ಎರಡು ತಿಂಗಳಿಂದ ಊರಿನ ಮಾರ್ಗ ಬಂದ್
ಅಪಾಯ ಲೆಕ್ಕಿಸದೆ ಮಳೆ ನೀರಲ್ಲೇ ಸಂಚಾರ
ಆತ್ರಾಡಿ ಗ್ರಾಪಂ ವ್ಯಾಪ್ತಿಯ ಹಿರೇಬೆಟ್ಟು ಪಟ್ಲಬೈಲು ಜನರ ರೋದನಕ್ಕೆ ಕೊನೆಯಿಲ್ಲವೇ? ಊರಿಗೆ ಸಂಪರ್ಕ ರಸ್ತೆ ಇಲ್ಲದೆ ಪರದಾಡುತ್ತಿರುವ ಜನರ ಹೀನಾಯ ಸ್ಥಿತಿ ಆಡಳಿತ ವರ್ಗಕ್ಕೆ ಕಾಣಿಸದೇ ಎಂದು ಊರಿನವರು ಪ್ರಶ್ನಿಸುತ್ತಿದ್ದಾರೆ.
ಈ ಗ್ರಾಮದ ಮೂಲಕ ಮಣಿಪಾಲದಿಂದ ಬಜಪೆ ವಿಮಾನ ನಿಲ್ದಾಣಕ್ಕೆ ಸಾಗುವ ರಾಜ್ಯ ಹೆದ್ದಾರಿ ಹಾದು ಹೋಗಿದ್ದು, ಈ ಮಾರ್ಗದಲ್ಲಿ ಕಿರುಸೇತುವೆ ಕಾಮಗಾರಿ ನಡೆದಿದೆ. ನಿರಂತರ ಮಳೆಯಿಂದಾಗಿ ಕಾಮಗಾರಿ ಸ್ಥಳದಲ್ಲಿ ಕೃತಕ ಫಾಲ್ಸ್ ನಿರ್ಮಾಣವಾಗಿದ್ದು, ಸಂಚಾರ ಮತ್ತಷ್ಟು ದುಸ್ತರವಾಗಿದೆ.
ದಿನವೂ ಜನರ ಪರದಾಟ
ಸೇತುವೆ ನಿರ್ಮಾಣ ಕಾಮಗಾರಿಯಿಂದಾಗಿ ಊರಿನ ಸಂಪರ್ಕದ ರಸ್ತೆ ಸಂಪೂರ್ಣ ಬಂದ್ ಆಗಿದೆ. ಹೀಗಾಗಿ ನಾಲ್ಕೆ$ದು ಕಿಮೀ ಸುತ್ತುಬಳಸಿ ಜನರು ಊರು ಸೇರಬೇಕಿದೆ. ಸೇತುವೆ ಬಳಿಯೇ ಪರ್ಯಾಯ ರಸ್ತೆ ಮಾಡಿದ್ದರೂ ಅದು ಭಾರಿ ಮಳೆಗೆ ಕೊಚ್ಚಿ ಹೋಗಿದೆ. ರಸ್ತೆ ಬಂದ್ ಮಾಡಿದ್ದರಿಂದ ಬಸ್ಗಳೂ ಗ್ರಾಮದತ್ತ ಬರುತ್ತಿಲ್ಲ. ಶಾಲೆಯೂ ಆರಂಭಗೊಂಡಿದ್ದು ಮಕ್ಕಳನ್ನು ಕಳುಹಿಸಿಲು ಪಾಲಕರು ದಿನವೂ ಹರಸಾಹಸ ಪಡುವಂತಾಗಿದೆ.
ಮಳೆ ನೀರಲ್ಲೇ ಬೈಕ್ ಸಂಚಾರ
ಊರಿಗೆ ಬರಲು ಅಥವಾ ಊರಿನಿಂದ ಪೇಟೆಯ ಕಡೆ ಸಾಗಲು ಸುತ್ತುಬಳಸಿ ಹೋಗುವುದನ್ನು ತಪ್ಪಿಸಿಕೊಳ್ಳಲು ಇದೀಗ ಊರಿನ ಜನರು ಸೇತುವೆ ಕಾಮಗಾರಿ ಪಕ್ಕದ ಪರ್ಯಾಯ ರಸ್ತೆಯಲ್ಲೇ ಅಪಾಯಕಾರಿಯಾಗಿ ಸಾಗುತ್ತಿದ್ದಾರೆ. ಮಳೆ ನೀರು ನದಿಯಂತೆ ರಭಸವಾಗಿ ಹರಿಯುತ್ತಿದ್ದು, ಆ ನೀರಿನಲ್ಲಿಯೇ ಬೈಕ್ ಓಡಿಸುತ್ತಿದ್ದಾರೆ. ಸ್ವಲ್ಪ ಎಡವಿದರೂ ಸಹ ಪ್ರಾಣಕ್ಕೆ ಅಪಾಯ ಸಾಧ್ಯತೆ ಇದೆ.
