ಕೊಪ್ಪ: ಶೃಂಗೇರಿ ಕ್ಷೇತ್ರದಲ್ಲಿ ಕಳಪೆ ಕಾಮಗಾರಿಗಳಿಂದ ಹಾಳಾದ ರಸ್ತೆಗಳ ಬಗ್ಗೆ ಆಗಾಗ ಸುದ್ದಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿಯೂ ಟ್ರೋಲ್‌ಗಳಾಗುತ್ತಿವೆ. ಈ ಸಾಲಿಗೆ ಕೊಪ್ಪದ ನುಗ್ಗಿ ಗ್ರಾಪಂ ವ್ಯಾಪ್ತಿಯ ಮತ್ತೊಂದು ರಸ್ತೆ ಸೇರ್ಪಡೆಯಾಗುತ್ತಿದೆ. ಈ ರಸ್ತೆಗೆ ಸರ್ಕಾರದಿಂದ ಯಾವುದೇ ಅನುದಾನ ಬಿಡುಗಡೆಯಾಗದೇ ಡಾಂಬರ್ ಹಾಕಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ನುಗ್ಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಸಸಿ ಮಾರ್ಗವಾಗಿ ನುಗ್ಗಿ, ಬೇರುಕೊಡಿಗೆ ಈಶ್ವರ ದೇವಸ್ಥಾನ ಸಂಪರ್ಕಿಸುವ ರಸ್ತೆಗೆ ಡಾಂಬರ್ ಹಾಕಲಾಗುತ್ತಿದೆ. ಆದರೇ, ಲೋಕೋಪಯೋಗಿ ಇಲಾಖೆ, ಲ್ಯಾಂಡ್ ಆರ್ಮಿ, ಜಿಪಂ ಇಂಜಿನಿಯರಿಂಗ್ ಹಾಗೂ ಇತರ ಇಲಾಖೆಯಿಂದ ರಸ್ತೆಗೆ ಅನುದಾನ ಮಂಜೂರೂ ಆಗಿಲ್ಲ. ಟೆಂಡರ್‌ನ್ನೂ ಕರೆದಿಲ್ಲ.
ಅನುದಾನವಿಲ್ಲದೇ ನಡೆಯುತ್ತಿರುವ ರಸ್ತೆ ಕೆಲಸ ಕಳಪೆಯಾಗಿದೆ. ಕೈ ಯಲ್ಲಿ ಕಿತ್ತರೂ ಡಾಂಬರ್ ಎದ್ದು ಬರುತ್ತಿದೆ. ಮಳೆಯಾಗುತ್ತಿರುವಾಗಲೇ ಡಾಂಬರ್ ಹಾಕಲಾಗುತ್ತಿರುವ ವಿಡಿಯೋ ವೈರಲ್ ಆಗಿದೆ. ಸಾಮಾನ್ಯವಾಗಿ ಮಳೆಯಾಗುವಾಗ ರಸ್ತೆಗೆ ಡಾಂಬರ್ ಹಾಕುವುದಿಲ್ಲ. ಆದರೆ ಈ ರಸ್ತೆ ಕಾಮಗಾರಿ ಮಳೆಯಲ್ಲೂ ನಡೆಯುತ್ತಿದೆ.
ಸರ್ಕಾರದ ಯಾವುದೇ ಇಲಾಖೆಗಳಿಂದ ಅನುದಾನ ನಿಗದಿಪಡಿಸದೇ ಕಾಮಗಾರಿ ಮಾಡುತ್ತಿರುವುದರ ಹಿಂದೆ ಹಣ ದುರುಪಯೋಗದ ಉದ್ದೇವಿದೆ ಎನ್ನಲಾಗಿದೆ. ಕಾಮಗಾರಿ ನಡೆಸಿದ ನಂತರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಬಿಲ್ ಮಾಡಿಸಿಕೊಂಡು ಹಣ ಲಪಟಾಯಿಸುವ ತಂತ್ರವನ್ನು ಆಡಳಿತ ಪಕ್ಷದ ಮುಖಂಡರು ಮಾಡುತ್ತಿದ್ದಾರೆ ಎಂದು ದೂರು ಕೇಳಿ ಬಂದಿದೆ.