ಜಿಲ್ಲೆ

ರಸ್ತೆ ಅಗೆಯುವ ಮುನ್ನ ಮಾರ್ಕ್ಸ್ ತಂತ್ರಾಂಶಕ್ಕೆ ಮಾಹಿತಿ : ಅನಗತ್ಯ ಓಎಫ್ ಸಿ ಕೇಬಲ್ ಕಟ್ ಮಾಡಲು ಬ್ರೇಕ್

satishvml

ಬೆಂಗಳೂರು : ನಗರದಲ್ಲಿ ಯಾವುದೇ ಇಲಾಖೆಗಳಿಂದ ರಸ್ತೆ ಅಗೆಯುವಾಗ ಮಾರ್ಕ್ಸ್ (ಎಂಎಆರ್‌ಸಿಎಸ್) ತಂತ್ರಾಂಶಕ್ಕೆ ಕಡ್ಡಾಯವಾಗಿ ಮಾಹಿತಿ ಭರ್ತಿ ಮಾಡಬೇಕು. ಈ ಮೂಲಕ ಓಎಫ್ ಸಿ ಕೇಬಲ್ ಕತ್ತರಿಸುವಿಕೆಯಿಂದ ಆಗುವ ತೊಂದರೆಗಳನ್ನು ನಿವಾರಿಸಬಹುದು ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಸೂಚಿಸಿದ್ದಾರೆ.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸರ್ವೀಸ್ ಪ್ರೊವೈಡರ್ ಮುಖ್ಯಸ್ಥರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಆಯುಕ್ತರು, ನಗರದಲ್ಲಿ ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ, ಸ್ಮಾರ್ಟ್ ಸಿಟಿ ಸೇರಿ ವಿವಿಧ ಇಲಾಖೆಗಳಿಂದ ರಸ್ತೆ ಅಗೆಯುವಾಗ ಮಾರ್ಕ್ಸ್ (ಎಂಎಆರ್‌ಸಿಎಸ್) ತಂತ್ರಾಂಶಕ್ಕೆ ಮಾಹಿತಿ ಭರ್ತಿ ಮಾಡಬೇಕು. ಈ ಬಗ್ಗೆ ಎಲ್ಲ ಸರ್ವಿಸ್ ಪ್ರೊವೈಡರ್ ಸಂಸ್ಥೆಗಳ ಗಮನಕ್ಕೆ ತರುವ ಮೂಲಕ ಅಲ್ಲಿ ಕೇಬಲ್‌ಗಳಿದ್ದರೆ, ಕೂಡಲೆ ಬದಲಿ ವ್ಯವಸ್ಥೆ ಮಾಡಿಕೊಳ್ಳಲು ಅವಕಾಶ ನೀಡಬೇಕು. ಹೀಗಾಗಿ, ಯಾವುದೇ ಕಾಮಗಾರಿಗಳ ಕೈಗೊಳ್ಳುವ ಮಾರ್ಕ್ಸ್ ತಂತ್ರಾಂಶಕ್ಕೆ ಮಾಹಿತಿ ನೀಡಿ, ಕೇಬಲ್ ಕತ್ತರಿಸವ ತೊಂದರೆಗಳನ್ನು ತಪ್ಪಿಸಬೇಕು ಎಂದು ತಿಳಿಸಿದರು.

ಸಭೆಯ ಕುರಿತು ವಿಜಯವಾಣಿಗೆಯೊಂದಿಗೆ ಮಾನತನಾಡಿದ ಆಯುಕ್ತರು, ಕೋವಿಡ್ ಲಾಕ್‌ಡೌನ್ ದಿನಗಳಿಂದ ಈವರೆಗೂ ಲಕ್ಷಾಂತರ ಉದ್ಯೋಗಿಗಳು ಮನೆಯಿಂದಲೇ ಕೆಲಸ (ವರ್ಕ್ ಪ್ರಮ್ ಹೋಂ) ಮಾಡುತ್ತಿದ್ದಾರೆ. ಆದರೆ, ವಿವಿಧ ಇಲಾಖೆಗಳಿಂದ ರಸ್ತೆ, ಸೇತುವೆ, ಕುಡಿಯುವ ನೀರು, ಚರಂಡಿಗಳ ನಿರ್ಮಾಣ ಕಾಮಗಾರಿಗೆ ರಸ್ತೆ ಅಗೆದು ಓಎ್ಸಿ ಕೇಬಲ್‌ಗಳನ್ನು ಕತ್ತರಿಸಲಾಗುತ್ತಿದೆ. ಇದರಿಂದ ಇಂಟರ್‌ನೆಟ್, ಟಿವಿ ಹಾಗೂ ಫೋನ್ ಸಂಪರ್ಕ ಒದಗಿಸಲಾಗುತ್ತಿಲ್ಲ ಎಂದು ಸರ್ಕಾರಕ್ಕೆ ದೂರುಗಳು ಬಂದಿವೆ. ಹೀಗಾಗಿ, ಸರ್ವಿಸ್ ಪ್ರೊವೈಡರ್ ಮುಖ್ಯಸ್ಥರೊಂದಿಗೆ ಸಭೆ ನಡೆಸುವಂತೆ ಸರ್ಕಾರ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಸಭೆ ನಡೆಸಲಾಗಿದ್ದು, ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.