ತುಮಕೂರು: ಹೆಬ್ಬೂರು ಕೆರೆಯ 35 ಗುಂಟೆಯಷ್ಟು ಜಾಗವನ್ನು ಭೂಗಳ್ಳರು ನುಂಗಿರುವುದನ್ನು ಸರ್ವೇ ಇಲಾಖೆ ಪತ್ತೆ ಹಚ್ಚಿದೆ. ಸರ್ವೇ ನಂ.158ರಲ್ಲಿರುವ ಕೆರೆಯ 35 ಕುಂಟೆ ಜಾಗವನ್ನು ಖಾಸಗಿ ಲೇಔಟ್‌ಗೆ ರಸ್ತೆ ನಿರ್ಮಿಸಲು ಒತ್ತುವರಿ ಮಾಡಿರುವ ವರದಿ ಇದ್ದರೂ ಈವರೆಗೆ ಒತ್ತುವರಿ ತೆರವಿಗೆ ಜಿಲ್ಲಾಡಳಿತ ಮೀನಮೇಷ ಎಣಿಸುತ್ತಿರುವುದು ಹಲವು ಗುಮಾನಿಗಳಿಗೆ ಎಡೆಮಾಡಿಕೊಟ್ಟಿದೆ.
ಕೆರೆ ಒತ್ತುವರಿ ತೆರವಿಗಾಗಿ 2019ರಿಂದ ಬೆಳಗುಂಬ ಗ್ರಾಪಂ ಮಾಜಿ ಸದಸ್ಯ ವೆಂಕಟೇಶ್ ಹೋರಾಟ ನಡೆಸಿದ್ದು, ಭೂಗಳ್ಳರು ಕೆರೆ ಅಂಗಳ ನುಂಗಿ ಹಾಕಿರುವುದಾಗಿ ಮುಖ್ಯಮಂತಿಗೆ ಪತ್ರ ಬರೆದು ಕೆರೆ ಸಂರಕ್ಷಣೆ ಮಾಡುವಂತೆ ಒತ್ತಾಯಿಸಿದ್ದರು. ಮುಖ್ಯಮಂತ್ರಿ ಕಚೇರಿಯು ಈ ದೂರಿನ ಅರ್ಜಿಯನ್ನು ಕಂದಾಯ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ರವಾನಿಸಿ ಸೂಕ್ತ ಕ್ರಮಕ್ಕೆ ಸೂಚಿಸಿತ್ತು. ಅರ್ಜಿ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಗೆ ರವಾನೆಯಾಯಿತು. ಆ ಪತ್ರ ಕಚೇರಿಗಳ ನಡುವೆ ಓಡಾಡಿತೇ ವಿನಾಃ ಅದರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕಿದರು.
ಸರ್ವೇ ಇಲಾಖೆಯು ಈ ಕೆರೆಯಲ್ಲಿ 35 ಕುಂಟೆ ಜಾಗ ರಸ್ತೆಗಾಗಿ ಒತ್ತುವರಿ ಆಗಿದೆಯೆಂದು ಅಧಿಕೃತವಾಗಿ ತಹಸೀಲ್ದಾರ್‌ಗೆ ವರದಿ ನೀಡಿದ್ದರೂ ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ. ಗ್ರಾಮಲೆಕ್ಕಿಗರು ಹಾಗೂ ಕಂದಾಯ ನಿರೀಕ್ಷಕರು ಸಹ ಕೆರೆ ಅಂಗಳ ರಸ್ತೆಗಾಗಿ ಒತ್ತುವರಿ ಆಗಿರುವುದನ್ನು ಲಿಖಿತವಾಗಿ ದೃಢಪಡಿಸಿದ್ದಾರೆ. ಅಲ್ಲದೆ, ಈವರೆಗೆ ಯಾವುದೇ ಕ್ರಮವನ್ನು ಕೈಗೊಳ್ಳಲಾಗಿಲ್ಲ ಎಂದು ವರದಿಯಲ್ಲಿ ನಮೂದಿಸಿದ್ದಾರೆ. ಇಷ್ಟಾದರೂ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಕೆರೆ ಒತ್ತುವರಿಗೆ ಸಂಬಂಧಿಸಿದ ಸಿಎಂ ಕಚೇರಿಯ ಪತ್ರ ಮಾತ್ರ ಜಿಲ್ಲಾಧಿಕಾರಿ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ಸಣ್ಣ ನೀರಾವರಿ ಇಲಾಖೆ ಕಚೇರಿ, ತಹಸೀಲ್ದಾರ್ ಕಚೇರಿಗಳ ನಡುವೆ ಸುತ್ತಾಡುತ್ತಿದೆ ವಿನಃ ಒತ್ತುವರಿ ತೆರವು ಮಾತ್ರ ಆಗಿಲ್ಲ. ರಾಜಕೀಯ ಪ್ರಭಾವಕ್ಕೆ ಸಿಲುಕಿ ಅಧಿಕಾರಿಗಳು ಕೇವಲ ಪತ್ರ ವ್ಯವಹಾರದಲ್ಲೇ ಕಾಲ ಕಳೆಯುತ್ತಿದ್ದಾರೆ.
ಕೆರೆ ಜಾಗ ಒತ್ತುವರಿ ಆಗಿದ್ದು, ಅದನ್ನು ತೆರವುಗೊಳಿಸುವಂತೆ ಸಾರ್ವಜನಿಕ ಹಿತದೃಷ್ಟಿಯಿಂದ ನಾನು ಅರ್ಜಿ ಸಲ್ಲಿಸಿದ್ದೆ. ಸರ್ಕಾರದ ಸರ್ವೇ ಇಲಾಖೆ, ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ವರದಿಯಲ್ಲಿ ಒತ್ತುವರಿ ಆಗಿರುವುದನ್ನು ಖಚಿತಪಡಿಸಿದ್ದಾರೆ. ಹೀಗಿದ್ದರೂ ಕಳೆದ ಒಂದೂವರೆ ವರ್ಷದಿಂದ ಒತ್ತುವರಿ ತೆರವುಗೊಳಿಸುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ, ರಾಜಕೀಯ ಒತ್ತಡದಿಂದಾ ಅಧಿಕಾರಿಗಳು ಸರ್ಕಾರಿ ಜಾಗ ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಬಿ.ಎಸ್.ವೆಂಕಟೇಶ್ ಗ್ರಾಪಂ ಮಾಜಿ ಸದಸ್ಯ