಸುತ್ತಿದ್ದರು. ಇದರಿಂದ ವಾಹನ ಸವಾರರು ಸಂಚರಿಸಲು ನರಕಯಾತನೆಯನ್ನು ಅನುಭವಿಸುವಂತಾಗಿತ್ತು. ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಈ ಭಾಗದ ಜನರು ಹಲವು ವರ್ಷಗಳಿಂದಲೂ ಒತ್ತಾಯಿಸುತ್ತಲೇ ಇದ್ದರು. ಆದರೆ ಸಾಧ್ಯವಾಗಿರಲಿಲ್ಲ.

ಕಳೆದ 2 ವರ್ಷದಿಂದ ಈ ರಸ್ತೆಯು ಸಂಪೂರ್ಣ ಹಾಳಾಗಿದ್ದು, ವಾಹನಗಳು ರಸ್ತೆಯನ್ನೇ ಬಿಟ್ಟು ಬದಿಯಲ್ಲಿ ಸಂಚರಿಸುವಂತಾಗಿತ್ತು. ಹದಗೆಟ್ಟ ರಸ್ತೆಯಿಂದ ಅಪಘಾತಗಳಲ್ಲಿ ಸಾವು-ನೋವು ಸಂಭವಿಸಿತ್ತು. ಜತೆಗೆ ಮಾರ್ಗ ಮಧ್ಯೆಯೇ ತುರ್ತು ವಾಹನದಲ್ಲಿ ಹೆರಿಗೆಯಾದ ಘಟನೆಗಳು ಜರುಗಿತ್ತು. ಬಸ್‌ಗಳು ಆಗಾಗ್ಗೆ ಕೆಟ್ಟು ನಿಲ್ಲುವುದು ಸಾಮಾನ್ಯವಾಗಿತ್ತು. ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಈ ಭಾಗದ ಜನರು ಹಲವು ಬಾರಿ ಸಾಮಾಜಿಕ ಜಾಲತಾಣದಲ್ಲಿ ರಸ್ತೆಯ ಅವ್ಯವಸ್ಥೆಯ ದೃಶ್ಯವನ್ನು ಹರಿಬಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದರು. ಜತೆಗೆ ನಿರ್ಮಾಣವಾಗಿದ್ದ ಗುಂಡಿಗಳಿಗೆ ಗ್ರಾಮಸ್ಥರೇ ತಮ್ಮ ಸ್ವಂತ ಹಣದಿಂದ ಮಣ್ಣು ಹಾಕಿಸುವುದರ ಮೂಲಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಾರ್ಯ ವೈಖರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಅಗತ್ಯ ಕ್ರಮವಹಿಸಿದ ಶಾಸಕ ಎಂ.ಆರ್.ಮಂಜುನಾಥ್ ಅವರು ಸರ್ಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ ಇತ್ತೀಚೆಗೆ 25 ಕೋಟಿ ರೂ. ವೆಚ್ಚದಲ್ಲಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಭೂಮಿಪೂಜೆ ನೆರವೇರಿಸಿದ್ದರು. ಈ ವೇಳೆ ಸಾರ್ವಜನಿಕರು ಅದರಲ್ಲೂ ಬಂಡಳ್ಳಿ ಮಾರ್ಗದಲ್ಲಿನ ಗ್ರಾಮಸ್ಥರಲ್ಲಿ ಸಂತಸ ವ್ಯಕ್ತವಾಗಿತ್ತು. ಶಾಸಕರ ಶ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದರು. ಇದೀಗ ಕಳೆದ 2 ದಿನಗಳಿಂದ ಬಂಡಳ್ಳಿ ಗ್ರಾಮದ ಮೂಲಕ ಕಾಮಗಾರಿ ಆರಂಭಿಸಿದ್ದು, ರಸ್ತೆ ಬದಿಯಲ್ಲಿನ ಗಿಡಗಂಟಿಗಳನ್ನು ತೆರವುಗೊಳಿಸಿ ಸಮತಟ್ಟು ಮಾಡಲಾಗುತ್ತಿದೆ. ಬಳಿಕ ರಸ್ತೆ ಅಭಿವೃದ್ಧಿಯ ಕಾಮಗಾರಿ ಕಾರ್ಯರೂಪಕ್ಕೆ ಬರಲಿದೆ. ಕಾಮಗಾರಿ ಆರಂಭವಾಗಿರುವುದರಿಂದ ಹಲವು ವರ್ಷಗಳಿಂದ ಸಂಚಾರದ ಯಾತನೆಯನ್ನು ಅನುಭವಿಸುತ್ತಿದ್ದ ಸವಾರರಲ್ಲಿ ಸಂತಸ ಮನೆ ಮಾಡಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಂಡು ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂಬ ಆಶಯವನ್ನು ಹೊಂದಿದ್ದಾರೆ.