ವಿಜಯವಾಣಿ ಸುದ್ದಿಜಾಲ ಮಧುರೆ
ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆಯಲು ಹೊರಟಿದ್ದ ವೃದ್ಧ ದಂಪತಿ ಯಮ ಸದೃಶವಾಗಿ ಬಂದ ಕ್ಯಾಂಟರ್‌ಗೆ ಬಲಿಯಾಗಿ ಸ್ಮಶಾನ ಸೇರಿದ ಪ್ರಕರಣ ನಡೆದಿದೆ.
ಮಧುರೆ ಹೋಬಳಿಯ ರಾಮದೇವನಹಳ್ಳಿ ಮಾರ್ಗದಲ್ಲಿ ಅಪಘಾತ ಸಂಭವಿಸಿದ್ದು, ರಾಮದೇವನಹಳ್ಳಿ ನಿವಾಸಿಗಳಾದ ಅನ್ನದಾನಪ್ಪ (66) ಹಾಗೂ ಪತ್ನಿ ನಾಗರತ್ನಮ್ಮ (55) ಸಾವನ್ನಪ್ಪಿದ್ದಾರೆ.
ವೇಗವಾಗಿ ಬಂದು ಡಿಕ್ಕಿ: ಟಿವಿಎಸ್ ದ್ವಿಚಕ್ರವಾಹನದಲ್ಲಿ ಮಧುರೆಯ ಶ್ರೀ ಶನಿಮಹತ್ಮಾ ದೇಗುಲಕ್ಕೆ ಹೊರಟಿದ್ದ ವೃದ್ಧ ದಂಪತಿ ರಾಮದೇವನಹಳ್ಳಿ ಮಾರ್ಗದ ತಿರುವಿನಲಿನಲ್ಲಿನ ಕನ್ನಮಂಗಲ ಗೇಟ್ ಪೆಟ್ರೋಲ್ ಬಂಕ್ ಬಳಿ ತಿರುವು ಪಡೆಯುವ ವೇಳೆ ಎದುರಿನಿಂದ ವೇಗವಾಗಿ ಬಂದ ಕ್ಯಾಂಟರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿಯೊಡೆದಿದೆ. ಡಿಕ್ಕಿ ರಭಸಕ್ಕೆ ದಂಪತಿಯ ತಲೆಗಳಿಗೆ ತೀವ್ರ ಪೆಟ್ಟಾಗಿ ರಕ್ತಸ್ರಾವವಾಗಿದೆ. ಅಪಘಾತ ಗಮನಿಸಿದ ಸ್ಥಳೀಯರು ತಕ್ಷಣ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ದುರಾದೃಷ್ಟವಶಾತ್ ಚಿಕಿತ್ಸೆ ಲಕಾರಿಯಾಗದೆ ಅಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ವಿಷಯ ತಿಳಿದ ದೊಡ್ಡಬೆಳವಂಗಲ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ವಾಹನವನ್ನು ಜಪ್ತಿ ಮಾಡಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ದೊಡ್ಡಬೆಳವಂಗಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರ ನಿಯಮ ಗೌಣ: ದೊಡ್ಡಬಳ್ಳಾಪುರ ತಾಲೂಕು ವ್ಯಾಪ್ತಿಯ ಮಧುರೆ, ದೊಡ್ಡಬೆಳವಂಗಳ ಭಾಗಗಳಲ್ಲಿ ಜಲ್ಲಿಕಲ್ಲು, ಮರಳು ಸೇರಿ ಇನ್ನಿತರ ವಸ್ತುಗಳ ಸರಕು ಸಾಗಣೆ ವಾಹನಗಳಿಗೆ ಅಂಕುಶವಿಲ್ಲದಂತಾಗಿದೆ. ಇಂಥ ವಾಹನ ಚಾಲಕರು ಯಾವುದೇ ಸಂಚಾರ ನಿಯಮ ಪಾಲಿಸುತ್ತಿಲ್ಲ. ಅತಿವೇಗದ ಚಾಲನೆ ಸಾಮಾನ್ಯವಾಗಿದ್ದು, ಪಾದಚಾರಿಗಳು, ದ್ವಿಚಕ್ರವಾಹನ ಸವಾರರು ಪ್ರಾಣವನ್ನು ಮುಷ್ಟಿಯಲ್ಲಿಡಿದುಕೊಂಡು ಸಂಚರಿಸಬೇಕಿದೆ. ಸ್ಥಳೀಯ ಪೊಲೀಸರು ಈ ಬಗ್ಗೆ ನಿಗಾವಹಿಸಬೇಕು ಎಂದು ಸ್ಥಳೀಯರು ಅಪಘಾತ ಸ್ಥಳಕ್ಕೆ ಭೇಟಿ ನೀಡಿದ್ದ ಡಿವೈಎಸ್‌ಪಿ ರವಿ ಅವರನ್ನು ಒತ್ತಾಯಿಸಿದರು.