ಕೊಳ್ಳೇಗಾಲ ಪಟ್ಟಣದ ಸಿಡಿಎಸ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಮ್ಯಾನ್ಯುವಲ್ ಸ್ಕ್ಯಾವೆಂಜರ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ದೇಶಿಸಿ ನಗರಸಭೆ ಪೌರಾಯುಕ್ತ ಎ.ರಮೇಶ್ ಮಾತನಾಡಿದರು. 
ಜಿಲ್ಲೆ

ಪೌರಕಾರ್ಮಿಕರ ಕಾಲನಿಗೆ ರಸ್ತೆ, ಚರಂಡಿ ಸೌಕರ್ಯ

ಕೊಳ್ಳೇಗಾಲ: ಪಟ್ಟಣದಲ್ಲಿರುವ ಸಿಡಿಎಸ್ ಭವನದಲ್ಲಿ ಮಂಗಳವಾರ ನಗರಸಭೆ ಕಾರ್ಯಾಲಯ, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಹಣಕಾಸು ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಮ್ಯಾನ್ಯುವಲ್ ಸ್ಕ್ಯಾವೆಂಜರ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ನಗರಸಭೆ ಪೌರಾಯುಕ್ತ ರಮೇಶ್ ಮಾತನಾಡಿ, ಪೌರಕಾರ್ಮಿಕರ ಕಾಲನಿಗೆ ರಸ್ತೆ, ಚರಂಡಿ, ಮನೆ ನಿರ್ಮಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ವಿಚಾರದಲ್ಲಿ ಜಿಲ್ಲಾಧಿಕಾರಿ ಸಹ ಆಸಕ್ತಿ ಹೊಂದಿದ್ದಾರೆ. ಈಗಾಗಲೇ 40 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ. ನಿವೇಶನ ಇಲ್ಲದವರಿಗೆ ನಿವೇಶನ ಕೊಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸರ್ಕಾರದ ಯಾವುದೇ ಜಾಗ ಲಭ್ಯ ಇಲ್ಲದಿದ್ದರಿಂದ ಖಾಸಗಿಯವರು ಯಾರಾದರೂ ಜಮೀನು ಕೊಡಲು ಬಂದರೆ ಖರೀದಿಸಿ ಸೈಟ್ ಹಂಚಲು ವ್ಯವಸ್ಥೆ ಮಾಡಲಾಗುವುದು. ಯುಜಿಡಿ ವಿಭಾಗದಲ್ಲಿ ಕೆಲಸದ ಒತ್ತಡ ಹೆಚ್ಚಿದೆ. ಎರಡು ಆಟೋ ಟಿಪ್ಪರ್, ಒಂದು ಜೆಟ್ಟಿಂಗ್ ಮಿಷನ್ ಖರೀದಿಸಲು ಸಭೆಯಲ್ಲಿ ಅನುಮತಿ ಪಡೆಯಲಾಗಿದೆ. ಯುಜಿಡಿ ವಿಭಾಗಕ್ಕೆ ಹೆಚ್ಚುವರಿಯಾಗಿ 18 ಮಂದಿ ನೇಮಕ ಮಾಡಲು ಟೆಂಡರ್ ಕರೆಯಲಾಗಿದೆ. ಬರೀ ಕೈಯಲ್ಲಿ ಚರಂಡಿ ಹಾಗೂ ಯುಜಿಡಿ ಕೆಲಸ ಮಾಡಬಾರದು. ಯಾರಾದರೂ ಒತ್ತಡ ಹೇರಿದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವಾರ್ಡ್ ಸದಸ್ಯ ರಾಘವೇಂದ್ರ ಮಾತನಾಡಿ, ಶಾಸಕ ಎಆರ್.ಕೃಷ್ಣಮೂರ್ತಿ ಅವರು ಪೌರಕಾರ್ಮಿಕರ ಕಾಲನಿಗೆ ಹತ್ತು ಲಕ್ಷ ಹಣ ಕೊಡುವುದಾಗಿ ಒಪ್ಪಿರುವುದರಿಂದ ಮುಂದಿನ ದಿನಗಳಲ್ಲಿ ಈ ಹಣವನ್ನು ಕಾಲನಿ ಅಭಿವೃದ್ಧಿಗೆ ಬಳಸಲಾಗುವುದು ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಪೌರಕಾರ್ಮಿಕರ ಸಂಘ ಅಧ್ಯಕ್ಷ ಡಿ.ಆರ್.ರಾಜು ಮಾತನಾಡಿ, ಮಂಡ್ಯ, ಮೈಸೂರಿನಲ್ಲಿ ಪೌರಕಾರ್ಮಿಕರಿಗೆ ಬೆಳಗಿನ ಉಪಾಹಾರ ವ್ಯವಸ್ಥೆ ಮಾಡಿರುವಂತೆ ನಿಮ್ಮ ನಗರಸಭೆ ವತಿಯಿಂದ ಉಪಾಹಾರ ವ್ಯವಸ್ಥೆ ಮಾಡಬೇಕು. ಇದರಿಂದ ಕಾರ್ಮಿಕರು ಉತ್ಸಾಹದಿಂದ ಕೆಲಸ ಮಾಡಲು ಅನುಕೂಲವಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ನಗರಸಭೆ ಪರಿಸರ ಇಂಜಿನಿಯರ್ ಪ್ರಸನ್ನ, ಆರೋಗ್ಯಾಧಿಕಾರಿ ಚೇತನ್, ಭೂಮಿಕಾ, ಸಫಾಯಿ ಕರ್ಮಚಾರಿ ಜಿಲ್ಲಾ ಸಮಿತಿ ಸದಸ್ಯೆ ತಂಗಮ್ಮ, ಕರ್ನಾಟಕ ರಾಜ್ಯ ಪೌರಕಾರ್ಮಿಕರ ಸಂಘದ ಉಪಾಧ್ಯಕ್ಷ ವಿಜಯ ಕುಮಾರ್, ಸಫಾಯಿ ಕರ್ಮಚಾರಿ ಜಿಲ್ಲಾ ಜಾಗೃತಿ ಸದಸ್ಯರಾದ ಪಳನಿಸ್ವಾಮಿ, ಆರುಗ್ಮಂ ಮತ್ತಿತರಿದ್ದರು.