ಕಾಮಗಾರಿ ಪೂರ್ಣಗೊಳಿಸಲು ಮಳೆ ಅಡ್ಡಿ
ಸೇತುವೆ ಕಾಮಗಾರಿ ಪೂರ್ಣಗೊಳಿಸಲು ನಿರಂತರ ಮಳೆ ಅಡ್ಡಿಯಾಗುತ್ತಿದೆ. ಮುಂಗಾರು ಮಳೆ ಪೂರ್ವದಲ್ಲೇ ಮಳೆ ಆಗಮಿಸಿ ನಿರ್ಮಿಸುತ್ತಿದ್ದ ಸೇತುವೆಯ ಒಂದು ಭಾಗ ಕುಸಿದಿತ್ತು. ಮೇ 25ಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಕಾಮಗಾರಿ ಸ್ಥಳದಲ್ಲಿ ಬಂಡೆಕಲ್ಲು ಅಡ್ಡಿ ಬಂದಿದ್ದರಿಂದ ಹಾಗು ನಿರಂತರ ಮಳೆಯಿಂದ ಕಾಮಗಾರಿಗೆ ತೊಡಕಾಗಿದೆ. ಸ್ಥಳಿಯರು ಕಾಮಗಾರಿ ವಿಳಂಬ ಖಂಡಿಸಿ ಕಳೆದ ತಿಂಗಳು ಮಳೆಯಲ್ಲೇ ಪ್ರತಿಭಟಿಸಿದ್ದರು. ಬಳಿಕ ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಮೇ 31ರಂದು ಭೇಟಿ ನೀಡಿ, ಕಾಮಗಾರಿ ಬೇಗ ಮುಗಿಸುವಂತೆ ಸೂಚಿಸಿದ್ದರು. ಗುತ್ತಿಗೆದಾರರು ಜೂ.25ರ ಒಳಗೆ ಕಾಮಗಾರಿ ಮುಗಿಸುವುದಾಗಿ ಭರವಸೆ ನೀಡಿದ್ದರು. ಆದರೆ, ನಿರಂತರ ಮಳೆಯಿಂದಾಗಿ ಕಾಮಗಾರಿ ಮುಂದುವರಿಸಲು ಆಗುತ್ತಿಲ್ಲ.
ಪ್ರಧಾನಿಗೆ ಪತ್ರ ಬರೆಯಲು ನಿರ್ಧಾರ
ಸಣ್ಣದೊಂದು ಸೇತುವೆ ನಿರ್ಮಿಸಲು ಗ್ರಾಮೀಣ ಭಾಗದ ರಸ್ತೆಯನ್ನೇ ಬಂದ್ ಮಾಡಿದ್ದರಿಂದ ಜನಜೀವನಕ್ಕೆ ನಿತ್ಯ ತೊಂದರೆಯಾಗಿದೆ. ಸೇತುವೆಯ ಎಡ-ಬಲದಲ್ಲಿರುವ ಜಮೀನು ನದಿಯಂತಾಗಿದ್ದು, ಕೃಷಿ ಚಟುವಟಿಕೆಗೂ ತೊಡಕಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರಿಗೆ ತೊಂದರೆ ಆಗುತ್ತಿರುವ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲು ತೀರ್ಮಾನಿಸಿದ್ದೇವೆ ಎಂದು ಪಟ್ಲಬೈಲು ಜನರು ತಿಳಿಸಿದ್ದಾರೆ.
ಪಟ್ಲಬೈಲು ಜನರಿಗೆ ಊರಿಗೆ ಹೋಗಲು ರಸ್ತೆಯೇ ಇಲ್ಲದಾಗಿದೆ. ಕೋಡಿಬೆಟ್ಟು, ಪೆರ್ಣಂಕಿಲ, ಗುಂಡುಪಾದೆ ಹಾಗೂ ಮರ್ಣೆ ಮಾರ್ಗದ ಮೂಲಕ ಸುತ್ತು ಬಳಸಿ ಬರಬೇಕಿದೆ. ಸೇತುವೆ ಪಕ್ಕದಲ್ಲೇ ಪರ್ಯಾಯ ರಸ್ತೆಯಲ್ಲಿ ಬೈಕ್, ಆಟೋದಂತಹ ಸಣ್ಣ ವಾಹನ ಸಂಚರಿಸಲು ಆಗುತ್ತಿತ್ತು. ಇದೀಗ ನಿರಂತರ ಮಳೆಯಿಂದಾಗಿ ಕಾಮಗಾರಿ ಸ್ಥಳದಲ್ಲಿ ಫಾಲ್ಸ್ ಸೃಷ್ಟಿಯಾಗಿದೆ. ಹೀಗಾಗಿ ಐದಾರು ಊರು ಸುತ್ತಿಯೇ ನಮ್ಮೂರಿಗೆ ಹೋಗಬೇಕಿದೆ.
| ರಾಮದಾಸ ಪ್ರಭು. ಜಡ್ಡು ಗ್ರಾಮಸ್ಥ