ಚಿತ್ರದುರ್ಗ: ನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜನ್ನು ಅತ್ಯಾಧುನಿಕ ಮಾದರಿಯಲ್ಲಿ ಕರ್ನಾಟಕ ಗಣಿ ಮತ್ತು ಪರಿಸರ ಪುನರುತ್ಥಾನ ನಿಗಮದ ಅನುದಾನ ಬಳಸಿ 20 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಭರವಸೆ ನೀಡಿದರು.
ತರಾಸು ರಂಗಮಂದಿರದಲ್ಲಿ ಕಾಲೇಜಿನಿಂದ ಬುಧವಾರ ಹಮ್ಮಿಕೊಂಡಿದ್ದ ‘ಸ್ನೇಹ ಸಂಗಮ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 2.24 ಎಕರೆ ವಿಸ್ತೀರ್ಣದಲ್ಲಿ ಕಾಲೇಜು ನಿರ್ಮಿಸುವ ಸಂಬಂಧ ವಿಸ್ತೃತ ಯೋಜನೆ ತಯಾರಿಸಿ ಶೀಘ್ರವೇ ಭೂಮಿ ಪೂಜೆ ನೆರವೇರಿಸಲಾಗುವುದು. ಮುಂದಿನ 2 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ಗ್ರಾಮೀಣ ಹಾಗೂ ನಗರ ಪ್ರದೇಶದ ಬಡ ಮಕ್ಕಳು ಹೆಚ್ಚಿನ ಹಣ ನೀಡಿ ಖಾಸಗಿ ಕಾಲೇಜುಗಳಲ್ಲಿ ಸೀಟು ಪಡೆಯುವುದು ಕಷ್ಟಕರವಾಗುತ್ತಿದೆ. ಹೀಗಾಗಿ ಸರ್ಕಾರಿ ಮಹಿಳಾ ಕಾಲೇಜಿನ ಅಗತ್ಯವಿತ್ತು. ಇದನ್ನು ಮನಗಂಡು ಸ್ಥಾಪನೆಗೆ ತೀರ್ಮಾನಿಸಲಾಗಿದೆ ಎಂದರು.
ರಾಜ್ಯದಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಓದುತ್ತಿರುವ ಕಾಲೇಜು ಎಂಬ ಹೆಗ್ಗಳಿಕೆಗೆ ಚಿತ್ರದುರ್ಗದ ಮಹಿಳಾ ಪ್ರಥಮ ದರ್ಜೆ ಕಾಲೇಜು ಪಾತ್ರವಾಗಿದೆ. ಈ ವಿಚಾರ ನನಗೂ ಸಂತಸ ಉಂಟು ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಹಾಗೂ ಅದಿರು ಸಾಗಣೆಯಿಂದ ರಸ್ತೆ ಹಾಗೂ ಬೆಳೆಗಳು ಹಾಳಾಗುತ್ತಿವೆ. ಇದನ್ನು ತಡೆಗಟ್ಟಲು 250 ಕೋಟಿ ರೂ. ವೆಚ್ಚದಲ್ಲಿ ಸುಗಮ ಸಂಚಾರಕ್ಕೆ ರಸ್ತೆ ಅಭಿವೃದ್ಧಿ ಪಡಿಸಲಾಗುವುದು. ಈ ಮಾರ್ಗವನ್ನು ದಾವಣಗೆರೆ ಹಾಗೂ ತುಮಕೂರು ನೇರ ರೈಲು ಮಾರ್ಗದಲ್ಲಿನ ಹೊಸ ರೈಲ್ವೇ ನಿಲ್ದಾಣಕ್ಕೆ ಸಂಪರ್ಕಿಸುವ ಚಿಂತನೆಯಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಗುಡ್ಡದೇಶ್ವರಪ್ಪ ಮಾತನಾಡಿ, ರಾಜ್ಯದಲ್ಲಿ ಸುಮಾರು 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ. ಅದರಲ್ಲಿ 23 ಮಹಿಳಾ ಕಾಲೇಜುಗಳಿದ್ದು, ನಮ್ಮಲ್ಲಿ ಹೆಚ್ಚು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಅಂತಿಮ ಪದವಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯರಾದ ರಕ್ಷಿತ ಜಿ. ಹುಲಗಿ, ವಿ.ಅನ್ನಪೂರ್ಣ ಅವರನ್ನು ಸನ್ಮಾನಿಸಲಾಯಿತು. ಐಕ್ಯುಎಸಿ ಸಂಚಾಲಕ ಪ್ರೊ.ಸಿ.ಬಸವರಾಜ, ಸಾಂಸ್ಕೃತಿಕ ಸಮಿತಿ ಸಂಚಾಲಕ ಪ್ರೊ.ಆರ್.ಲೀಲಾವತಿ, ಪ್ರಾಧ್ಯಾಪಕರಾದ ಡಾ.ಚನ್ನಕೇಶವ, ಡಾ.ಸಿದ್ದಪ್ಪ, ಶಕುಂತಲಾ, ಕುಮಾರಸ್ವಾಮಿ, ಪತ್ರಾಂಕಿತ ವ್ಯವಸ್ಥಾಪಕ ಕೆ.ಎನ್.ಬಸಣ್ಣಗೌಡ ಇತರರಿದ್ದರು.
ಸುಸಜ್ಜಿತ ಹಾಸ್ಟೆಲ್ ನಿರ್ಮಾಣ
ದೂರದ ಊರು, ನೆರೆಯ ಆಂಧ್ರಪ್ರದೇಶದಿಂದ ನರ್ಸಿಂಗ್ ಹಾಗೂ ಇತರೆ ಕೋರ್ಸ್‌ಗಳ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳು ನಗರಕ್ಕೆ ಬರುತ್ತಿದ್ದಾರೆ. ಹೀಗಾಗಿ ನಗರದಲ್ಲಿ ತ್ರಿಸ್ಟಾರ್ ಹೋಟೆಲ್ ಮಾದರಿಯಲ್ಲಿ ಸುಸಜ್ಜಿತವಾದ ವಸತಿನಿಲಯಗಳನ್ನು ನಿರ್ಮಿಸಲಾಗುವುದು ಎಂದು ತಿಪ್ಪಾರೆಡ್ಡಿ ಭರವಸೆ ನೀಡಿದರು.